Big NewsImportant
Trending

ನಿರ್ಲಕ್ಷ್ಯಕ್ಕೆ ಒಳಗಾದ ಇಂಡೋ ಪಾಕ್ ಯುದ್ಧದ ನಿವೃತ್ತ ನೌಕೆ: ಕಣ್ತೆರದು ನೊಡಬೇಕಿದೆ ಆಡಳಿತ ವರ್ಗ

ಕಾರವಾರ: ಅದು ಭಾರತೀಯ ನೌಕಾಪಡೆಯ ಯುದ್ದಗಳಲ್ಲಿ ಸಕ್ರೀಯವಾಗಿದ್ದ ಯುದ್ದ ನೌಕೆ. ಮಾತ್ರವಲ್ಲದೆ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಮುಂಚೂಣಿಯಲ್ಲಿದ್ದು ಸೇನೆಗೆ ತನ್ನದೆಯಾದ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಇದೀಗ ಮ್ಯೂಸಿಯಂ ಆಗಿ ಮಾರ್ಪಡಿಸಲಾಗಿದೆ. ಆದರೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಈ ಯುದ್ದ ನೌಕೆ ನಿವೃತ್ತಿ ಬಳಿಕವೂ ಲಕ್ಷಾಂತರ ರೂಪಾಯಿ ಆದಾಯ ತರುತ್ತಿದ್ದರೂ ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುವಂತಾಗಿದೆ.

ಹಸೆ ಮಣೆ ಏರಿ ವರ್ಷವಾಗುವುದರೊಳಗೆ ಮಸಣದ ಹಾದಿ ತುಳಿದ ಮಹಿಳೆ| ಗಂಡ ಮತ್ತು ಗಂಡನ ಮನೆಯವರಿಂದಲೇ ಆತ್ಮಹತ್ಯೆಗೆ ಪ್ರೇರಣೆ ಆರೋಪ ?

ದೇಶದೆಲ್ಲೆಡೆ ಇಂಡೋ ಪಾಕ್ ವಿಜಯ ದಿವಸದ ಅಂಗವಾಗಿ ಡಿ.4 ರಂದು ಭಾರತೀಯ ನೌಕಾ ದಿನಾಚರಣೆಯನ್ನಾಗಿ ನಆಚರಣೆ ಮಾಡಲಾಗಿದೆ. ಕಾರವಾರದ ಐಎನ್ ಎಸ್ ಕದಂಬ ನೌಕಾನೆಲೆಯಲ್ಲಿಯೂ ಅದ್ದೂರಿಯಾಗಿ ನೇವಿ ಡೆ ಆಚರಣೆ ಮಾಡಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ಭಾಗವಹಿಸಿದ್ದರು. ಆದರೆ ಇಂತಹ ಸುಧೀನದ ನೆನಪಿನಲ್ಲಿ ಯುದ್ಧದ ವೇಳೆಗೆ ಪ್ರಮುಖ ಪಾತ್ರ ವಹಿಸಿದ್ದ ಚಾಪಲ್ ಯುದ್ಧ ನೌಕೆ ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ಸರಿಯಾದ ವ್ಯವಸ್ಥೆ ಇಲ್ಲದೆ ತುಕ್ಕು ಹಿಡಿದು ಮೂಲೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಐಎನ್ಎಸ್ ಚಾಪಲ್ ಭಾರತೀಯ ನೌಕಾಪಡೆಯಲ್ಲಿ 29 ವರ್ಷಗಳ ಸುದೀರ್ಘ ಸೇವೆಯ ಬಳಿಕ 2005ರ ಮೇ ತಿಂಗಳಲ್ಲಿ ನಿವೃತ್ತಿಯಾದ ಯುದ್ಧ ನೌಕೆ. ಕ್ಷಿಪಣಿ ಉಡಾವಣೆ ವ್ಯವಸ್ಥೆ ಹೊಂದಿರುವ ರಷ್ಯಾ ನಿರ್ಮಿತ ಈ ಚಾಪೆಲ್ ಯುದ್ದನೌಕೆಯನ್ನು 1976ರ ನವೆಂಬರ್ 4ರಂದು ಭಾರತೀಯ ನೌಕಾಪಡೆಯ ಸೇವೆಗೆ ಸೇರ್ಪಡೆಗೊಂಡಿಸಲಾಗಿತ್ತು. 1971ರ ಇಂಡೋ- ಪಾಕ್ ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ಮಾಡಲು ಮತ್ತು ಅರಬ್ಬಿ ಸಮುದ್ರದಲ್ಲಿ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಈ ಚಾಪೆಲ್ ಬಹುಮುಖ್ಯ ಪಾತ್ರ ವಹಿಸಿತ್ತು. ಇದು ಪಾಕಿಸ್ತಾನದ ವಾಣಿಜ್ಯ ರಾಜಧಾನಿಯನ್ನು ದುರ್ಬಲಗೊಳಿಸಿ, ಭಾರತದ ಅಂತಿಮ ವಿಜಯದಲ್ಲಿ ನೆರವಾಗಿತ್ತು. ಈ ಚಾಪಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ಈರ್ವರು ಸಿಬ್ಬಂದಿಗೆ ಪರಮ ವೀರ ಚಕ್ರ ಮತ್ತು 8 ವೀರ ಚಕ್ರಗಳನ್ನು ಪಡೆದಿದ್ದಾರೆ.

ಇನ್ನು 29 ವರ್ಷಗಳ ಸಾರ್ಥಕ ದೇಶ ಸೇವೆಯ ಬಳಿಕ 2005ರ ಮೇ 5ರಂದು ಇದನ್ನು ನಿವೃತ್ತಿಗೊಳಿಸಲಾಯಿತು. ನಂತರ ಒಂದು ವರ್ಷದ ಬಳಿಕ ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಮ್ಯೂಸಿಯಂ ಆಗಿ ಸ್ಥಾಪಿಸಲಾಗಿದೆ. ಸುಮಾರು 245 ಟನ್ ತೂಕ, 38.6 ಮೀಟರ್ ಉದ್ದ ಹಾಗೂ 7.6 ಮೀ. ಅಗಲ ಇರುವ ನೌಕೆ, ಗರಿಷ್ಠ ಗಂಟೆಗೆ 37 ನಾಟಿಕಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದ ನೌಕೆಯಲ್ಲಿ ಎರಡು 30 ಎಂಎo ಗನ್‌ಗಳು, ಒಂದು ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ಉಡಾವಣೆ, ನಾಲ್ಕು ಹಡಗು ವಿರೋಧಿ ಕ್ಷಿಪಣಿ ಲಾಂಚರ್‌ಗಳು ಇದರಲ್ಲಿವೆ. ಪ್ರತಿದಿನ ನೂರಾರು ಪ್ರವಾಸಿಗರು ಇದರ ವೀಕ್ಷಣೆಗೆಂದೇ ಕಾರವಾರಕ್ಕೆ ಭೇಟಿ ನೀಡುತ್ತಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ ಎನ್ನುತ್ತಾರೆ ಇಲ್ಲಿನ ಕ್ಯೂರೇಟರ್ ವಿಜಯ್.

ಇನ್ನು ಕಾರವಾರದಲ್ಲಿ ಚಾಪೆಲ್ ಯುದ್ಧನೌಕೆ ಪ್ರಮುಖ ಆಕರ್ಷಣೆಯ ಪ್ರಸಿದ್ಧಿ ಪ್ರವಾಸಿ ಕೇಂದ್ರ. ಆದರೆ ಸ್ಥಳೀಯ ಆಡಳಿತಕ್ಕೆ ಲಕ್ಷಾಂತರ ರೂಪಾಯಿ ಆದಾಯ ತರುತ್ತಿದ್ದರೂ ಸೂಕ್ತ ನಿರ್ವಹಣೆ ಇಲ್ಲದ ಕಾರಣ ನೌಕೆ ಎಲ್ಲೆಡೆ ತುಕ್ಕು ಹಿಡಿಯುತ್ತಿದೆ. ಒಳಭಾಗದಲ್ಲಿರುವ ಬ್ಯಾರಕ್‌ಗಳು, ಎಂಜಿನ್ ಕೊಠಡಿಗಳು, ಬಾಹ್ಯ ಬಂದೂಕುಗಳು ಸಮುದ್ರದ ಸನಿಹವೇ ಇರುವ ಕಾರಣ ತುಕ್ಕು ಹಿಡಿಯುತ್ತಿವೆ. ವಿಚಿತ್ರ ಅಂದ್ರೆ ಮಳೆಗಾಲದಲ್ಲಿ ನೌಕೆಗೆ ತಾಡಪಲ್ ಹೋದಿಕೆ ಹೊರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಮ್ಯೂಸಿಯಂನ ಪ್ರವೇಶ ದ್ವಾರದಲ್ಲೇ 15 ರೂ. ಪ್ರವೇಶ ಶುಲ್ಕ ಪಾವತಿಸಿ ತೆರಳಬೇಕಿದೆ. ಒಳಭಾಗದಲ್ಲಿದ್ದ ಎಸಿ ಕೆಟ್ಟಿದ್ದು, ತ್ರೀಫೇಸ್ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಒಳ ಹೊಕ್ಕರೆ ಉಸಿರುಗಟ್ಟುವ ವಾತಾವರಣ ಇಲ್ಲಿದೆ ಎನ್ನುತ್ತಾರೆ ಪ್ರವಾಸಿಗರು.

ಇನ್ನು ಇಲ್ಲಿ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರೂ, ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲವಾಗಿದೆ. ಶೌಚಾಲಯವಿದ್ದರೂ ನೀರು ಬಾರದೆ ಪ್ರವಾಸಿಗರು ಪರದಾಡುವಂತಾಗಿದೆ. ರಾತ್ರಿ ಹೊತ್ತಿನಲ್ಲಿ ಇಲ್ಲಿ ಲೈಟಿನ ವ್ಯವಸ್ಥೆ ಕೂಡ ಇಲ್ಲ. ಅಲ್ಲದೇ ಈ ಮುಂಚೆ ನೌಕೆಯ ಒಳಗೆ ತೋರಿಸುತ್ತಿದ್ದ 15 ನಿಮಿಷಗಳ ಸಾಕ್ಷ್ಯಚಿತ್ರವನ್ನು ಕೂಡ ಕರೆಂಟ್ ಇಲ್ಲದೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಗೂಗಲ್‌ನಲ್ಲಿ ನೌಕೆಯ ಹೊರ ಭಾಗದ ಅಂದದ ಫೊಟೊಗಳನ್ನು ನೋಡಿಕೊಂಡು ಇಲ್ಲಿಗೆ ಬಂದವರು ಯಾಕಾದ್ರೂ ಇಲ್ಲಿಗೆ ಬಂದೆವಪ್ಪ ಎನ್ನುವಂಥ ವ್ಯವಸ್ಥೆ ಇಲ್ಲಿಯದಾಗಿದೆ.

ಒಟ್ಟಿನಲ್ಲಿ ನೂರಾರು ಪ್ರವಾಸಿಗರನ್ನ ಸೆಳೆಯುವ ಪ್ರವಾಸಿ ಸ್ಥಳ, ಅದರಲ್ಲೂ ಯುದ್ಧದ ಕ್ಷಣವನ್ನ ಕಟ್ಟಿಕೊಡುತ್ತಿದ್ದ ಜೀವಂತ ನೌಕೆಯೊಂದನ್ನ ಹೀಗೆ ತುಕ್ಕು ಹಿಡಿದು, ವ್ಯವಸ್ಥೆಗಳಿಲ್ಲದೆ ಜಿಲ್ಲಾಡಳಿತ ಹಾಳುಗೆಡವುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ. ತಕ್ಷಣವೇ ಈ ಬಗ್ಗೆ ಸಂಬoಧಪಟ್ಟ ಇಲಾಖೆ ಗಮನಹರಿಸಿ, ನೌಕೆಯನ್ನ ದುರಸ್ತಿಪಡಿಸಿ ಪ್ರವಾಸಿಗರನ್ನ ಸೆಳೆಯುವಂತೆ ಮಾಡಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button