ಅಂಕೋಲಾದಲ್ಲಿ ಕಾಣಿಸಿಕೊಂಡ ರೆಡ್ಡಿ & ಟೀಮ್: ವಕೀಲರ ಮನೆಗೂ ಹೋಗಿ ಬಂದ ಗಣಿಧಣಿಗಳು: ಮತ್ತೆ ನೆನಪಾದ ಮ್ಯಾಂಗನೀಸ್ ಪ್ರಕರಣ?
ಅಂಕೋಲಾ: ಮ್ಯಾಂಗನೀಸ್ ಅದಿರು ಪ್ರಕರಣಗಳಲ್ಲಿ ಭಾಗಿಯಾದ ಗಾಲಿ ಜನಾರ್ಧನ ರೆಡ್ಡಿ ಮತ್ತಿತರರು ಇಂದು ಅಂಕೋಲಾದಲ್ಲಿ ಕಾಣಿಸಿಕೊಂಡು ಹಲವರ ಕುತೂಹಲಕ್ಕೆ ಕಾರಣರಾದರು. ರಾಜ್ಯದ ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆನಂದ್ ಸಿಂಗ್,ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕ ನಾಗೇಂದ್ರ ಮತ್ತಿತರರು ಬೆಲೇಕೇರಿ ಅಕ್ರಮ ಅದಿರು ಸಾಗಾಟ ಪ್ರಕರಣವೊಂದರ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ, ಜಿಲ್ಲಾ ಸತ್ರ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು, ಸೋಮವಾರ ಅಂಕೋಲಾ ಜೆ.ಎಂ.ಎಫ್. ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ಜಾಮೀನಿಗೆ ಮಾನ್ಯತೆ ನೀಡಿ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿದೆ..
ಸಿ.ಬಿ.ಐ ತಂಡದಿಂದ ನ್ಯಾಯಾಲಯದಲ್ಲಿ ಸಚಿವ ಆನಂದ್ ಸಿಂಗ್ ಸೇರಿ 12ಜನರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು, ಬೇಲೇಕೇರಿ ಅಕ್ರಮ ಅದಿರು ಸಾಗಾಟ, ಅಂಕೋಲಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವುದರಿಂದ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅಂಕೋಲಾ ಜೆ.ಎಂ.ಎಫ್. ಸಿ, ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು ಎನ್ನಲಾಗಿದೆ..
ಮಾರ್ಚ 7ರ ಸೋಮವಾರ ಬೆಳಗ್ಗೆ ಆರೋಪಿಗಳು ಅಂಕೋಲಾಕ್ಕೆ ಆಗಮಿಸಿ ನ್ಯಾಯಾಲಯದ ಎದುರು ಹಾಜರಾಗಿ ಜಾಮೀನು ಕೋರಿದ್ದು 12 ಜನರಲ್ಲಿ 7 ಜನರಿಗೆ ಅಂಕೋಲಾ ಜೆ.ಎಂ.ಎಫ್. ಸಿ ನ್ಯಾಯಾಲಯ ಜಾಮೀನು ನೀಡಿದೆ. ಇಂದು ಹಾಜರಾಗದೆ ಉಳಿದ ಇತರ ಆರೋಪಿಗಳಿಗೆ ಬಂಧನ ರಹಿತ ವಾರಂಟ್ ಹೊರಡಿಸಿದೆ. ನ್ಯಾಯವಾದಿ ನಾಗರಾಜ ನಾಯಕ ಮತ್ತು ವಿನೋದ ಶ್ಯಾನಭಾಗ ಹಾಗೂ ಸುದರ್ಶನ ರೆಡ್ಡಿ ಆರೋಪಿಗಳ ಪರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಬಳ್ಳಾರಿ, ಹೊಸಪೇಟೆ, ಮತ್ತು ಕರ್ನಾಟಕದ ಇತರ ಪ್ರದೇಶಗಳಿಂದ ಅನಧಿಕೃತವಾಗಿ ಅದಿರನ್ನು ತೆಗೆದು ಬೇಲೆಕೇರಿ ಬಂದರಿನ ಮೂಲಕ ವಿದೇಶಕ್ಕೆ ರಫ್ತು ಮಾಡಿದ ಪ್ರಕರಣ ದಾಖಲಾಗಿತ್ತು.
ಅಂಕೋಲಾ ಬೆಲೇಕೇರಿ ಬಂದರಿನಿಂದ 2009 ರಿಂದ 2010 ರ ಅವಧಿಯಲ್ಲಿ ಕಬ್ಬಿಣದ ಅದಿರು ಸಾಗಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಆನಂದ ಸಿಂಗ್ ಅವರ ಮಾಲಿಕತ್ವದ ವೈಷ್ಣವಿ ಮಿನರಲ್ಸ್ ಸೇರಿದಂತೆ ಹಲವು ಅದಿರು ಕಂಪನಿಗಳು ವಿದೇಶಗಳಿಗೆ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಿಸಿದ್ದಾರೆ ಎಂಬ ಆರೋಪದ ಮೇಲೆ ಸಿ.ಬಿ.ಐ ತನಿಖೆ ನಡೆಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಿ.ಬಿ.ಐ ತಂಡ ಅಂದು ಶಾಸಕರಾಗಿದ್ದ ಆನಂದ್ ಸಿಂಗ್ , ಜನಾರ್ಧನ ರೆಡ್ಡಿ, ನಾಗೇಂದ್ರ ಸೇರಿ, ಅದಿರು ಉದ್ಯಮಕ್ಕೆ ಸಂಬಂಧಿಸಿದ ಹಲವರ ಮೇಲೆ ಪ್ರಕರಣ ದಾಖಲಿಸಿದ್ದರು.2013 ರ ಅಕ್ಟೋಬರ್ 17 ರಂದು ಸಿ.ಬಿ.ಐ ಅಧಿಕಾರಿಗಳು ಬೆಂಗಳೂರಿನ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆನಂದ ಸಿಂಗ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದನ್ನು ಸ್ಮರಿಸಬಹುದಾಗಿದೆ.
ಅಂಕೋಲಾಕ್ಕೆ ಬಂದಿದ್ದ ಅದಿರು ದೊರೆಗಳು, ತಮ್ಮ ಬಿಡುವಿನ ವೇಳೆಯಲ್ಲಿ ಬಾಸಗೋಡದ ನ್ಯಾಯವಾದಿ ನಾಗರಾಜ ನಾಯಕ ಮನೆಗೆ ತೆರಳಿ, ಕೆಲ ಹೊತ್ತು ಕಳೆದರು. ಈ ಸಂದರ್ಭದಲ್ಲಿ ನಾಗರಾಜ ನಾಯಕ ಅವರ ತಂದೆ – ತಾಯಿಗಳು, ಕುಟುಂಬ ವರ್ಗದವರು, ಆಪ್ತರು, ಬಿಜೆಪಿ ಪಕ್ಷದ ಕೆಲ ಮುಖಂಡರು ಉಪಸ್ಥಿತರಿದ್ದು, ಸ್ವಾಗತಿಸಿ, ಆದರಾತಿಥ್ಯ ನೀಡಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.