ಕೈ ಕಳೆದುಕೊಂಡ ತರಕಾರಿ ವ್ಯಾಪಾರಿ: ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿರುವ ವೇಳೆ ಅವಾಂತರ: ಪ್ರಯಾಣಿಕರೇ ಎಚ್ಚರ
ಅಂಕೋಲಾ: ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತು ಬಸ್ ಚಲಿಸುತ್ತಿರುವ ವೇಳೆಯೇ, ಕಿಟಕಿಯಿಂದ ಹೊರಗೆ ಕೈ ಚಾಚಿದ್ದ ಎನ್ನಲಾಗಿದ್ದು,ಆತನ ದುರದೃಷ್ಟವೆಂಬಂತೆ ಅದೇ ವೇಳೆ ಅಪರಿಚಿತ ವಾಹನವೊಂದು ಈತನ ಕೈಗೆ ಜೋರಾಗಿ ಬಡಿದ ಪರಿಣಾಮ ಕೈ ತುಂಡಾದ ಹೃದಯ ವಿದ್ರಾವಕ ಘಟನೆ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರ ಬಾಳೆಗುಳಿ – ಬೊಗ್ರಿಬೈಲ್ ಬಳಿ ನಡೆದಿತ್ತು.
ಹಾವೇರಿ ಮೂಲದ ನದೀಮ್ ಬಸೀರ ಅಹಮ್ಮದ ತಾವರಗಿ(33) ಎಂಬಾತನೇ ಬಲಗೈ ಕಳೆದುಕೊಂಡ ನೃತದೃಷ್ಟ ಪ್ರಯಾಣಿಕನಾಗಿದ್ದು , ಈತನು ಸಾರಿಗೆ ಸಂಸ್ಥೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು,,ಎದುರಿನಿಂದ ಬಂದ ಲಾರಿ ವಾಹನ ಮತ್ತು ಬಸ್ ನಡುವೆ ಸುರಕ್ಷಿತ ಅಂತರವಿರದ ವೇಳೆ ಈ ಅವಘಡ ಸಂಭವಿಸಿದೆ..
ಕಳೆದ ಕೆಲ ವರ್ಷಗಳ ಹಿಂದೆ ಇಂತಹುದೇ ಒಂದು ಅಚಾತುರ್ಯ ಘಟನೆಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕನೋರ್ವನ ಕೈ ತುಂಡಾಗಿ, ತುಂಡಾದ ಭಾಗ, ಬೇರೊಂದು ವಾಹನದ ಮೇಲೆ ಬಿದ್ದ ಘಟನೆಯನ್ನು ಕೆಲವರು ಸ್ಮರಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ವಾಹನ ಯಾವುದೇ ಇದ್ದರೂ ಚಲಿಸುತ್ತಿರುವ ವಾಹನದ ಕಿಟಕಿ ಹಾಗೂ ಬಾಗಿಲುಗಳ ಬಳಿ ಮಕ್ಕಳು ಸೇರಿದಂತೆ ಇತರೆ ಎಲ್ಲ ರೀತಿಯ ಪ್ರಯಾಣಿಕರು,ಕೈ ಕಾಲುಗಳನ್ನು ಹೊರಗೆ ಚಾಚುವುದು,ಬೇರೆ ಬೇರೆ ಕಾರಣಗಳಿಂದ ಮುಖ – ಕತ್ತು ಹೊರ ಚಾಚುವುದನ್ನು ಮಾಡದೇ, ಹಲವು ಮುನ್ನೆಚರಿಕೆ ತೆಗೆದುಕೊಳ್ಳಬೇಕಿದೆ.
ಗಾಯಾಳುವನ್ನು ಅದೇ ಬಸ್ ಮೂಲಕ ಅಂಕೋಲಾ ತಾಲೂಕಾಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆತನ ತುರ್ತುಚಿಕಿತ್ಸೆ ಜವಾಬ್ದಾರಿ ಮತ್ತಿತರ ಕಾರಣಗಳಿಂದ ಕುಟುಂಬಸ್ಥರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಿಸಿದ್ದಾರೆ. ಸಿ.ಪಿ.ಐ.ಸಂತೋಷ ಶೆಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗಾಯಾಳು ನದೀಮ ತರಕಾರಿ ವ್ಯಾಪಾರಕ್ಕೆಂದು ಆಗಾಗ ಅಂಕೋಲಕ್ಕೆ ಬಂದು ಹೋಗುತ್ತಿದ್ದ ಎನ್ನಲಾಗಿದ್ದು, ಅಪಘಾತ ನಡೆದ ದಿನದ ಬಹು ಹೊತ್ತು ಮುಂಚೆ ಪಟ್ಟಣದ ಕೆಳ ಬಜಾರದಲ್ಲಿರುವ ಪ್ರಸಿದ್ಧ ಗೋಬಿಮಂಚೂರಿ ಹೊಟೇಲ್ ಒಂದಕ್ಕೂ ತರಕಾರಿ ವ್ಯಾಪಾರಕ್ಕೆ ಬಂದು ಹೋಗಿದ್ದು,ಅಪಘಾತದ ಸುದ್ದಿ ತಿಳಿದ ಹೋಟೆಲ್ ಮಾಲಕ ಮತ್ತು ಸಿಬ್ಬಂದಿಗಳು,ತಮ್ಮ ಹೊಟೆಲ್ನಲ್ಲಿ ಅತ ಬಂದು ಹೋದ ದೃಶ್ಯಗಳು ಹೊಟೇಲ್ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವುದನ್ನು ನೋಡುತ್ತ, ,ಅಪಘಾತದ ಬಗ್ಗೆ ಬೇಸರ ವ್ಯಕ್ತಪಡಿಸಿ, ಸ್ಪರ್ಧಾತ್ಮಕ ದರದಲ್ಲಿ ತಾಜಾ ತರಕಾರಿಗಳನ್ನು ತಂದುಕೊಡುತ್ತಿದ್ದ ನದೀಮ್ ನ ಆತ್ಮೀಯ ನಂಟಿನ ಕುರಿತು ಮಾತನಾಡಿಕೊಳ್ಳುತ್ತಿದ್ದಾರೆ.
ಅಂತೆಯೇ ವಾಹನ ಚಾಲಕ ಹಾಗೂ ನಿರ್ವಾಹಕರು ಮತ್ತು ಸಂಬಂಧಿಸಿದ ಇತರ ಕೆಲಸೂ, ತಮಗೆ ಸಂಬಂಧಿಸಿದ ವಾಹನದ ಒಳಗಡೆ ಇರುವ ಎಲ್ಲರ ಜೀವರಕ್ಷಣೆ ಉದ್ದೇಶದಿಂದ ವಿಶೇಷ ಗಮನವಿಟ್ಟು,ಸುರಕ್ಷಿತ ಚಾಲನೆಗೆ ಒತ್ತು ನೀಡುವಂತೆ ಪೋಲೀಸ್ ಇಲಾಖೆಯ ಪರವಾಗಿ ಸಿಪಿಐ ಸಂತೋಷ ಶೆಟ್ಟಿ,ಸಾರ್ವಜನಿಕ ಕಳಕಳಿಯ ಕರೆ ನೀಡಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.