Follow Us On

WhatsApp Group
Important
Trending

ಚಿರತೆಯ ನಾಲ್ಕು ಪಾದ ಕತ್ತರಿಸಿದ ಇಬ್ಬರು ಆರೋಪಿಗಳ ಬಂಧನ: ಅರಣ್ಯಾಧಿಕಾರಿಗಳ ಕಾರ್ಯಾಚರಣೆ

ಸಿದ್ದಾಪುರ: ಚಿರತೆಯ ಪಂಜು ( ಪಾದ) ಗಳನ್ನು ಕದ್ದೊಯ್ದ ಘಟನೆಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಚಿರತೆಯ ನಾಲ್ಕು ಪಂಜುಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಅರಣ್ಯ ಸರ್ವೇ ನಂಬರ್ 177 ರಲ್ಲಿ ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುತ್ತಿರುವಾಗ ಚಿರತೆಯೊಂದು ಅನುಮಾನಾಸ್ಪದವಾಗಿ ಸತ್ತು ಬಿದ್ದಿರುವುದು ಕಂಡುಬಂದಿದೆ.

ಅದರ ಮೃತ ದೇಹವನ್ನು   ಹಾರ್ಸಿಕಟ್ಟಾ ಪಶುವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ಮಾಡುವ ಸಮಯದಲ್ಲಿ ಚಿರತೆಯ 4 ಪಂಜುಗಳನ್ನು ಕತ್ತರಿಸಿರುವುದು ಕಂಡುಬಂದಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಜಿ ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿಎನ್ ಹರೀಶ್ ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವಾನಂದ  ಎಸ್ ನಿಂಗಾಣಿ ನೇತ್ರತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ವಿನಾಯಕ ಮಡಿವಾಳ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿ ನಾಲ್ಕು ಪಂಜುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ  ಮತ್ತಹಳ್ಳಿ ಗ್ರಾಮದ ದೊಡ್ಡಣೆಕೊಡ್ಲಿನ  ಮೂರ್ತಿ ಗಣಪತಿ ನಾಯ್ಕ, ಭಂಡಾರಕೇರಿ ಗ್ರಾಮದ ಕಲ್ಮನೆಯ  ಕೇಶವ ಗೋವಿಂದ ಗೌಡ ರನ್ನು ಬಂಧಿಸಿದ್ದು ಚಿರತೆಯ 4 ಪಂಜು, ಒಂದು ಕತ್ತಿ, ಒಂದು ಉರುಳು, ಒಂದು ಒಣ ಕಟ್ಟಿಗೆ ತುಂಡು, ಬಳ್ಳಿ ತೆಗೆಯಲು ಬಳಸಿದ ಕಟ್ಟಿಗೆ, ಚಿರತೆಯ ದೇಹ ಎಳೆಯಲು ಬಳಸಿದ ಮರದ ಬಳ್ಳಿಗಳನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 9 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಂಜುನಾಥ್ ಚಿನ್ನಣ್ಣವರ್, ಮಂಜುನಾಥ ಆರ್ ಹುಲ್ಲೂರ್, ಗುಡದಯ್ಯ ಅಪ್ಪಿನಬೈಲ್, ಜಿ ಸಂಧ್ಯಾರಾಣಿ, ದೇವದಾಸ ನಾಯ್ಕ, ಹನುಮಂತ ಕಿಲಾರಿ,  ಮಾರುತಿ ನಾಯ್ಕ  ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button