ಯಾಣದ ಪ್ರವಾಸೋದ್ಯಮಕ್ಕೆ ಸಿಗಲಿದೆ ಒತ್ತು : ಬಹುನಿರೀಕ್ಷಿತ ರೂಪ್ ವೇ ಯೋಜನೆ ಘೋಷಣೆ : ಶ್ರೀಕ್ಷೇತ್ರದ ಅಭಿವೃದ್ಧಿಯ ನಿರೀಕ್ಷೆ
ಕುಮಟಾ: ಉತ್ತರಕನ್ನಡ ಜಿಲ್ಲೆ ನೂರಾರು ವಿಶೇಷತೆಗಳನ್ನು ಹೊಂದಿರುವ ಪ್ರವಾಸಿ ತಾಣಗಳ ಸ್ವರ್ಗ. ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಯಾಣ ಕೂಡಾ ಒಂದು. ಇಲ್ಲಿನ ಬೃಹದಾಕಾರದ ಕಲ್ಲುಗಳು ಮತ್ತು ಮೊನಚಾಗಿರವ ಶಿಲೆಗಳು ಪ್ರವಾಸಿಗರ ಪ್ರಮುಖ ಆಕರ್ಷಣೆ. ಅಲ್ಲದೆ, ಪ್ರಕೃತಿ ಕೊಡಮಾಡಿದ ಸುಂದರ, ರುದ್ರರಮಣೀಯ ಕ್ಷೇತ್ರಗಳಲ್ಲಿ ಯಾಣ ಅಗ್ರಗಣ್ಯಸ್ಥಾನ ಪಡೆದಿದೆ.
ಭೈರವೇಶ್ವರನ ದಿವ್ಯನೆಲೆಯಾಗಿ, ಭಗವದ್ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ತಪೋಭೂಮಿಯೂ ಹೌದು. ಆದರೆ, ಯಾಣಕ್ಕೆ ಹೋಗುವುದು ಸುಲಭದ ಮಾತಲ್ಲ. ದಟ್ಟಕಾನನದಲ್ಲಿ ನಡಿಗೆಯಲ್ಲಿ ಸಾಗಿ, ಕಿಲೋಮೀಟರ್ ನಡೆಯಬೇಕು. ಅಲ್ಲದೆ, ನೂರಾರು ಮೆಟ್ಟಿಲುಗಳನ್ನು ಹತ್ತಬೇಕಿದೆ. ಹೀಗಾಗಿ ಮಧ್ಯವಯಸ್ಕರು ಭೇಟಿ ನೀಡೋದು ಕಷ್ಟಸಾಧ್ಯವಾಗಿದೆ. ಹೀಗಾಗಿ ಎಲ್ಲಾ ವಯಸ್ಕರು ತೆರಳಲು ಅನುಕೂಲವಾಗುವಂತೆ ಮತ್ತು ಇಲ್ಲಿನ ಪ್ರವಾಸೋದ್ಯಮಕ್ಕೆ ಹೊಸ ಟಚ್ ನೀಡುವ ಉದ್ದೇಶದಿಂದ ರೋಪ್ ವೇ ನಿರ್ಮಾಣಕ್ಕೆ ತಯಾರಿ ನಡೆದಿದೆ.
ಹೌದು, ಉತ್ತರ ಕನ್ನಡ ಜಿಲ್ಲೆ ಜನತೆಯ ಬಹು ನಿರೀಕ್ಷಿತ, ಪುರಾಣ ಪ್ರಸಿದ್ಧ ಯಾಣ ಕ್ಷೇತ್ರದ ರೋಫ್ ವೇ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. 2022ರ ರಾಜ್ಯ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕುಮಟಾ ತಾಲೂಕಿನ ಯಾಣಕ್ಕೆ ರೋಪ್‌ವೇ ಘೋಷಣೆ ಮಾಡಿದ್ದಾರೆ. ಐತಿಹಾಸಿಕ ಹಿನ್ನೆಲೆ ಹಾಗೂ ತನ್ನ ನೈಸರ್ಗಿಕ ಸೌಂದರ್ಯದಿಂದಲೇ ವಿಶ್ವ ವಿಖ್ಯಾತವಾಗಿರುವ, ಪ್ರಸಿದ್ದ ಪ್ರವಾಸಿ ತಾಣವಾಗಿರುವ ಯಾಣದಲ್ಲಿ ರೋಪ್ ವೇ ಮಾಡುವ ಕುರಿತಾಗಿ ಪ್ರವಾಸೋಧ್ಯಮ ಇಲಾಖೆಯ ವತಿಯಿಂದ ಕಳೆದ ಸುಮಾರು 5 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಆದರೆ ಈವರೆಗೆ ಈ ಒಂದು ಯೋಜನೆಗೆ ಅನುಮತಿಯಾಗಲಿ, ಅನುದಾನವಾಗಲಿ ಮಂಜೂರಾಗಿರಲಿಲ್ಲ. ಆದರೆ ಈ ಭಾರಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಯಾಣದ ರೋಫ್ ವೇ ಯೋಜನೆಯ ಕುರಿತಾಗಿ ಹೆಚ್ಚಿನ ಒತ್ತಡ ಹಾಕಿದ ಕಾರಣ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಯಾಣಕ್ಕೆ ರೋಪ್ ವೇ ಯೋಜನೆ ಘೋಷಣೆ ಮಾಡಲಾಗಿದೆ. ಯಾಣ ಭಾಗದ ಅಭಿವೃದ್ಧಿಗಾಗಿ ಸ್ಥಳೀಯರು ಅನೇಕ ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದು ಇದುವರೆಗೆ ಯಾವುದೇ ರೀತಿಯ ಅಭಿವೃದ್ಧಿಕಾರ್ಯ ಆಗಿಲ್ಲವಾಗಿತ್ತು.
ಭೈರವೇಶ್ವರ ನೆಲೆನಿಂತಿರುವ ಸ್ವಯಂಭೂ ಕ್ಷೇತ್ರ ಯಾಣಕ್ಕೆ ಅರಣ್ಯ ಪ್ರದೇಶದ ದಾರಿಯಲ್ಲಿ ಸಂಚರಿಸಬೇಕಿದ್ದು, ಇಲ್ಲಿನ ರಸ್ತೆಗಳು ಕೂಡ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಕಿರಿ ಕಿರಿ ಎಂಬAತಿದೆ. ಅಲ್ಲದೇ ಯಾಣದ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡುವುದು ವಯಸ್ಕರರಿಗೆ ಒಂದು ರೀತಿಯ ಸವಾಲಿನ ಕೆಲಸವೇ ಎನ್ನಬದುದಾಗಿದೆ. ಈ ನಿಟ್ಟಿನಲ್ಲಿ ಇದೀಗ ರೋಪವೇ ಯೋಜನೆ ಅತಿ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬಂದಲ್ಲಿ ಯಾಣವು ಪ್ರವಾಸಿಗರನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ.
ಅಲ್ಲದೇ ಪ್ರವಾಸೋದ್ಯಮ ದೃಷ್ಠಿಯಿಂದಲೂ ಕೂಡ ಈ ಯೋಜನೆಯಿಂದಾಗಿ ಯಾಣವು ಹೆಚ್ಚಿನ ಅಭಿವೃದ್ದಿ ಕಾಣಲಿದೆ. ಒಟ್ಟಾರೆ ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯಾಣದ ರೋಪ್ ವೇ ಯೋಜನೆಯನ್ನು ಈ ಭಾರಿ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಶಾಸಕ ದಿನಕರ ಶೆಟ್ಟಿಯವರ ಪ್ರಯತ್ನದಿಂದಾಗಿ ಜಿಲ್ಲೆಯ ಜನತೆಯ ಹಾಗೂ ಸ್ಥಳೀಯರ ಯಾಣ ಕ್ಷೇತ್ರದ ಅಭಿವೃದ್ಧಿಯ ಕನಸು ಪುನಃ ಚಿಗುರೊಡೆದಿದೆ ಎನ್ನಬಹುದಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.