ಶಿರಸಿ: ಪ್ರತಿ ವರ್ಷವು ವೈಶಾಖ ಶುದ್ಧ ಅಷ್ಟಮಿಯಂದು ಇಲ್ಲಿನ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಶ್ರೀ ದೇವಿಯ ವರ್ಧಂತಿ ಉತ್ಸವವನ್ನು ಆಚರಿಸಲಾಗುತ್ತಿತ್ತು. ಅದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ಖಾಯಿಲೆಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಷೇಧಾಜ್ಞೆ ಜಾರಿಯಲ್ಲಿದ್ದುದರಿಂದ ವರ್ಧಂತಿ ಉತ್ಸವ ಆಚರಣೆ ಮಾಡಲು ಸಾಧ್ಯವಾಗಿಲ್ಲವಾಗಿತ್ತು.
ಆದ ಕಾರಣ ಧರ್ಮದರ್ಶಿ ಮಂಡಳಿಯು ವರ್ಧಂತಿ ಉತ್ಸವದ ನಿಮಿತ್ತ ನಡೆಯಬೇಕಿದ್ದ ಆಚರಣೆಯನ್ನು ಕಾರ್ತಿಕ ಮಾಸದಲ್ಲಿ ಇದೇ ನವೆಂಬರ್ 09 ರಿಂದ 11 ರವರೆಗೆ ಶತಚಂಡೀ ಹವನವನ್ನು ಶ್ರೀ ರಾಮಕೃಷ್ಣ ಭಟ್ಟ ಹಾಗೂ ಉಪದೇವಾಲಯದ ಅರ್ಚಕರ ಮುಂದಾಳತ್ವದಲ್ಲಿ ನಡೆಸಲು ನಿರ್ಣಯಿಸಲಾಗಿದೆ. 09 ರ ಮಂಗಳವಾರದಂದು ಬೆಳಿಗ್ಗೆ 9 ಘಂಟೆಗೆ ಸಾಮೂಹಿಕ ಪ್ರಾರ್ಥನೆ, ಪ್ರಧಾನ ಸಂಕಲ್ಪ, ಗಣೇಶಪೂಜಾ, ಋತ್ವಿಗ್ವರ್ಣೆ, ಶತಚಂಡೀಯಾಗದ ಪಾರಾಯಣ ಆರಂಭವಾಗಲಿದೆ.
10 ರ ಬುಧವಾರದಂದು ಕಲಾವೃಧ್ದಿ ಹವನ, ಪೂರ್ಣಾಹುತಿ ಹಾಗೂ 11 ರ ಗುರುವಾರರಂದು ಶತಚಂಡಿ ಹವನ ಹಾಗೂ ಸಾಯಂಕಾಲ 4 ಘಂಟೆಗೆ ಶ್ರೀ ದೇವಿಯ ಪಲ್ಲಕ್ಕಿಯು ಶ್ರೀ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ 10 ಘಂಟೆಗೆ ಶ್ರೀ ದೇವಸ್ಥಾನಕ್ಕೆ ಬಂದು ಮಹಾ ಮಂಗಳಾರತಿ ನಡೆಯುವುದು. ಈ ನಿಟ್ಟಿನಲ್ಲಿ ಭಕ್ತಾದಿಗಳು ಶತಚಂಡಿ ಹವನದ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆ ಹಾಗೂ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೋರಲಾಗಿದೆ.
ವಿಸ್ಮಯ ನ್ಯೂಸ್ ಶಿರಸಿ