14 ದಿನಗಳ ಹೆದ್ದಾರಿ(ವನ)ವಾಸ ಮುಗಿಸಿದ ಲಾರಿ ಚಾಲಕರು| ಅಂತೂ ಇಂತೂ ಸಂಚಾರಕ್ಕೆ ತೆರೆದು ಕೊಂಡ ಅಂಕೋಲಾ- ಹುಬ್ಬಳ್ಳಿ ಮಾರ್ಗ
ಯಲ್ಲಾಪುರ: ರಾ.ಹೆ. 63ರ ಯಲ್ಲಾಪುರ ಅರೇಬೈಲ್ ಘಟ್ಟ ಪ್ರದೇಶದಲ್ಲಿ ಹೆದ್ದಾರಿ ಅಂಚಿನ ಭೂ ಕುಸಿತದ ಪರಿಣಾಮ, 2 ವಾರಗಳಿಂದ ಬಂದ ಆಗಿದ್ದ ಅಂಕೋಲಾ ಹುಬ್ಬಳ್ಳಿ ಮಾರ್ಗ, ತಾತ್ಕಾಲಿಕ ದುರಸ್ಥಿ ಕಾರ್ಯದ ನಂತರ ಮತ್ತೆ ಸಂಚಾರಕ್ಕೆ ತೆರೆದುಕೊಂಡಿದೆ.
ಕೇರಳದಿಂದ ಗುಜರಾತವರೆಗೆ , ಉತ್ತರಕನ್ನಡದಿಂದ ಉತ್ತರ ಕರ್ನಾಟಕದ ಪ್ರಮುಖ ಪ್ರದೇಶಗಳ ಜೀವನಾವಶ್ಯಕ ಸಂಪರ್ಕ ಕೊಂಡಿಯಾಗಿ ಈ ಹೆದ್ದಾರಿ ಗುರುತಿಸಿಕೊಂಡಿದ್ದು ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಒಂದೆನಿಸಿದೆ.
ಜುಲೈ ತಿಂಗಳಲ್ಲಿ ನಿರಂತರ ಸುರಿದ ಭಾರಿ ಮಳೆ, ಮತ್ತಿತರ ಕಾರಣಗಳಿಂದ ಭೂಕುಸಿತ, ರಸ್ತೆ ಬಿರುಕು ಕಾಣಿಸಿಕೊಂಡು ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಹೆದ್ದಾರಿ ದುರಸ್ಥಿ, ವಾಹನಗಳ ಓಡಾಟದ ವೇಳೆ ಅಪಾಯದ ಸಾಧ್ಯತೆ ಮನಗಂಡು ಕೆಲ ದಿನಗಳ ಮಟ್ಟಿಗೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಇದರಿಂದ ಭಾರೀ ವಾಹನಗಳು ಅಂಕೋಲಾ ಹುಬ್ಬಳ್ಳಿ ಮಾರ್ಗ ಮಧ್ಯೆ ಹಟ್ಟಿಕೇರಿ ಡೋಲನಾಕಾದಿಂದ ಹಿಡಿದು ಬಾಳೆಗುಳಿ ಹೆದ್ದಾರಿ ಅಂಚಿನಲ್ಲಿ ಸಾಲು ಸಾಲಾಗಿ ನಿಲ್ಲುವಂತಾಗಿತ್ತು. ಈ ವೇಳೆ ಕಳೆದೆರಡು ವಾರಗಳಿಂದ ಲಾರಿ ಚಾಲಕ – ಸಹಾಯಕರು ಹೆದ್ದಾರಿಯಲ್ಲಿಯೇ ಜೀವನ ಕಳೆಯ ಬೇಕಾದ ಅನಿವಾರ್ಯತೆ ಸೃಷ್ಠಿಯಾಗಿ, 13 ದಿನಗಳು ಕಳೆದು ಹೋಗಿತ್ತು. ಆಗಸ್ಟ್ 3ರಂದು ಬಾಳೆಗುಳಿ ಬಳಿ ನೂರಾರು ಚಾಲಕರು ಹಠಾತ್ ಪ್ರತಿಭಟನೆ ನಡೆಸಿ, ಇತರೆ ಲಘುವಾಹನಗಳ ಓಡಾಟವನ್ನು ಬಂದ ಮಾಡಿ, ಇಲ್ಲವೇ ನಮಗೂ ನಮ್ಮ ಮನೆ ಸೇರಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ರಸ್ತೆ ತಡೆ ನಡೆಸಿ ಸಂಬಂಧಿಸಿದವರನ್ನು ಎಚ್ಚರಿಸಿದ್ದರು.
ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಕುಮಟಾ ಏಸಿ ರಾಹುಲ್ ರತ್ನಂ ಪಾಂಡೆ, ಶಿರಸಿ ಹಾಗೂ ಯಲ್ಲಾಪುರದ ಅಧಿಕಾರಿಗಳೊಂದಿಗೆ ಫೋನ್ ಮೂಲಕ ಸಂಪರ್ಕಿಸಿ, ಹೆದ್ದಾರಿ ದುರಸ್ಥಿ ಕಾರ್ಯದ ಪ್ರಗತಿ ಕುರಿತು ಚರ್ಚಿಸಿ ಸಂಜೆ ಇಲ್ಲವೇ ನಾಳೆ ಸಂಚಾರ ವ್ಯವಸ್ಥೆ ಸುಗಮಗೊಳ್ಳುವ ಭರವಸೆ ನೀಡಿದ್ದರು.
ಅಂತೂ – ಇಂತೂ ಅಗಸ್ಟ್ 4 ರಂದು ಜಿಲ್ಲಾಧಿಕಾರಿಗಳ ಆದೇಶದನ್ವಯ ಭಾರೀ ವಾಹನಗಳ ಓಡಾಟಕ್ಕೂ ಅನುಕೂಲ ಮಾಡಿಕೊಡುವುದರೊಂದಿಗೆ, ಕಳಿಚಿ ಹೋದ ರಸ್ತೆ ಸಂಪರ್ಕವನ್ನು ಪುನರಾರಂಭಿಸಲಾಗಿದೆ. ಈ ಕುರಿತು ಕೆಲ ಚಾಲಕರು ತಮ್ಮ 14 ದಿನಗಳ ಹೆದ್ದಾರಿ ( ವನ ) ವಾಸ ಮುಕ್ತಾಯ ಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಬಹುದಿನಗಳಿಂದ ಸಾಲು ಸಾಲುಗಟ್ಟಿ ನಿಂತಿರುವ ವಾಹನಗಳು ಯಲ್ಲಾಪುರ ಮಾರ್ಗವಾಗಿ ತೆರಳುವ ವೇಳೆ, ಸಂಚಾರ ನಿಯಂತ್ರಣಕ್ಕೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ 60 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗುಳ್ಳಾಪುರದಿಂದ – ಕಿರವತ್ತಿ ವರೆಗೂ ಖಾಕಿ ಪಡೆ ಕಾರ್ಯಪ್ರವೃತ್ತವಾಗಿದೆ. ಯಲ್ಲಾಪುರದ ಸಿಪಿಪ್ಪ ಸುರೇಶ ಯಳ್ಳೂರ, ಪಿ ಎ ಸೈ ಮಂಜುನಾಥ, ನೂತನ ಪಿ ಎ ಸೈ ಪ್ರಿಯಾಂಕ ಎಂ, ಶಿರಸಿ ಮತ್ತಿತರ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಇತರೆ ಸಿಬ್ಬಂದಿಗಳ ಸಹಕಾರದೊಂದಿಗೆ ನಸುಕಿನಂದಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಹೆದ್ದಾರಿ ಸಂಚಾರದ ವೇಳೆ ಟ್ರಾಫಿಕ್ ಜಾಮ್ ಮತ್ತಿತರ ಸಮಸ್ಯೆಯಾಗದಂತೆ ಜಾಗರೂಕ ಚಾಲನೆಗೆ ಒತ್ತು ನೀಡುವಂತೆ ಲಾರಿ ಚಾಲಕರಿಗೆ ತಿಳಿ ಹೇಳುತ್ತಿದ್ದರು.
ಅಂಕೋಲಾ ಭಾಗದಲ್ಲಿ ಸಿಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಪಿಎಸೈ ಗಳಾದ ಪ್ರವೀಣ ಕುಮಾರ, ಪ್ರೇಮನ್ ಗೌಡ್ ಪಾಟೀಲ್ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್, ಕಾರವಾರ ಅಂಕೋಲ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ,ಶಿರಸಿ ಶಾಸಕ ವಿಶ್ವೇಶ್ವರ ಕಾಗೇರಿ ಸೇರಿದಂತೆ ಇತರೆ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಸಂಭವಿಸಿದ ವಿವಿಧ ಇಲಾಖೆಗಳ ಅಧಿಕಾರ ವರ್ಗ ಹಾಗೂ ಹೆದ್ದಾರಿ ದುರಸ್ಥಿ ಗುತ್ತಿಗೆ ನಿರ್ವಹಣೆದಾರರಿಗೆ ಆದಷ್ಟು ಬೇಗ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಕಡಿದುಹೋದ ರಸ್ತೆ ಸಂಪರ್ಕ ಪುನರಾರಂಭಿಸಲು ಮಾರ್ಗದರ್ಶನ ನೀಡುತ್ತಲೇ ಇದ್ದರು.
ಕಳೆದ 2 ವಾರಗಳಿಂದ ರಸ್ತೆಯಲ್ಲೇ ನಿಲ್ಲುವಂತಾದ ವಾಹನ ಚಾಲಕರು – ಸಹಾಯಕರು ಶೌಚ, ಸ್ನಾನ, ಅಡುಗೆ ಮತ್ತಿತರ ನಿತ್ಯ ಕರ್ಮ ಮಾಡಿಕೊಳ್ಳುವ ವೇಳೆ ಅಲ್ಲಲ್ಲಿ ಕಸ-ತ್ಯಾಜ್ಯ ಸಂಗ್ರಹ ಗೊಳ್ಳುವಂತಾಗಿದ್ದು, ಇನ್ನು ಕೆಲವೆಡೆ ಪರಿಸರ ಗಬ್ಬೆದ್ದು ನಾರುತ್ತಿದ್ದು, ಸಂಬಂಧಿಸಿದ ಇಲಾಖೆ ಶುಚಿತ್ವಕ್ಕೆ ಕ್ರಮ ವಹಿಸಬೇಕಿದೆ ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ