ಯಲ್ಲಾಪುರ: ಎಲೆಕ್ಟ್ರಿಕಲ್ ಅಂಗಡಿಯಲ್ಲಿ ದೇವರ ಪೋಟೊ ಮುಂದೆ ಹಚ್ಚಿಟ್ಟಿದ್ದ ದೀಪದ ಎಣ್ಣೆಬತ್ತಿಯನ್ನು ಬೆಂಕಿ ಇರುವಂತೆಯೇ ಕಚ್ಚಿಕೊಂಡು ಹೋಗಿದ್ದ ಇಲಿಯೊಂದು ಅಂಗಡಿಗೆ ಬೆಂಕಿ ಹೊತ್ತಿಸಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ಪಟ್ಟಣ ಪಂಚಾಯಿತಿ ಸಮೀಪದ ಅನುರಾಗ ಎಲೆಕ್ಟ್ರಿಕಲ್ ಶಾಪ್ ಮಾಲೀಕ ದಿನೇಶ ರೇವಣಕರ ಎಂಬುವವರು ದೇವರ ದೀಪ ಹಚ್ಚಿ ಲಾಕ್ಡೌನ್ ಹಿನ್ನೆಲೆಯಲ್ಲಿ ಬಾಗಿಲು ಹಾಕಿ ಮನೆಗೆ ತೆರಳಿದ್ದರು ಎನ್ನಲಾಗಿದೆ. ಆದರೆ ಕೆಲ ಹೊತ್ತಿನ ಬಳಿಕ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಭೀಮರಾವ್ ಉಪ್ಪಾರ್ ನೇತೃತ್ವದ ತಂಡ ಬೆಂಕಿ ನಂದಿಸಿದೆ.
ಅಗ್ನಿ ಅವಘಡದಲ್ಲಿ ಕೆಲ ಇಲೆಕ್ಟ್ರಿಕಲ್ ವಸ್ತುಗಳು ಸುಟ್ಟು ಕರಕಲಾಗಿದ್ದು, ಅಷ್ಟೆ ಪ್ರಮಾಣದ ವಸ್ತುಗಳನ್ನು ಅಗ್ನಿಶಾಮಕದಳದವರು ರಕ್ಷಣೆ ಮಾಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಪರಿಣಾಮ ಅದೇ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಇನ್ನಿತರ ಅಂಗಡಿಗಳಿಗೆ ಬೆಂಕಿ ಹರಡುವುದು ತಪ್ಪಿದೆ.
ದೇವರ ಫೋಟೊ ಎದುರಿನ ದೀಪದ ನೆನೆಯನ್ನು ಇಲಿ ಉರಿಯುತ್ತಿರುವಾಗಲೇ ಎತ್ತಿಕೊಂಡು ಹೋದ ಪರಿಣಾಮ ಬೇರೆ ವಸ್ತುಗಳಿಗೆ ಬೆಂಕಿ ತಗುಲಿ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ಅಗ್ನಿಶಾಮಕ ದಳದ ಪ್ರಭಾರೆ ಠಾಣಾಧಿಕಾರಿ ಭೀಮರಾವ್ ಉಪ್ಪಾರ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಪದ್ಮನಾಭ ಕಾಂಚನ್, ನಾಗೇಶ ದೇವಡಿಗ, ಅಡವೆಪ್ಪ ಪುಂಜದ್, ಚಾಲಕರಾದ ಜಯಸಿಂಹ, ತೋಪನ್ನವರ್, ರವಿ ಹವಾಲ್ದಾರ್ ಬೆಂಕಿಯನ್ನು ನಂದಿಸಿದರು.
ವಿಸ್ಮಯ ನ್ಯೂಸ್, ಯಲ್ಲಾಪುರ