Follow Us On

WhatsApp Group
Big News
Trending

ದೇಹಕ್ಕಿಲ್ಲ ಬಲ- ಎದೆಗುಂದದ ಛಲ: ಮಗನನ್ನು ಪ್ರತಿದಿನ ಹೊತ್ತಿಕೊಂಡು ಹೋಗಿ‌ ಶಿಕ್ಷಣ ಕೊಡಿಸಿದ ತಂದೆ: ನೆಲದ ಮೇಲೆ ಹೊರಳಾಡುತ್ತ ಮುಂದೆ ಹೋಗುವ ಕರುಣಾಜನಕ ಸ್ಥಿತಿ

ಅಂಕೋಲಾ: ಸಾಮಾನ್ಯ ಕುಟುಂಬದ ಬಾಲಕನೋರ್ವನ ಶಿಕ್ಷಣ ಪಡೆಯುವ ಆಸೆಗೆ ಆತನ ಅಂಗಾಂಗಗಳ ವೈಕಲ್ಯತೆ ಅಡ್ಡಿಯಾಗಿ ನಿಂತಿದ್ದು ತಮ್ಮ ಮಗ ಶಿಕ್ಷಣ ಪಡೆಯಲು ದಾರಿ ತೋರುವಂತೆ ಪಾಲಕರು ಅಂಗಲಾಚುತ್ತಿದ್ದಾರೆ.

ತಾಲೂಕಿನ  ಗ್ರಾಮೀಣ ವ್ಯಾಪ್ತಿಯ  ಅಚವೆಯಲ್ಲಿ ವಿಜೇತ ವಿಷ್ಣು ಗೌಡ (13) ಎಂಬ ಬಾಲಕನ ಹೈಸ್ಕೂಲ್ ಮೆಟ್ಟಿಲೇರುವ ಕನಸು ನನಸಾಗಿಸಲು ಸಹಾಯ-ಸಹಕಾರ ಅತ್ಯವಶ್ಯವೆನಿಸಿದೆ. ವಿಜಿತ  ಗೌಡ  ತನ್ನ  ಕಾಲುಗಳು – ದೇಹದ ಮೇಲೆ ಸ್ವಾದೀನ ಕಳೆದುಕೊಂಡಿದ್ದು ಸರಿಯಾದ ಭಂಗಿಯಲ್ಲಿ ನಿಲ್ಲಲು ಕುಳಿತು ಕೊಳ್ಳಲು  ಆಗದೇ ಪರಿತಪಿಸುವಂತಾಗಿದೆ.

ಜೀವನ ನಿರ್ವಹಣೆ ಜವಾಬ್ದಾರಿಯಿಂದ ಕೂಲಿನಾಲಿ ಮಾಡಿ ಬದುಕಬೇಕಾದ ತಂದೆ ತಾಯಿಗಳಿಗೆ,ಮಗನ ಆರೋಗ್ಯ ನಿರ್ವಹಣೆಯೂ ಸವಾಲಾಗಿ ಪರಿಣಮಿಸಿದೆ.ಎಷ್ಟೇ ಕಷ್ಟವಾದರೂ ಸರಿ ಮಗನ ಆರೋಗ್ಯ ಮುಖ್ಯ ಎಂದು ದೂರದ ಬೆಂಗಳೂರು, ಮಂಗಳೂರು ಮೊದಲಾದ ಆಸ್ಪತ್ರೆಗೆಅದೆಷ್ಟೋ ಬಾರಿ ಹೋಗಿ ಬಂದರೂ ಸಮಸ್ಯೆ ಪರಿಹಾರ ಗೊಳ್ಳದೆ ಮತ್ತಷ್ಟು ಸಂಕಟ ಪಡುವಂತಾಗಿದೆ.


ನೆಲದ ಮೇಲೆ ಹೊರಳಾಡುತ್ತ ಮುಂದೆ ಹೋಗುವ ಕರುಣಾಜನಕ ಸ್ಥಿತಿ ಬಾಲಕನದಾಗಿದ್ದು ಪ್ರತಿಯೊಂದು ಕೆಲಸಗಳಿಗೂ ಇತರರನ್ನು ಅವಲಂಬಿಸಬೇಕಾದ ಸ್ಥಿತಿ ಇದೆ. ತಮ್ಮ ಮಗನ ಕಷ್ಟದ ಸ್ಥಿತಿಯ ನಡುವೆಯೂ ತಂದೆ ತಾಯಿಗಳು ಆತನಿಗೆ ಶಿಕ್ಷಣ ನೀಡಲು ಮಹತ್ವ ನೀಡಿದರು,ಪ್ರತಿದಿನ ಹತ್ತಿರದ ಪ್ರಾಥಮಿಕ ಶಾಲೆಗೆ ಮಗನನ್ನು ಎತ್ತಿಕೊಂಡು ಹೋಗಿ ಬರುವ ಮೂಲಕ 7 ನೇ ತರಗತಿಯವರೆಗೆ ಶಿಕ್ಷಣ ಪಡೆಯಲು ಆಸರೆಯಾದರು.


ಕಲಿಕೆಯಲ್ಲಿ ಚುರುಕಾಗಿರುವ ವಿಜೇತ ಸಹ ತನ್ನ ಅಂಗ ವೈಕಲ್ಯತೆಗೆ ಸಡ್ಡುಹೊಡೆದು ನಿಂತು ತನ್ನ ಕೈ ಸ್ವಾಧೀನದಲ್ಲಿ ಇರದಿದ್ದರೂ ಅಕ್ಷರ ಬರೆಯುವುದನ್ನು ರೂಡಿಸಿಕೊಂಡುಶಿಕ್ಷಣ ಪಡೆದ. ಈಗ 8 ನೇ ತರಗತಿಗೆ ವಿಜೇತನನ್ನು ದಾಖಲಿಸಲಾಗಿದೆ ಆದರೂ, ಪ್ರತಿದಿನ ಆತನನ್ನು ಎತ್ತಿಕೊಂಡು ಹೋಗಿ ಬರಲು ಕೂಲಿಯನ್ನೇ ನಂಬಿರುವ ಪಾಲಕರಿಗೆ ಸಾಧ್ಯವಾಗುತ್ತಿಲ್ಲ ಅದರಿಂದಾಗಿ ವಿಜೇತ ಗೌಡ ಮನೆಯಲ್ಲೇ ಉಳಿದುಕೊಳ್ಳುವಂತಾಗಿದೆ.

ತಮ್ಮ ಮಗ ಶಿಕ್ಷಣ ಪಡೆಯಲು ಸೂಕ್ತ ದಾರಿ ತೋರಿಸುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಕಷ್ಟಕಾರ್ಪಣ್ಯ ಹೇಳಿಕೊಂಡಿರುವ ವಿಜೇತನ ತಂದೆ ತಾಯಿಗಳು ಹಾಗೂ ಸ್ಥಳೀಯರು , ತಮಗೆ ಹಣಕಾಸಿನ ನೆರವೇ ಮುಖ್ಯವಲ್ಲ, ಬದಲಿಗೆ  ಮನೆಗೆ ಬಂದು ಪಾಠ ಹೇಳುವ ಶೈಕ್ಷಣಿಕ ವ್ಯವಸ್ಥೆ ,ನರ-ಸಂಬಂಧಿತ ವೈದ್ಯರನ್ನು ತಲುಪುವ ನಾನಾ ರೀತಿಯ ನೆರವು ನೀಡಿ ಸಹಕರಿಸುವಂತೆ ವಿನಂತಿಸಿಕೊಂಡಿದ್ದಾರೆ.   

          

ಅಂಗ ವೈಕಲ್ಯತೆ ಇಂದ ತನ್ನೆಲ್ಲ ಕೆಲಸಗಳಿಗೂ ತಂದೆ ತಾಯಿಗಳ ಮೇಲೆ ಅವಲಂಬಿತನಾಗಬೇಕಾದ ಕೊರಗು ವಿಜೇತನ ಕಲಿಯುವ ಮನಸ್ಸಿಗೆ ವೇದನೆ ಪಡುವಂತೆ ಮಾಡಿದೆ. ತನಗೆ ಏಳಲು ಮತ್ತು ಕುಳಿತುಕೊಳ್ಳಲು ಸಾಧ್ಯವಾಗದ ಹತಾಶ ಭಾವನೆ ಪುಟಾಣಿಯ ಮನದಿಂದ ಶಬ್ದ ರೂಪ ತಳೆದು ಬಿಡಿಸಲಾಗದ ಒಗಟಿನಂತೆ ಬಂದು ಹಾದು ಹೋಗುವುದನ್ನು ಕಾಣಬಹುದಾಗಿದೆ. 

ಅಸಹಾಯಕ ಸ್ಥಿತಿಯಲ್ಲಿ ಇರುವ ವಿಜೇತ ಗೌಡನ ಕಲಿಯುವ ಆಶೆಗೆ ಅಗತ್ಯ ನೆರವು ಒದಗಿಸಲು  ಜನಪ್ರತಿನಿಧಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತಿತರ ಸಂಬಂಧಿತ   ಅಧಿಕಾರಿಗಳು, ಸಂಘ ಸಂಸ್ಥೆಗಳು, ಕ್ರಿಮ್ಸ್  ಸೇರಿದಂತೆ ಜಿಲ್ಲೆ ಹಾಗೂ ಹೊರ ರಾಜ್ಯದ ವೈದ್ಯಕೀಯ ಪರಿಣತರು ಮಾನವೀಯ ನೆಲೆಯಲ್ಲಿ ಸಹಾಯ ಹಸ್ತ ಚಾಚುವ ಮೂಲಕ ಭರವಸೆಯ ಹೊಸ ಬೆಳಕು ಮೂಡಿಸಿ ಈ ಬಾಲಕನ  ದೇಹಾರೋಗ್ಯ ಶಕ್ತಿ ಹೆಚ್ಚಿಸುವುದು ಮತ್ತು ಶೈಕ್ಷಣಿಕ ಸೌಲಭ್ಯ ಪೂರೈಕೆ  ಪೂರೈಕೆ  ಅಗತ್ಯ ನೆರವು ನೀಡಬೇಕಾಗಿದೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button