Follow Us On

WhatsApp Group
Big News
Trending

ಕೂರ್ಮಗಡ ದ್ವೀಪದಲ್ಲಿ ಸರಳವಾಗಿ ನಡೆದ ನರಸಿಂಹ ದೇವರ ಜಾತ್ರೆ – ಎರಡು ಡೋಸ್ ಲಸಿಕೆ ಪಡೆದ ನಿಗದಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ – ಪೊಲೀಸರಿಂದ ಬಿಗಿ ತಪಾಸಣೆ

ಕಾರವಾರ: ಅದು ದ್ವೀಪದಲ್ಲಿ ನಡೆಯುವ ವಿಶೇಷ ಜಾತ್ರೆ. ಈ ಜಾತ್ರೆಗೆ ದೋಣಿಗಳಲ್ಲಿ ತೆರಳುವುದೇ ಒಂದು ವಿನೂತನ ಅನುಭವವಾದ್ದರಿಂದ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಜನರು ಜಾತ್ರೆಗೆ ಆಗಮಿಸುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಜಾತ್ರೆಯನ್ನ ಕಟ್ಟುನಿಟ್ಟಾಗಿ ಮಾಡಲಾಗುತ್ತಿದ್ದು ಅನುಮತಿ ಪಡೆದ ಸ್ಥಳೀಯರಿಗೆ ಮಾತ್ರ ಜಾತ್ರೆಗೆ ತೆರಳಲು ಅವಕಾಶ ನೀಡಿದ್ದರಿಂದಾಗಿ ಜಾತ್ರೆ ಅಂದಕಳೆದುಕೊಳ್ಳುವoತಾಗಿದೆ. ಅಷ್ಟಕ್ಕೂ ಈ ಜಾತ್ರೆ ನಡೆಯುವುದಾದರೂ ಎಲ್ಲಿ, ಏನಿದರ ವಿಶೇಷ ಅನ್ನೋದನ್ನ ಹೇಳ್ತೀವಿ ಈ ಸ್ಟೋರಿ ನೋಡಿ…

ಒಂದೆಡೆ ತಳಿರು ತೋರಣಗಳಿಂದ ಸಿಂಗಾರಗೊoಡಿರುವ ಮೀನುಗಾರಿಕಾ ಬೋಟುಗಳು. ಇನ್ನೊಂದೆಡೆ ಬಂದರಿಗೆ ಆಗಮಿಸುತ್ತಿರುವವರನ್ನ ತಪಾಸಣೆ ಮಾಡಿ ಬಿಡುತ್ತಿರುವ ಪೊಲೀಸರು. ಮತ್ತೊಂದೆಡೆ ಮಾಸ್ಕ್ ಧರಿಸಿ, ಲೈಫ್ ಜಾಕೆಟ್ ಹಾಕಿಯೇ ಬೋಟಿನಲ್ಲಿ ತೆರಳುವಂತೆ ಜನರಿಗೆ ಸೂಚನೆ ನೀಡುತ್ತಿರುವ ಅಧಿಕಾರಿಗಳು. ಈ ಎಲ್ಲ ದೃಶ್ಯಗಳು ಕಂಡುಬoದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಬಂದರಿನಲ್ಲಿ. ಮೀನುಗಾರರ ಆರಾಧ್ಯದೈವವಾದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಜರುಗಿದ್ದು ಕೊರೊನಾ ಆತಂಕದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವಿಜೃಂಭಣೆಯಿoದ ಜರುಗುತ್ತಿದ್ದ ಜಾತ್ರೆ ಸರಳವಾಗಿ ನಡೆಯಿತು.

ಕಾರವಾರದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಜರುಗುತ್ತದೆ. ವರ್ಷಕ್ಕೊಮ್ಮೆ ಜರುಗುವ ಜಾತ್ರೆಗೆ ಕೇವಲ ಮೀನುಗಾರರಷ್ಟೇ ಅಲ್ಲದೇ ವಿವಿಧೆಡೆಗಳಿಂದಲೂ ಜನರು ಆಗಮಿಸುತ್ತಿದ್ದರು. ಬೋಟಿನಲ್ಲಿ ಜಾತ್ರೆಗೆ ತೆರಳುವುದೇ ಒಂದು ವಿಶಿಷ್ಟ ಅನುಭವವಾಗಿದ್ದು ದ್ವೀಪದಲ್ಲಿನ ಸುಂದರ ಪರಿಸರ ಜಾತ್ರೆಗೆ ಬಂದವರಿಗೆ ಪ್ರವಾಸದ ಅನುಭವ ನೀಡುತ್ತಿತ್ತು. ಆದ್ರೆ ಈ ಬಾರಿ ಕೊರೊನಾ ಅಬ್ಬರ ಹೆಚ್ಚಾಗಿರುವ ಹಿನ್ನಲೆ ಜಾತ್ರೆಗಳನ್ನ ನಡೆಸದಂತೆ ಸರ್ಕಾರದ ಆದೇಶದಿಂದಾಗಿ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಅದರಲ್ಲೂ ಎರಡು ಡೋಸ್ ಲಸಿಕೆ ಪಡೆದ ನಿಗದಿತ ಸಂಖ್ಯೆಯ ಜನರಿಗೆ ಮಾತ್ರ ಪಾಸ್ ವಿತರಿಸಲಾಗಿದ್ದು ಪಾಸ್ ಇದ್ದವರಿಗೆ ಮಾತ್ರ ಜಾತ್ರೆಗೆ ತೆರಳಲು ಅನುಮತಿ ನೀಡಲಾಗಿತ್ತು. ಪರಿಣಾಮ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದ ಜಾತ್ರೆಗೆ ಈ ಬಾರಿ ಭಕ್ತರ ಸಂಖ್ಯೆ ತೀರಾ ಇಳಿಕೆಯಾಗಿದೆ. ಕೊರೊನಾ ಕಟ್ಟುನಿಟ್ಟಿನ ಕ್ರಮಗಳಿಂದಾಗಿಯೇ ಜಾತ್ರೆಗೆ ಆಗಮಿಸುವವರ ಸಂಖ್ಯೆ ಇಳಿಕೆಯಾಗಿದೆ ಅಂತಾ ಭಕ್ತರು ತಿಳಿಸಿದ್ದಾರೆ.

ಇನ್ನು ಪ್ರತಿವರ್ಷ ಜನವರಿ ತಿಂಗಳ ಹುಣ್ಣಿಮೆ ದಿನದಂದು ಕೂರ್ಮಗಡದ ನರಸಿಂಹ ದೇವರ ಜಾತ್ರೆ ನಡೆಯುತ್ತದೆ. ನರಸಿಂಹ ದೇವರಿಗೆ ಬಾಳೆಗೊನೆ ಸೇವೆ ನೀಡುವುದು ವಿಶೇಷವಾಗಿದ್ದು ದೇವರಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಅಲ್ಲದೇ ಮೀನುಗಾರರು ಪ್ರತಿವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆಯನ್ನ ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ಳುತ್ತಾರೆ.

ಇನ್ನು ಕೊರೊನಾ ಆತಂಕ ಹಿನ್ನಲೆ ಈ ಬಾರಿ ಗೋವಾ, ಮಹಾರಾಷ್ಟ್ರ ಭಾಗದ ಭಕ್ತರು ಆಗಮಿಸಿಲ್ಲವಾಗಿದ್ದು ಭಕ್ತರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಅಲ್ಲದೇ ಕಳೆದೆರಡು ವರ್ಷಗಳ ಹಿಂದೆ ಬೋಟು ದುರಂತ ಸಂಭವಿಸಿ ಪ್ರಾಣಹಾನಿ ಉಂಟಾಗಿದ್ದ ಹಿನ್ನಲೆ ಜಾತ್ರೆಗೆ ತೆರಳಲು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದ್ದು ಸಮುದ್ರದಲ್ಲಿ ಕೋಸ್ಟ್ಗಾರ್ಡ್, ಕರಾವಳಿ ಕಾವಲುಪಡೆ ಬೋಟುಗಳು ಗಸ್ತು ತಿರುಗುತ್ತಿದ್ದವು. ಇನ್ನು ಕೊರೊನಾ ಮಾರ್ಗಸೂಚಿಯಂತೆ ದೇವಸ್ಥಾನಕ್ಕೆ ಆಗಮಿಸಿದವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದ್ದು ಬಾಳೆಗೊನೆ ಸೇವೆ ಹೊರತುಪಡಿಸಿ ಇತರೆ ಯಾವುದೇ ಸೇವೆಗಳಿಗೂ ಅವಕಾಶ ನೀಡಿಲ್ಲ ಅಂತಾ ದೇವಸ್ಥಾನ ಕಮಿಟಿ ಸದಸ್ಯರು ತಿಳಿಸಿದ್ದಾರೆ.

ಒಟ್ಟಾರೇ ಪ್ರತಿವರ್ಷ ವಿಜೃಂಭಣೆಯಿoದ ನಡೆಯುತ್ತಿದ್ದ ನರಸಿಂಹ ದೇವರ ಜಾತ್ರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಸರಳವಾಗಿ ನಡೆಯುವಂತಾಗಿದ್ದು ಜಾತ್ರೆಯಂದು ಭಕ್ತರಿಂದಲೇ ತುಂಬಿರುತ್ತಿದ್ದ ಕೂರ್ಮಗಡ ದ್ವೀಪ ಈ ಬಾರಿ ಖಾಲಿ ಖಾಲಿ ಹೊಡೆಯುವಂತಾಗಿದ್ದoತೂ ಸತ್ಯ.

ವಿಸ್ಮಯ ನ್ಯೂಸ್, ಕಾರವಾರ

Back to top button