ಹೊನ್ನಾವರ:’ಜೀವ,ಜಲ ಹಾಗೂ ಸಂಸ್ಕೃತಿಯ ಮೂಲವಾದ ಅರಣ್ಯಕ್ಕೆ ತಾಯಿಯ ಸ್ಥಾನವಿರುವುದರಿಂದ ಇಲ್ಲಿನ ದೇವರನ್ನು ಅಮ್ಮ ಎಂದು ಸಂಬೋಧಿಸುವುದರ ಹಿನ್ನೆಲೆಯಲ್ಲಿ ಈ ಆಪ್ತ ಭಾವವನ್ನು ಕಾಣುತ್ತೇವೆ’ ಎಂದು ಹೆಸರಾಂತ ವಿಮರ್ಶಕ ಹಾಗೂ ಬರಹಗಾರ ಡಾ.ಎಂ.ಜಿ.ಹೆಗಡೆ ಕುಮಟ ಅಭಿಪ್ರಾಯಪಟ್ಟರು. ಕಾಮಕೋಡ ದುರ್ಗಮ್ಮ ದೇವಸ್ಥಾನ,ಕಾಮಕೋಡ ಪರಿಸರ ಕೂಟ ಹಾಗೂ ಅರಣ್ಯ ಇಲಾಖೆ ಇವುಗಳ ಆಶ್ರಯದಲ್ಲಿ ಹೆರಾವಲಿ ಗ್ರಾಮದ ಕಾಮಕೋಡ ದೇವರಕಾಡಿನ ದೇವಸ್ಥಾನದ ಆವಾರದಲ್ಲಿ ಬುಧವಾರ ನಡೆದ ‘ಕಾಡು-ಬೆಳದಿಂಗಳಲ್ಲಿ ಭಾವ ಲಹರಿ:ಕಾಮಕೋಡ ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ,’ದೇವರ ವಾಹನಗಳು ಪ್ರಾಣಿಗಳಾಗಿರುವುದು ಪ್ರಕೃತಿಯ ಎಲ್ಲ ಜೀವಿಗಳಿಗೆ ಮಹತ್ವ ನೀಡಿರುವುದರ ಸಂಕೇತವಾಗಿದೆ.ಪರಿಸರ ಹಾಗೂ ನಮ್ಮ ಜೀವನದ ನಡುವೆ ಅವಿನಾಭಾವ ಸಂಬoಧವಿದೆ’ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಮಾತನಾಡಿ,’ಅರಣ್ಯ ರಕ್ಷಣೆ ಎಂದರೆ ಅದು ಸಮುದಾಯದ ಸಂಸ್ಕೃತಿಯ ರಕ್ಷಣೆ.ಕಾಮಕೋಡ ದೇವರಕಾಡಿನಲ್ಲಿ ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ದೇವಸ್ಥಾನದ ಆವಾರದಲ್ಲಿ ಸಮುದಾಯ ಭವನ ನಿಮಾಣಕ್ಕೆ ತಾವು ಶಾಸಕರಾಗಿದ್ದಾಗ ಅನುದಾನ ನೀಡಿದ್ದ ಮಾಜಿ ಶಾಸಕ ಮಂಕಾಳ ಎಸ್.ವೈದ್ಯ ಅವರನ್ನು ದೇವಸ್ಥಾನದ ಸಮಿತಿ ಹಾಗೂ ಭಕ್ತರ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮಂಕಾಳ ವೈದ್ಯ ಮಾತನಾಡಿ,’ಜನರು ನಿಜವಾದ ಅರಣ್ಯ ರಕ್ಷಕರು.ಪರಿಸರ ಉತ್ತಮವಾಗಿದ್ದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ.ಪರಿಸರ ರಕ್ಷಣೆ ಹಾಗೂ ಊರಿನ ಅಭಿವೃದ್ಧಿ ಪರಸ್ಪರ ಪೂರಕವಾಗಿರಬೇಕು.ಶಾಸಕನಾಗಿದ್ದಾಗ ಮಾಡಿದ ಕೆಲಸಕ್ಕೆ ಸನ್ಮಾನಿಸಿದ ಸಮಿತಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಗಣೇಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಟಿ.ಬೋರಯ್ಯ,ಜಿ.ಕೆ.ಸುದರ್ಶನ ಉಪಸ್ಥಿತರಿದ್ದರು. ದೇವಸ್ಥಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ದಿ.ಗಜಾನನ ಹೆಗಡೆ ಹಾಚಲಮಕ್ಕಿ ಹಾಗೂ ಸದಸ್ಯರಾಗಿದ್ದ ದಿ.ಪ್ರಕಾಶ ನಾಯ್ಕ ಬೇಣ್ಮನೆ ಅವರಿಗೆ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು.
ಶ್ರಾವ್ಯ ಆಚಾರ್ಯ ಪ್ರಾರ್ಥನಾ ಗೀತೆ ಹಾಡಿದರು.ಪ್ರೊ.ನಾಗರಾಜ ಹೆಗಡೆ ಅಪಗಾಲ ಸ್ವಾಗತಿಸಿದರು.ಶಿಕ್ಷಕ ವಿಷ್ಣು ನಾಯ್ಕ ಸನ್ಮಾನ ಪತ್ರ ವಾಚಿಸಿದರು.ಕಾಮಕೋಡ ಪರಿಸರ ಕೂಟದ ಸಂಚಾಲಕ ಎಂ.ಜಿ.ಹೆಗಡೆ ವಂದಿಸಿದರು.
ದೇವರಕಾಡಿನ ಪ್ರಾಕೃತಿಕ ಸೊಬಗಿನ ನಡುವೆ ಸಿದ್ದಾಪುರದ ಹಿತ್ಲಕೈನ ಒಡ್ಡೋಲಗ ರಂಗ ಪರ್ಯಟನ ತಂಡದ ಕಲಾವಿದರು ಪ್ರದರ್ಶಿಸಿದ ‘ಧರಣಿ ಮಂಡಲ’ ನಾಟಕ ಪ್ರೇಕ್ಷಕರಿಗೆ ಮುದ ನೀಡಿತು.ಜಾನಪದ ಹಾಡಿನ ಮೂಲಕ ಸಮಕಾಲೀನ ಸಾಮಾಜಿಕ ಹಾಗೂ ರಾಜಕೀಯ ಕಥಾನಕವನ್ನು ಕಲಾವಿದರು ಸಮರ್ಥವಾಗಿ ಕಟ್ಟಿಕೊಟ್ಟರು.
ವಿಸ್ಮಯ ನ್ಯೂಸ್, ಹೊನ್ನಾವರ