Follow Us On

WhatsApp Group
Focus News
Trending

ಜಿಲ್ಲೆಯಾದ್ಯಂತ ಗಾಂಜಾ ಘಮಲು : ಅಂಕೋಲಾದಲ್ಲಿಯೂ ಮತ್ತೆ ಪ್ರಕರಣ: ಗ್ರಾಮೀಣ ಭಾಗದಲ್ಲಿ ಓ ಸಿ ಕೇಸ್

ಅಂಕೋಲಾ ಅ 15 : ಎಸ್ಪಿ ಶಿವಪ್ರಕಾಶ್ ದೇವರಾಜು ಅವರ ಖಡಕ್ ನಿಲುವಿನಿಂದ,ಜಿಲ್ಲೆಯ ಹಲವೆಡೆ ಮತ್ತೆ ಮತ್ತೆ ಗಾಂಜಾ ಪ್ರಕರಣಗಳು ಪತ್ತೆಯಾಗುತ್ತಿವೆ.

ಇದೇ ವೇಳೆ ಅಂಕೋಲಾ ತಾಲೂಕಿನಲ್ಲಿಯೂ ಇತ್ತೀಚಿನ ದಿನದಲ್ಲಿ 2-3 ಗಾಂಜಾ ಸಾಗಾಟ ಪ್ರಕರಣಗಳನ್ನು ಭೇದಿಸುವ ಮೂಲಕ ಕಾಖಿ ಪಡೆ ಸೈ ಎನಿಸಿಕೊಂಡಿದೆ.

ಈ ಹಿಂದೆ ಮೋಟಾರ್ ಬೈಕ್ ಮೂಲಕ ಗಾಂಜಾ ಸಾಗಿಸುತ್ತಿದ್ದ ವೇಳೆ ಬಾಳೆಗುಳಿ – ಕೃಷ್ಣಾಪುರ ರಸ್ತೆ ಬಳಿ ವ್ಯಕ್ತಿಯೋರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದ ಸ್ಥಳೀಯ ಪೊಲೀಸರು,ಕಳೆದ ಕೆಲ ದಿನಗಳ ಹಿಂದಷ್ಟೇ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ರಾ.ಹೆ.66 ರ ಹಟ್ಟಿಕೇರಿ ಟೋಲನಾಕಾ ಹತ್ತಿರ ಮಾಲು ಸಮೇತ ರಿಕ್ಷಾವನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿ, ತನಿಖೆ ಮುಂದುವರಿಸಿದ್ದರು.

ಅಕ್ಟೋಬರ್ 15 ರ ಶುಕ್ರವಾರ ಮತ್ತೆ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಗ್ರಾಮೀಣ ವ್ಯಾಪ್ತಿಯಲ್ಲಿಯೂ ಬೇರು ಬಿಡುತ್ತಿರುವ ಮಾದಕ ಜಾಲದ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಮಾದಕ ವಸ್ತು ಗಾಂಜಾ ಸಾಗಾಟದ ಆರೋಪದ ಮೇಲೆ ಅಂಕೋಲಾ ಪೊಲೀಸರು ಇಬ್ಬರನ್ನು ಬಂಧಿಸಿ ಸುಮಾರು 128 ಗ್ರಾಂ ಗಾಂಜಾ ವಶಪಡಿಸಿಕೊಂಡ ಘಟನೆ ತಾಲೂಕಿನ ಉಳುವರೆ ಗ್ರಾಮದ ಸಗಡಗೇರಿ ಕ್ರಾಸ್ ಬಳಿ ನಡೆದಿದೆ.
ಉಳುವರೆ ಬೋಳುಕುಂಟೆ ನಿವಾಸಿಗಳಾದ ಬೈರು ಪೊಕ್ಕಾ ಗೌಡ (50) ಗುರು ಕನ್ನೆ ಗೌಡ(29) ಬಂಧಿತ ಆರೋಪಿಗಳು.

ಇವರು ಗಾಂಜ ಮಾರಾಟ ಮಾಡುವ ಉದ್ದೇಶದಿಂದ ಸುಕ್ರು ಗೌಡ ಉಳುವರೆ ಎನ್ನುವವರಿಂದ ಸುಮಾರು 4500 ರೂಪಾಯಿ ಮೌಲ್ಯದ ಗಾಂಜಾ ಖರೀದಿಸಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ,ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು ಎನ್ನಲಾಗಿದೆ.

ಡಿ.ವೈ.ಎಸ್. ಪಿ ಅರವಿಂದ ಕಲಗುಜ್ಜಿ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಆರಕ್ಷಕ ನಿರೀಕ್ಷಕ ಸಂತೋಷ ಶೆಟ್ಟಿ ಅವರ ನೇತೃತ್ವದಲ್ಲಿ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ಪ್ರೋಬೆಶನರಿ ಪಿ.ಎಸ್. ಐ ಮುಶಾಹಿದ್ ಅಹ್ಮದ್ ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಆಸೀಫ ಕಂಕೂರ್, ಅರುಣ ಮೇತ್ರಿ, ಜಗದೀಶ ನಾಯ್ಕ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅಕ್ರಮ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಗಾಂಜಾ ಹೊರತಾದ ಬೇರೆ ಪ್ರಕರಣದಲ್ಲಿ ಕಳೆದೆರಡು ದಿನಗಳ ಹಿಂದೆ ತಾಲೂಕಿನ ಅವರ್ಸಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಕಲ ಬೇಣದಲ್ಲಿ ಈರ್ವರ ಮೇಲೆ ಓ.ಸಿ (ಮಟಕಾ – ಜೂಗಾರಾಟ )ಪ್ರಕರಣ ದಾಖಲಾಗಿದ್ದು,ಸಿಪಿಐ ಸಂತೋಷ ಶೆಟ್ಟಿ ಮತ್ತು ಪಿ ಎಸ್ ಐ ಪ್ರೇಮನ ಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ, ಓ ಸಿ ಜೂಗಾರಾಟಕ್ಕೆ ಬಳಸಿದ ಸಲಕರಣೆಗಳು ಹಾಗೂ ಒಟ್ಟಾರೆಯಾಗಿ 8180 ರೂಪಾಯಿ ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button