ಕುಮಟಾ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಜೊತೆಜೊತೆಗೆ ಜೀವನ ಮೌಲ್ಯಗಳ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂಬ ಧ್ಯೇಯೋದ್ದೇಶದಿಂದ ಕುಮಟಾದ ಗೋರೆ ಪರ್ವತದ ರಮಣೀಯ ಹಾಗೂ ಅತ್ಯುನ್ನತ ಪ್ರದೇಶದಲ್ಲಿ ರೂಪುಗೊಂಡಿರುವ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಒಂದು ದಿನದ ವ್ಯಕ್ತಿತ್ವ ವಿಕಸನ ಉಪನ್ಯಾಸ ನಡೆಯಿತು..
ಸಂಪನ್ಮೂಲ ವ್ಯಕ್ತಿಗಳೂ, ಕಾರ್ಯಕ್ರಮದ ಕೇಂದ್ರಬಿಂದುಗಳೂ ಆದ ಕೇಂದ್ರ ಸರ್ಕಾರದ ಸಂಪರ್ಕ ಇಲಾಖೆಯ ಮಾಜಿ ಹೆಚ್ಚುವರಿ ಕಾರ್ಯದರ್ಶಿಗಳಾದ ಮೈಸೂರಿನ ಶ್ರೀ ಸಿ ವಿ ಗೋಪಿನಾಥ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮಾತನಾಡುತ್ತಾ “ಮಾನವೀಯ ಮೌಲ್ಯಗಳು ಬದುಕಿಗೆ ಆಧಾರ ಸ್ತಂಭಗಳಿದ್ದಂತೆ. ಹಾಗಯೇ ಅವು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳು ಕೂಡ ಹೌದು. ಮೌಲ್ಯಗಳು ಬದುಕಿನ ಜೀವಾಳವಾಗಿದ್ದು, ಯುವಜನರು ಅವುಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿರಬೇಕು.
ಮೌಲ್ಯಗಳಿಲ್ಲದ ಜೀವನ ವ್ಯರ್ಥ. ಅವುಗಳನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕಗೊಳ್ಳುವುದು. ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ-ನಿಯಮ, ಆದರ್ಶ, ಶಿಸ್ತು, ಸಂಸ್ಕಾರ, ಮಾನವೀಯ ಗುಣ, ಸದಾಚಾರ, ಉತ್ತಮ ನಡವಳಿಕೆಗಳೇ ಮೌಲ್ಯಗಳಾಗಿವೆ. ಅನೇಕ ಮೌಲ್ಯಗಳ ಕುರಿತು ನಾವು ಗುರು-ಹಿರಿಯರಿಂದ ತಿಳಿದುಕೊಂಡಿರುತ್ತೇವೆ. ಆದರೆ ಜೀವನದಲ್ಲಿ ಈ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತೇವೆ ಎನ್ನುವುದು ಮುಖ್ಯ. ವ್ಯಕ್ತಿಯ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸರಿ; ಯಾವುದು ತಪ್ಪು, ಯಾವುದಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಜೀವನದ ಗುರಿ ಏನಾಗಿರಬೇಕು ಮುಂತಾದವುಗಳನ್ನು ನಿರ್ಧರಿಸುವುದರಲ್ಲಿ ನಾವು ಒಪ್ಪಿಕೊಂಡಿರುವ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ” ಎಂದು ತಮ್ಮ ಜೀವನದ ಅನೇಕ ಸಂಗತಿಗಳನ್ನು ಉದಾಹರಣೆಯಾಗಿ ನೀಡಿ ಅದ್ಭುತವಾಗಿ ವಿವರಿಸಿದರು..
ಇದೇ ಸಂದರ್ಭದಲ್ಲಿ ಉಪಸ್ಥತರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ|| ಜಿ ಜಿ ಹೆಗಡೆಯವರು ಮಾತನಾಡಿ, “ಶ್ರೀಯುತ ಸಿ ವಿ ಗೋಪಿನಾಥ್ ರವರ ಜೀವನ, ಸಾಧನೆ ನಮ್ಮೆಲ್ಲರಿಗೆ ಸ್ಪೂರ್ತಿದಾಯಕವಾದದ್ದು.. ಅವರು ಇಂದು ಪ್ರತಿಪಾದಿಸಿದ ಜೀವನದ ಮೌಲ್ಯಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಅಣಿಯಾಗಬೇಕು.. ತನ್ಮೂಲಕ ಸಮಾಜದಲ್ಲಿ ಆದರ್ಶಪ್ರಾಯರಾಗಿ ಬದುಕಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು..
ಕಾರ್ಯಕ್ರಮದ ಮೊದಲಲ್ಲಿ ಕುಮಾರಿ ಸಿಂಧು ಹೆಗಡೆ ಮತ್ತು ಕುಮಾರಿ ರಕ್ಷಿತಾ ಹೆಗಡೆ ಪ್ರಾರ್ಥಿಸಿದರು.. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಡಿ ಎನ್ ಭಟ್ಟ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು.. ಕಾರ್ಯಕ್ರಮದ ಕೊನೆಯಲ್ಲಿ ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಜೋಸ್ಟೋಮ್ ಏ ಟಿ ಯವರು ವಂದಿಸಿದರು.. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕುಮಾರಿ ನಯನಾ ಕಾರ್ಯಕ್ರಮವನ್ನು ನಿರೂಪಿಸಿದರು..
ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು, ಕುಮಟಾದ ಖ್ಯಾತ ವೈದ್ಯರಾದ ಡಾ|| ಸುರೇಶ್ ಹೆಗಡೆ, ಶಿಕ್ಷಣ ಪ್ರೇಮಿಗಳಾದ ಶಿರಸಿಯ ಶ್ರೀ ವಿಶ್ವೇಶ್ವರ ಭಟ್ಟ, ಡಾ|| ಶಂಕರ್ ಭಟ್ಟ ಧಾರೇಶ್ವರ, ಕುಮಟಾ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ|| ಆನಂದ್ ನಾಯ್ಕ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..
ವಿಸ್ಮಯ ನ್ಯೂಸ್, ಕುಮಟಾ