ಮೋತಿಗುಡ್ಡದಲ್ಲಿ ರೂಪುಗೊಂಡ ಅಶ್ವತ್ಥಧಾಮ ;ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರ ನೆನಪಿನ ನೆಲೆ, ಜ.14ರಂದು ಲೋಕಾರ್ಪಣೆ
ಕಾರವಾರ: ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ ಅವರು ನೆಲೆಸಿದ್ದ ಅಂಕೋಲಾ ತಾಲೂಕಿನ ಮೋತಿಗುಡ್ಡದಲ್ಲಿ ಭಾಗವತರ ಹೆಸರು, ನೆನಪನ್ನು ಚಿರಸ್ಥಾಯಿಯಾಗಿಸುವ ಆರಂಭಿಕ ಹಂತದ ಅಭಿವೃದ್ಧಿ ಕಾಮಗಾರಿಗಳ ಅಶ್ವತ್ಥಧಾಮ ಪೂರ್ಣಗೊಂಡಿದೆ. ಜ.14ರ ಮಕರ ಸಂಕ್ರಾಂತಿಯಂದು “ಅಶ್ವತ್ಥಧಾಮ” ಲೋಕಾರ್ಪಣೆಯಾಗಲಿದೆ. ಮಕರಸಂಕ್ರಾಂತಿಯಂದು ಭಾಗವತರ ಪುಣ್ಯತಿಥಿಯೂ ಆಗಿರುವುದು ವಿಶೇಷವಾಗಿದೆ.
ಮೋತಿಗುಡ್ಡದಲ್ಲಿ ಏನೆಲ್ಲ ಆಗಿದೆ?ಮೋತಿಗುಡ್ಡದಲ್ಲಿ ಹೊಸ್ತೋಟ ಮಂಜುನಾಥ ಭಾಗವತರ ಅತ್ಯಾಕರ್ಷಕ ಪುತ್ಥಳಿ ಸ್ಥಾಪನೆಯಾಗಿದೆ. ಕಾರ್ಕಳದ ಪ್ರಸಿದ್ಧ ಶಿಲ್ಪಕಲಾ ಶಿಕ್ಷಕ ಗುಣವಂತೇಶ್ವರ ಭಟ್ ಈ ಪುತ್ಥಳಿಯನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಭಾಗವತರು ಅಶ್ವತ್ಥ ವೃಕ್ಷದ ಕೆಳಗಡೆ ಕುಳಿತು ಧ್ಯಾನ, ಯಕ್ಷಗಾನ ಕೃತಿ ರಚನೆ, ಆಧ್ಯಾತ್ಮಿಕ ಸಾಧನೆ, ಕಲಿಕಾಸಕ್ತರಿಗೆ ತರಬೇತಿ. ಇವೆಲ್ಲವನ್ನೂ ಮಾಡುತ್ತಿದ್ದರು.
ಈ ಅಶ್ವತ್ಥ ವೃಕ್ಷ ಭಾಗವತರಿಗಷ್ಟೇ ಅಲ್ಲ, ಅವರ ಮೂಲಕ ಯಕ್ಷಗಾನ ಕ್ಷೇತ್ರಕ್ಕೇ ಆಕ್ಸಿಜನ್ ಆಗಿತ್ತು. ಅಶ್ವತ್ಥವೃಕ್ಷ ಕಟ್ಟೆಯನ್ನು ಸುಸಜ್ಜಿತಗೊಳಿಸಿ ಶೆಡ್ ನಿರ್ಮಿಸಬಕೆನ್ನುವುದು ಭಾಗವತರ ಆಸೆಯಾಗಿತ್ತು. ಅದಕ್ಕಾಗಿ ಪ್ರಯತ್ನವನ್ನೂ ಆರಂಭಿಸಿದ್ದರು. ಅಷ್ಟರಲ್ಲಿ ಅವರು ಇಹಲೋಕ ತ್ಯಜಿಸಿದರು. ಈಗ ಅರಳಿಮರಕ್ಕೆ ಕಟ್ಟೆ ನಿರ್ಮಿಸಿ, ತಗಡಿನ ಮೇಲ್ಛಾವಣಿ ಹಾಕಲಾಗಿದೆ. ಮಂಜುನಾಥ ಭಾಗವತರು ವಾಸಿಸುತ್ತಿದ್ದ ಕುಟೀರವನ್ನು ಯಥಾಸ್ಥಿತಿಯಲ್ಲೇ ಕಾಪಾಡಿಕೊಳ್ಳಲಾಗಿದೆ. ಅದಕ್ಕೆ ಪೇಂಟಿಂಗ್ ಮಾಡಿ, ಭಾಗವತರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಭಾಗವತರ ಉಸಿರಾದ ಯಕ್ಷಗಾನದ ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಖ್ಯಾತ ಕಲಾವಿದ ಸತೀಶ ಯಲ್ಲಾಪುರ ಹಾಗೂ ಸಂಗಡಿಗರು ಭಾಗವತರ ಚಿತ್ರಗಳನ್ನು ರಚಿಸಿ ಮೆರುಗು ತಂದಿದ್ದಾರೆ.
ಭಾಗವತರ ದೈನಂದಿನ ಬಳಕೆಯ ವಸ್ತುಗಳನ್ನು ಕಾದಿಡಲಾಗಿದೆ. ಅಶ್ವತ್ಥ ವೃಕ್ಷದ ಅಡಿಯಲ್ಲಿ ಭಾಗವತರು ಧ್ಯಾನ ಮಾಡಲು ನಿರ್ಮಿಸಿದ್ದ ಪೀಠವನ್ನು ಸುಸ್ಥಿತಿಗೆ ತರಲಾಗಿದೆ. ಅಶ್ವತ್ಥಧಾಮದ ಪ್ರದೇಶವನ್ನು ಸಮತಟ್ಟುಗೊಳಿಸಲಾಗಿದೆ. ಭಾಗವತರ ಪರಿಚಯ, ಸಾಧನೆಯನ್ನು ಬಿಂಬಿಸುವ ಶಿಲಾಫಲಕ ಅಳವಡಿಸಲಾಗಿದೆ. ಭಾಗವತರ ಅಭಿಮಾನಿಗಳು, ಶಿಷ್ಯರು ನಾಡಿನ ವಿವಿಧೆಡೆ ಇದ್ದಾರೆ. ಆದರೆ ಭಾಗವತರ ಹೆಸರನ್ನು ನೆನಪಿಸುವ, ಆ ನೆನಪನ್ನು ಶಾಶ್ವತವಾಗಿಡುವ ಹಾಗೂ ಭಾಗವತರ ಅಂತಿಮ ಆಸೆಗಳನ್ನು ಈಡೇರಿಸುವ ಉದ್ದೇಶದಿಂದ ಮೋತಿಗುಡ್ಡದ ಪರಿಸರವನ್ನು ಅಭಿವೃದ್ಧಿಗೊಳಿಸುವ ಪ್ರಯತ್ನ ನಡೆಸಲಾಗಿದೆ. ಇದಕ್ಕೆ ಭಾಗವತರಿಗೆ ಪ್ರಿಯವಾದ ಅಶ್ವತ್ಥಧಾಮ ಎಂದು ಹೆಸರಿಸಲಾಗಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ಕಳವೆ ತಿಳಿಸಿದ್ದಾರೆ.
ರೂಪಾಲಿ ಕೊಡುಗೆ: ತಮ್ಮ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ವಾಸ್ತವ್ಯ ಮಾಡಿ, ಯಕ್ಷಗಾನಕ್ಕೆ ಕೊಡುಗೆ ನೀಡಿರುವುದು ನಮ್ಮೆಲ್ಲರ ಭಾಗ್ಯ ಎಂದು ಅಭಿಪ್ರಾಯಪಟ್ಟ ಶಾಸಕಿ ರೂಪಾಲಿ ನಾಯ್ಕ ತಮ್ಮ ಸ್ವಂತ ವೆಚ್ಚದಲ್ಲಿ ಈ ಸ್ಥಳವನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು. ನುಡಿದಂತೆ ನಡೆದ ಶಾಸಕಿ, ಭಾಗವತರ ಪ್ರತಿಮೆ, ಅಶ್ವತ್ಥ ವೃಕ್ಷದ ಕಟ್ಟೆ ಸರಿಪಡಿಸಿದ್ದು, ಪ್ಲಾಸ್ಟರ್ ಹಾಕಿಸಿದ್ದು, ಶೆಡ್ ನಿರ್ಮಾಣ, ಕುಟೀರಕ್ಕೆ ಬಣ್ಣ ಬಳಿದು ಒಪ್ಪ ಓರಣವಾಗಿಸಿದ್ದು, ಶಿಲಾ ಫಲಕ, ಭಾವಚಿತ್ರಗಳು ಹೀಗೆ ಪ್ರತಿಯೊಂದರ ವೆಚ್ಚವನ್ನೂ ಭರಿಸಿ, ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಮೋತಿಗುಡ್ಡದಲ್ಲಿ ಅಶ್ವತ್ಥ ವೃಕ್ಷಕ್ಕೆ ಶೆಡ್ ನಿರ್ಮಿಸಬೇಕೆನ್ನುವುದು ಹೊಸ್ತೋಟ ಅವರ ಕನಸಾಗಿತ್ತು. ಅದನ್ನು ಈಡೇರಿಸುವ ಮೂಲಕ ಭಾಗವತರ ಕನಸನ್ನು ರೂಪಾಲಿ ನಾಯ್ಕ ಸಾಕಾರಗೊಳಿಸಿದ್ದಾರೆ. ಅಶ್ವತ್ಥಧಾಮವನ್ನು ಅಭಿವೃದ್ಧಿಪಡಿಸಿ ಭಾಗವತರ ನೆನಪನ್ನು ಚಿರಸ್ಥಾಯಿಯಾಗಿಸಿದ್ದಾರೆ.
ಭಾಗವತರಿಗೆ ಮೋತಿಗುಡ್ಡ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಇಲ್ಲಿ ಅವರ ನೆನಪನ್ನು ಅಜರಾಮರವಾಗಿಸಲು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅಶ್ವತ್ಥಧಾಮ ಅಭಿವೃದ್ಧಿಗೆ ಶಾಸಕಿ ರೂಪಾಲಿ ನಾಯ್ಕ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ಊರಿನ ಜನತೆ, ಭಾಗವತರ ಅಭಿಮಾನಿಗಳ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.ಭಾಸ್ಕರ್ ಹೆಗಡೆ- ಮೋತಿಗುಡ್ಡ ನಿವಾಸಿ.
ಜ.14ರಂದು ಮಧ್ಯಾಹ್ನ 3 ಗಂಟೆಗೆ ಶಾಸಕರಾದ ರೂಪಾಲಿ ಸಂತೋಷ ನಾಯ್ಕ ಅಶ್ವತ್ಥಧಾಮವನ್ನು ಉದ್ಘಾಟಿಸಲಿದ್ದಾರೆ. ಪರಿಸರ ಬರಹಗಾರ, ಜಲ ಕಾರ್ಯಕರ್ತ ಶಿವಾನಂದ ಕಳವೆ ಅಧ್ಯಕ್ಷತೆ ವಹಿಸಲಿದ್ದಾರೆ. ಊರಿನ ಗಣ್ಯರಾದ ಮಾಧವ ಹೊಸ್ಮನೆ ಉಪಸ್ಥಿತರಿರುವರು. ಸಂಜೆ 4 ಗಂಟೆಯಿಂದ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಉಚಿತ ಪ್ರದರ್ಶನ ನಡೆಯಲಿದೆ.
ಹೊಸ್ತೋಟ ಮಂಜುನಾಥ ಭಾಗವತ ಹೊಸ್ತೋಟ ಮಂಜುನಾಥ ಭಾಗವತ ಯಕ್ಷಗಾನದ ವಿಶ್ವಕೋಶ. 4ನೇ ತರಗತಿ ಓದಿದ ಇವರು 250ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿ, ವಿವಿಧೆಡೆ ಸಾವಿರಾರು ಜನರಿಗೆ ತರಬೇತಿ ನೀಡಿ ಯಕ್ಷಗಾನವನ್ನು ಶ್ರೀಮಂತಗೊಳಿಸಿದ ಯಕ್ಷಗುರು. ಕೇಂದ್ರ ಸಂಗೀತ ಅಕಾಡೆಮಿ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದ ಸಾಧಕರು. ಅವಧೂತರಾಗಿ ಅದ್ವಿತೀಯ ಸಾಧನೆ ಮಾಡಿದ ಮಹಾನ್ ಶಕ್ತಿ.