ಅಂಕೋಲಾ: ವಿಧಾನ ಪರಿಷತ್ ಗೆ ಡಿ.10 ರಂದು ಚುನಾವಣೆ ನಡೆದಿದ್ದು, ಫಲಿತಾಂಶ ಡಿ. 14 ರಂದು ಹೊರಬೀಳಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದ ಜನಪ್ರತಿನಿಧಿಗಳು ಮತದಾರರಾಗಿದ್ದ ಈ ಚುನಾವಣೆಯಲ್ಲಿ ಬಹುತೇಕ ಎಲ್ಲರೂ ತಮ್ಮ ಹಕ್ಕು ಚಲಾಯಿಸಿಯಿಸಿದ್ದರಾದರೂ, ಈ ವರೆಗೂ ಎಲ್ಲಿಯೂ ಸಂಪೂರ್ಣ ಗುಟ್ಟು ಬಿಟ್ಟು ಕೊಡದಿರುವುದರಿಂದ ಅಭ್ಯರ್ಥಿಗಳ ಹಣೆ ಬರಹವನ್ನು ಭದ್ರವಾಗಿರುವ ಮತಪೆಟ್ಟಿಗೆಯಿಂದ ಹೊರತೆಗೆದು ಎಣಿಕೆ ಮಾಡುವವರೆಗೂ ಕಾಯಲೇ ಬೇಕಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿಯಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರಗಳು ನಾನಾ ರೀತಿಯಲ್ಲಿ ನಡೆಯತೊಡಗಿದೆ. ಚುನಾವಣೆಗೂ ಪೂರ್ವ ಮತ್ತು ಚುನಾವಣೆ ನಂತರದ ಲೆಕ್ಕಾಚಾರದಲ್ಲಿ ಕೆಲ ಮಟ್ಟಿನ ವ್ಯತ್ಯಾಸಗಳು ಇರಬಹುದಾದರೂ, ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಭೀಮಣ್ಢ ನಾಯ್ಕ ಅವರಿಗಿಂತ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಹಲವರದ್ದು.
ಬಿಜೆಪಿ ಗೆಲುವಿನ ಲೆಕ್ಕಾಚಾರದ ಕಾರಣಗಳೇನು?ಉತ್ತರ ಕನ್ನಡ ಜಿಲ್ಲೆಯ ನಾನಾ ತಾಲೂಕುಗಳ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಹೆಚ್ಚಿದ್ದು,ಕಾರವಾರ – ಅಂಕೋಲಾ ಸೇರಿದಂತೆ ಹಲವೆಡೆ ಪೌರಾಡಳಿತ ಸಂಸ್ಥೆಗಳಲ್ಲಿಯೂ ಬಿಜೆಪಿ ಪ್ರಾಬಲ್ಯವಿದೆ ಎನ್ನಲಾಗಿದೆ..ಜಿಲ್ಲೆಯ 6 ಶಾಸಕರಲ್ಲಿ ಐವರು ಶಾಸಕರು ಬಿಜೆಪಿಯವರೇ ಆಗಿರುವುದು, ಸಂಸದರು, ಸಭಾಪತಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯವರೇ ಆಗಿರುವುದು,ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದು ಇವೆಲ್ಲವೂ ಬಿಜೆಪಿಗೆ ಪ್ಲಸ್ ಪಾಯಿಂಟ್ ಎನ್ನುವ ಲೆಕ್ಕಾಚಾರ ಹಲವರದ್ದು.
ಇನ್ನು ಅಭ್ಯರ್ಥಿ ಉಳ್ವೇಕರ ಬಗ್ಗೆ ಹೇಳುವುದಾದರೆ ಜಿಲ್ಲೆಯ ಪ್ರಬಲ ಮೀನುಗಾರ ಸಮುದಾಯದ, ಸರಳ – ಸಜ್ಜನ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕವೇ ಬಿಜೆಪಿ ಗೆದ್ದಿದೆ,ಪಲಿತಾಂಶ ಘೋಷಣೆಯಷ್ಟೇ ಬಾಕಿ ಇದೆ ಎನ್ನುವವರೂ ಇದ್ದಾರೆ. ಗಣಪತಿ ಉಳ್ರೇಕರ ಇತರ ಎಲ್ಲ ಸಮುದಾಯದೊಂದಿಗೆ ಅನೋನ್ಯ ಸಂಬಂಧ ಪ್ರೀತಿ-ವಿಶ್ವಾಸ ಹೊಂದಿದ್ದಾರೆ ಹಾಗೂ ಈ ಹಿಂದೆ ಕಾರವಾರ ನಗರಸಭೆ ಅಧ್ಯಕ್ಷರಾಗಿ,ಸದಸ್ಯರಾಗಿಯೂ ಆಡಳಿತಾತ್ಮಕ ಅನುಭವ ಹೊಂದಿರುವುದಲ್ಲದೆ,ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿ ಎನಿಸಿಕೊಂಡಿರುವುದು ಅವರ ಗೆಲುವಿಗೆ ಗಣನೆಗೆ ಬರುತ್ತದೆ ಎನ್ನಲಾಗಿದೆ.
ಕಳೆದ 6 ವರ್ಷಗಳ ಹಿಂದೆ ವಿಪ ಚುನಾವಣೆಗೆ ಉಳ್ವೇಕರ ಸ್ಪರ್ಧಿಸಿದ್ಧ ಸಂದರ್ಭದಲ್ಲಿ ಬಿಜೆಪಿಯಿಂದ ಕೇವಲ ಓರ್ವರು ಶಾಸಕರು ಮಾತ್ರ ಜಿಲ್ಲೆಯಲ್ಲಿದ್ದರಷ್ಟೇ ಅಲ್ಲದೇ, ಪ್ರತಿಸ್ಪರ್ಧಿಗಳಾಗಿದ್ದ ಘೋಟ್ನೇಕರ ಪರ ಜಿಲ್ಲೆಯ ಉಳಿದ ಐವರು ಶಾಸಕರು ಕಾಂಗ್ರೆಸ್ಸಿನವರಾಗಿದ್ದರೆ , ಅವರದೇ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಲ ದೊರೆತಿತ್ತು. ಅಂತಹ ರಾಜಕೀಯ ವಿಷಮ ಪರಿಸ್ಥಿತಿಯ ನಡುವೆಯೇ ಉಳ್ವೇಕರ್ ಸಾವಿರಕ್ಕೂ ಹೆಚ್ಚು ಮತಗಳನ್ನು ಕಸಿದುಕೊಳ್ಳುವ ಮೂಲಕ ಹಲವರ ಹುಬ್ಬೇರಿಸುವಂತೆ ಮಾಡಿದ್ದರು.
ಅಂದಿನ ಉಳ್ಳೇಕರ ಸೋಲು ಸೋಲಾಗಿರದೇ ಅವರ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟಿರುವ ಬಿಜೆಪಿ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ತನ್ನ ಪ್ರಾಬಲ್ಯವನ್ನು ತೋರ್ಪಡಿಸಲು ತೊಡೆತಟ್ಟಿ ನಿಂತಂತಿದ್ದು ಉಳ್ವೇಕರ್ ಅವರ ಗೆಲುವಿಗೆ ವ್ಯವಸ್ಥಿತ ಪ್ರಚಾರ,ಇನ್ನಿತರ ರಾಜಕೀಯ ತಂತ್ರ ಗಾರಿಕೆ ನಡೆಸಿದ್ದು,ಜಿಲ್ಲೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ವಿಧಾನಪರಿಷತ್ ಸದಸ್ಯತ್ವವನ್ನು ತನ್ನದಾಗಿಸಿಕೊಳ್ಳುವುದು ಗ್ಯಾರಂಟಿ ಎನ್ನುವ ಮಾತುಗಳು ರಾಜಕೀಯ ವಲಯದಿಂದ ಅಲ್ಲಲ್ಲಿ ಬಂದಿವೆ.
ಕಳೆದ ಬಾರಿಯ ಸೋಲಿನ ಅನುಕಂಪದ ಅಲೆಯೂ ಉಳ್ಳೇಕರ ಗೆಲುವಿಗೆ ಪೂರಕ ವಾತಾವರಣ ನಿರ್ಮಿಸಿ ಈ ಬಾರಿ ಉಳ್ವೇಕರ 1600 ಕ್ಕೂ ಹೆಚ್ಚು ಮತ ಪಡೆಯಲಿದ್ದಾರೆ ಮತ್ತು ಆ ಮೂಲಕ ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಬಿಜೆಪಿ ಪಾಳಯದಲ್ಲಿ ಹೊಸ ಹುರುಪು ತಂದಂತಿದೆ.
ಕೈಗೆ ಸಿಗಲಿದೆಯೇ ಭೀಮಬಲ ?
ನಾಮಪತ್ರ ಸಲ್ಲಿಕೆ ವರೆಗೂ ಪಕ್ಷದ ಅಧಿಕೃತ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆಯ ನಡುವೆಯೇ ಭೀಮಣ್ಢ ನಾಯ್ಕ ಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಿ,ರಣರಂಗ ಕಾವೇರುವಂತೆ ಮಾಡಿದ್ದು ಸುಳ್ಳಲ್ಲ.ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿರುವ ಭೀಮಣ್ಣ ನಾಯ್ಕ್, ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಡಳಿತಾತ್ಮಕ ಅನುಭವ ಹೊಂದಿರುವುದರ ಜೊತೆ,ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ,ನೂರಾರು ಚುನಾವಣೆಗಳನ್ನು ಎದುರಿಸಿ,ತಮ್ಮ ನಾಯಕತ್ವ ಗುಣ ಪ್ರದರ್ಶಿಸಿದ್ದಾರೆ.ಹೆಸರಾಂತ ಉದ್ದಿಮೆದಾರರಾಗಿಯೂ ಗುರುತಿ ಸಿಕೊಂಡಿದ್ದಾರೆ.ಶುಭ್ರ ವಸ್ತ್ರಧಾರಿಯಾಗಿ ಕಾಣಿಸಿಕೊಳ್ಳುವ ಭೀಮಣ್ಣ ನಾಯ್ಕ,ಜಿಲ್ಲೆಯ ಬಹುಸಂಖ್ಯಾತ ನಾಮಧಾರಿ ಸಮುದಾಯದವರಾಗಿರುವುದರಿಂದ ಮತ್ತು ಪಕ್ಷ ಹಾಗೂ ವೈಯಕ್ತಿಕ ನೆಲೆಯಲ್ಲಿಯೂ ಇತರೆ ಸಮುದಾಯದೊಂದಿಗೆ ಹೊಂದಿರುವ ಆತ್ಮೀಯತೆಯಿಂದ ಹೆಚ್ಚಿನ ಮತ ಗಳಿಸಲಿದ್ದಾರೆ ಎನ್ನುವ ಲೆಕ್ಕಾಚಾರದ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದೆ.
ಕಳೆದ ಅವಧಿಯಲ್ಲಿಯೂ ವಿ.ಪ.ಸ್ಥಾನ. ಕಾಂಗ್ರೆಸ್ ಕೈನಲ್ಲಿಯೇ ಗಟ್ಟಿಯಾಗಿರುವುದು,ಜಿಲ್ಲೆಯ ರಾಜಕೀಯ ಮುತ್ಸದ್ದಿ ದೇಶಪಾಂಡೆ ಕುಟುಂಬದ ಬೆಂಬಲ, ಮಧು ಬಂಗಾರಪ್ಪ ನೇರವಾಗಿ ಅಖಾಡಕ್ಕೆ ಧುಮುಕಿ ಉತ್ಸಾಹ ಇಮ್ಮಡಿಸಿದ್ದು, ಪಕ್ಷದ ಪ್ರಮುಖ ಬಿ.ಕೆ. ಹರಿಪ್ರಸಾದ ಮತ್ತಿತರ ಹಿರಿ-ಕಿರಿ ನಾಯಕರ ಬೆಂಬಲ ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರಗಳ ಮಾಜಿ ಶಾಸಕರುಗಳ ಪ್ರಯತ್ನ ಮತ್ತು ಸಹಕಾರ,ಬಿಜೆಪಿ ಆಡಳಿತದ ವಿರುದ್ಧದ ಅಲೆ, ಮತ್ತಿತರ ಕಾರಣಗಳು ಕಾಂಗ್ರೆಸ್ ಅಭ್ಯರ್ಥಿಯ ಕೈಹಿಡಿಯಲಿದೆ ಎನ್ನುವ ಲೆಕ್ಕಚಾರದ ಮಾತುಗಳು ಅಲ್ಲಲ್ಲಿ ಕೇಳಿ ಬಂದಿದ್ದು,ಕಾಂಗ್ರೆಸ್ ತನ್ನ ಗೆಲುವನ್ನು ಮುಂದುವರಿಸಲಿದೆಯೇ ಎಂದು ಕಾದು ನೋಡಬೇಕಿದೆ.
ಆಯಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗೆಲುವು ತಮ್ಮದೇ ಎಂದು ಹೇಳಿಕೊಂಡು ನಾನಾ ರೀತಿಯಲ್ಲಿ ತರ್ಕಿಸಬಹುದಾದರೂ, ಮತದಾರ ಪ್ರಭುಗಳಿಗೆ ಪ್ರಭುಗಳಾಗಿರುವ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಲ್ಲಿ ಹಲವರು ಮಾತ್ರ ಯಾರಿಗೂ ಗುಟ್ಟು ಬಿಟ್ಟು ಕೊಡದೇ ಎರಡೂ ಪಕ್ಷದವರಿಗೆ ಮನವೊಲಿದಂತೆ ಮಾಡಿ, ಗೆಲುವಿನ ಭರವಸೆ ಮೂಡಿಸಿ,ಫಲಿತಾಂಶದ ವರೆಗೂ ಕಾಯುವಂತೆ ಕುತೂಹಲ ಮೂಡಿಸಿದ್ದಾರೆ.ಪಕ್ಷದ ಚಿಹ್ನೆ ಇಲ್ಲದಿದ್ದರೂ ಪ್ರಮುಖ ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಈ ಹಣಾಹಣಿಯಲ್ಲಿ ಇತರೆ 2 – 3 ಅಭ್ಯರ್ಥಿಗಳು ಕಣದಲ್ಲಿದ್ದು ತಮ್ಮ ಗೆಲುವು ಮತ್ತು ಅದೃಷ್ಟ ಪರೀಕ್ಷೆಗಿಂತ ಮುಖ್ಯವಾಗಿ,ಒಟ್ಟಾರೆಯಾಗಿ 50ರಿಂದ 100 ಮತಗಳನ್ನಾದರೂ ತಮ್ಮದಾಗಿಸಿಕೊಂಡು ಪ್ರಮುಖ ಅಭ್ಯರ್ಥಿಗಳ ಗೆಲುವಿಗೆ ಹಿನ್ನಡೆ ಮಾಡಲಿದ್ದಾರೆಯೇ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ರಾಜಕೀಯ ತಂತ್ರಗಾರಿಕೆ,ಹೆಜ್ಜೆಗಳು ಏನೇ ಇದ್ದರೂ, ಚುನಾವಣೆ ಎನ್ನುವುದು ಪಕ್ಷದ ಪರ ಎನ್ನುವುದಕ್ಕಿಂತ,ಪಕ್ಷ ವಿರೋಧಿ ಚಟುವಟಿಕೆಗಳಿಂದ ಅನೇಕ ಬಾರಿ ಫಲಿತಾಂಶದ ಮೇಲೆ ವ್ಯತಿರಿಕ್ತವಾಗಿ ಗಣನೀಯ ಪರಿಣಾಮ ಬೀರಿರುವುದನ್ನು ನಾನಾ ಚುನಾವಣೆಗಳ ಆಧಾರದ ಮೇಲೆ ವಿಶ್ಲೇಷಿಸ ಬಹುದಾಗಿದ್ದು, ಆಗಾಗ ಅಚ್ಚರಿಯ ಪಲಿತಾಂಶಗಳು ದಾಖಲಾಗಿರುವುದನ್ನು ಉದಾಹರಿಸಬಹುದಾಗಿದೆ.
ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ವಿ.ಪ ಚುನಾವಣೆ ಪೂರ್ವದಿಂದಲೂ ಗೆಲ್ಲುವ ವಿಶ್ವಾಸದಲ್ಲಿಯೇ ಇರುವ ಬಿಜೆಪಿ ಅಭ್ಯರ್ಥಿಗೆ , ಅದೇ ಪಕ್ಷದ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದೆ. ಯಾವುದಕ್ಕೂ ಡಿ 14ರ ವರೆಗೂ ಕಾಯಲೇ ಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ