Follow Us On

WhatsApp Group
Important
Trending

ಕಾರು ಅಡ್ಡಗಟ್ಟಿ ಸುಲಿಗೆ ನಡೆಸಿದ ಇಬ್ಬರು ಆರೋಪಿಗಳ ಬಂಧನ:ಬಯಲಾಯ್ತು ಕಾರ್ ಚಾಲಕನ ಕರಾಮತ್ತು ?. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧನ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63 ಮಾಸ್ತಿಕಟ್ಟಾ ಬಳಿ ಹುಬ್ಬಳ್ಳಿ ಮೂಲದ, ಎಲೆಕ್ಟ್ರಿಕಲ್ ಸಾಮಗ್ರಿಗಳ ಪೂರೈಕೆದಾರ,ಹಾಗೂ ಮತ್ತೋರ್ವ ತಾವು ತಂದಿದ್ದ ಹುಂಡೈ i20 ಕಾರ್ ನಲ್ಲಿ ಹುಬ್ಬಳ್ಳಿಗೆ ವಾಪಸಾಗುತ್ತಿದ್ದಾಗ,ಮಾರ್ಗಮಧ್ಯೆ ಬೈಕ್ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು,ಕಾರನ್ನು ಅಡ್ಡಗಟ್ಟಿ, ಮುಂಬದಿ ಗ್ಲಾಸಿಗೆ ಕಲ್ಲು ಜಜ್ಜಿ ಜಖಂ ಗೊಳಿಸಿ,ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿ,ಅವರ ಬಳಿಯಿದ್ದ 6 ಲಕ್ಷ ನಗದು ಹಣ, ಮೊಬೈಲ್, ಚೆಕ್‌ಗಳು, ವ್ಯವಹಾರ ಸಂಬಂಧಿ ಕಾಗದಪತ್ರಗಳುಳ್ಳ ಬ್ಯಾಗನ್ನು ಸುಲಿಗೆ ಮಾಡಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ,ದೂರು ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆ ಸಾರ್ವಜನಿಕ ವಲಯ ಹಾಗೂ ಹೆದ್ದಾರಿ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಠಿಸಿತ್ತು.

ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠೆ ಡಾ.ಸುಮನ್ ಪನ್ನೇಕರ್, ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ನೇ ಆರೋಪಿ ಹುಬ್ಬಳ್ಳಿ ಗೋಪನಕೊಪ್ಪ ನಿವಾಸಿ ಉಮೇಶ ಭೀಮಪ್ಪ ಬಂಕಾಪುರ(21) ಬೈಕ್ ಮೇಲೆ ಬಂದು ಈ ಕೃತ್ಯ ನಡೆಸಿದ್ದು, ಹಣ ಸುಲಿಗೆ ಮಾಡಲು ಕಾರ್ ಚಾಲನೆ ಮಾಡುತ್ತಲೇ ಸ್ಕೆಚ್ ರೂಪಿಸಿದ್ದ ತಾರಿಹಾಳ ನಿವಾಸಿ ರೋಹಿತ್ ಪರಶುರಾಮ ವಡ್ಡರ್ (21) ) ಈ ಇಬ್ಬರೂ ಆರೋಪಿಗಳನ್ನು ಬಂಧಿಸಿ ಅವರಿಂದ 4.47 ಲಕ್ಷ ನಗದು, ಕಳ್ಳತನಕ್ಕೆ ಬಳಸಿದ್ದ ಮೋಟಾರು ಬೈಕ್, ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.

ಈರ್ವರು ಆರೋಪಿತರ ಜೊತೆ ಓರ್ವ ಅಪ್ರಾಪ್ತ ಬಾಲಕನು ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಆರೋಪಿಗಳಲ್ಲಿ ರೋಹಿತ್ ಎಂಬಾತ ವೃತ್ತಿಯಿಂದ ಡೈವರ್ ಆಗಿದ್ದು, ಈತ ವ್ಯಾಪಾರಸ್ಥರು, ಇಲ್ಲವೇ ಅವರ ವ್ಯವಹಾರಿಕ ಪ್ರತಿನಿಧಿಗಳ ಜೊತೆ ಅವರ ಕಾರ ಚಾಲಕನಾಗಿ ಆಗಾಗ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಈ ವೇಳೆ ವ್ಯಾಪಾರಸ್ಥರ ಹಣದ ವ್ಯವಹಾರ – ಚಲನ ವಲನಗಳ ಮೇಲೆ ಕಣ್ಣಿಟ್ಟು ಕಳೆದ ಹಲವು ದಿನಗಳಿಂದ ತನ್ನ ಸಂಗಡಿಗರೊಂದಿಗೆ ಸೇರಿ ಕೃತ್ಯ ನಡೆಸಲು ಸಂಚು ರೂಪಿಸಿದ್ದು,ಪೊಲೀಸರ ಕಾರ್ಯಾಚರಣೆಯಿಂದ ಕಾರ್ ಚಾಲಕನ ಅಸಲಿಯತ್ತು ಬಯಲಾಗಿದ್ದು ಈಗ ಕಂಬಿ ಎಣಿಸುವಂತಾಗಿದೆ.

ಬುಧವಾರ ರಾತ್ರಿ 11.30ರ ಸುಮಾರಿಗೆ ಹುಬ್ಬಳ್ಳಿಯಿಂದ ಬಂದು ಕಾರವಾರ ಅಂಕೋಲಾ ಸುತ್ತ ಮುತ್ತ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಪೂರೈಸಿ ಹಣ ಸಂಗ್ರಹಿಸಿ ರಾತ್ರಿ ತೆರಳುತ್ತಿದ್ದ ವೇಳೆ, ಬೈಕ್ ಮೇಲೆ ಬಂದ ಆರೋಪಿ ಉಮೇಶ ಬಂಕಾಪುರ, ಬಾಲ ಅಪರಾಧಿ ಜೊತೆ ಸೇರಿ ಕೊಂಡು ವ್ಯಾಪಾರಸ್ಥ ಹುಬ್ಬಳ್ಳಿ ನಿವಾಸಿ ವಿನೋದ ಲಾಲಚಂದ್ರ ಬನ್ಸಾಲಿ ಮತ್ತು ಕೇವಲಚಂದ್ ಜೈನ್ ಎನ್ನುವವರ ಮೇಲೆ ಬಲವಾದ ಹಲ್ಲೆ ನಡೆಸಿ ಕಾರಿನ ಗ್ಲಾಸನ್ನು ಜಖಂ ಗೊಳಿಸಿ, ಕಾರನಲ್ಲಿದ್ದವರ ಹಣ,ಮೊಬೈಲ್, ಚೆಕಗಳು ಮತ್ತಿತರ ಸ್ವತ್ತುಗಳುಳ್ಳ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾದ್ದರು.

ಈ ಕುರಿತಂತೆ ವಿನೋದ ಲಾಲಚಂದ್ರ ಬನ್ಸಾಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಅಂಕೋಲಾ
ಆರಕ್ಷಕ ನಿರೀಕ್ಷಕ ಸಂತೋಷ ಶೆಟ್ಟಿ ,
ಪ್ರೊ ಪಿ.ಎಸ್. ಐ ಮುಶಾಹಿದ್ ಅಹಮದ್ ಹಾಗೂ ಸಿಬ್ಬಂದಿಗಳು ಚುರುಕಿನ ಕಾರ್ಯಚರಣೆ ನಡೆಸಿ,ಸುಲಿಗೆ ಪ್ರಕರಣ ದಾಖಲಾಗಿ, ದಿನ ಕಳೆಯುವಷ್ಟರಲ್ಲಿ ಆರೋಪಿಗಳನ್ನು ಬಂಧಿಸಿ, ನಗದು ಮತ್ತಿತರ ಸ್ವತ್ತು ವಶಪಡಿಸಿಕೊಂಡ ಅಂಕೋಲಾ ಠಾಣೆಯ ಸಿಪಿಐ ಸಂತೋಷ್ ಶೆಟ್ಟಿ ಮತ್ತು ಸಿಬ್ಬಂದಿಗಳ ಸಾಧನೆಗೆ ಎಸ್. ಪಿ ಸುಮನ್ ಪನ್ನೇಕರ್ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಯಶಸ್ವೀ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪರಮೇಶ ಎಸ್, ಅಸೀಫ್ ಕುಂಕೂರ, ಮಂಜುನಾಥ ಲಕ್ಮಾಪುರ, ಸುರೇಶ ಬಳ್ಳೊಳ್ಳಿ, ಗುರುರಾಜ ನಾಯ್ಕ , ಚಾಲಕ ಸತೀಶ ನಾಯ್ಕಇತರರು ಪಾಲ್ಗೊಂಡಿದ್ದರು. ಬಂಧಿತ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ. ಮತ್ತು ಬಾಲಪರಾಧಿಯನ್ನು ಬಾಲಮಂದಿರ ಕ್ಕೆ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಇದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button