Follow Us On

WhatsApp Group
Focus News
Trending

ತಾ.ಪಂ , ಜಿ.ಪಂ. ಕ್ಷೇತ್ರ ವಿಂಗಡಣೆ ಸಿದ್ಧತೆ : ಆದರೂ ಚುನಾವಣೆ ವಿಳಂಬವಾಗುವ ಸಾಧ್ಯತೆ?. ವರ್ಷದ ಬಳಿಕ ಗರಿಗೆದರಿದ ರಾಜಕೀಯ : ಆದರೂ ಕೆಲವರಿಗೆ ಕ್ಷೇತ್ರ ಮತ್ತು ಮೀಸಲಾತಿ ತಪ್ಪಿಹೋಗುವ ಭಯ

ಅಂಕೋಲಾ: ತಾಲೂಕಿನ ಜಿಲ್ಲಾ ಪಂಚಾಯತಿ ಕ್ಷೇತ್ರವಾರು ವಿಂಗಡನೆ ಯಾದಿಯನ್ನು  ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದ್ದು ಈ ಹಿಂದೆ    ಜಿಲ್ಲಾ ಪಂಚಾಯತಿಗೆ ಇದ್ದ 3 ಕ್ಷೇತ್ರಗಳನ್ನು ವಿಂಗಡಿಸಿ, ಹೊಸದಾಗಿ ಮತ್ತೆರಡು ಕ್ಷೇತ್ರ ಸಹಿತ ಒಟ್ಟೂ 5 ಕ್ಷೇತ್ರಗಳನ್ನಾಗಿ ಮಾಡಲಾಗುತ್ತಿದೆ.

ಈ ಹಿಂದೆ   ಅಗಸೂರು, ಅವರ್ಸಾ, ಶೆಟಗೇರಿ ಈ  ಮೂರು ಕ್ಷೇತ್ರಗಳು ಜಿಲ್ಲಾ ಪಂಚಾಯತಿ ವ್ಯವಸ್ಥೆ ಅಡಿಯಲ್ಲಿ ಗುರುತಿಸಿಕೊಂಡಿದ್ದವು. ಇದೀಗ  ಹಳೆಯ ಕ್ಷೇತ್ರಗಳ ಜೊತೆಗೆ  ಭಾವಿಕೇರಿ ಮತ್ತು  ಬೆಳಸೆ ಎಂಬ ಎರಡು ಕ್ಷೇತ್ರಗಳನ್ನು ಹೊಸದಾಗಿ ರಚಿಸಲಾಗಿದ್ದು ಒಟ್ಟೂ ಜಿ. ಪಂ ಕ್ಷೇತ್ರ 5ಕ್ಕೆ ಏರಿಕೆ ಆದಂತಾಗಿದೆ. ಅಗಸೂರು ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ  ಅಗಸೂರು ಮತ್ತು ಹಿಲ್ಲೂರು ತಾಲೂಕು ಪಂಚಾಯಿತಿ ಕ್ಷೇತ್ರಗಳು,  ಅಗಸೂರು, ಸುಂಕಸಾಳ, ಡೋಂಗ್ರಿ, ಹಿಲ್ಲೂರು, ಅಚವೆ ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ. ಅವರ್ಸಾ ಜಿ.ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಅವರ್ಸಾ ಮತ್ತು, ಬೆಲೇಕೇರಿ ತಾ.ಪಂ ಕ್ಷೇತ್ರಗಳು, ಅವರ್ಸಾ,ಹಟ್ಟಿಕೇರಿ, ಬೆಲೇಕೇರಿ ಮತ್ತು ಹಾರವಾಡ ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ.,

ಶೆಟಗೇರಿ ಜಿ.ಪಂ ವ್ಯಾಪ್ತಿಯಲ್ಲಿ  ಶೆಟಗೇರಿ ಮತ್ತು ಬೆಳಂಬಾರ ತಾಲೂಕು ಪಂಚಾಯಿತಿ ಕ್ಷೇತ್ರಗಳು, ಶೆಟಗೇರಿ,ಬೊಬ್ರವಾಡ, ಬೆಳಂಬಾರ,ಹೊನ್ನೆಬೈಲ ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ. ನೂತನವಾಗಿ ರಚಿಸಲ್ಪಟ್ಟ ಭಾವಿಕೇರಿ ಜಿ.ಪಂ ವ್ಯಾಪ್ತಿಯಲ್ಲಿ ಕೇವಲ ಭಾವಿಕೇರಿ (1) ತಾಲೂಕು ಪಂಚಾಯತ ಕ್ಷೇತ್ರ, ಭಾವಿಕೇರಿ, ಅಲಗೇರಿ, ವಂದಿಗೆ ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ. ಇಲ್ಲಿ ಜನಸಂಖ್ಯೆಯೂ ಹೆಚ್ಚಿದ್ದು ಇನ್ನೊಂದು ತಾ.ಪಂ ಕ್ಷೇತ್ರದ ಅವಶ್ಯಕತೆ ಇತ್ತು ಎನ್ನುವವರೂ ಇದ್ದಾರೆ. ಬೆಳಸೆ ಜಿ.ಪಂ ವ್ಯಾಪ್ತಿಯಲ್ಲಿ ಬೆಳಸೆ, ಸಗಡಗೇರಿ ತಾಲೂಕು ಪಂಚಾಯತಿ ಕ್ಷೇತ್ರಗಳು, ಬೆಳಸೆ, ವಾಸರಕುದ್ರಿಗೆ, ಸಗಡಗೇರಿ, ಅಗ್ರಗೋಣ, ಮೊಗಟಾ ಗ್ರಾಮ ಪಂಚಾಯಿತಿಗಳು ಗುರುತಿಸಲ್ಪಟ್ಟಿದೆ.

ಈ ಹಿಂದೆ ತಾಲೂಕಿನಲ್ಲಿ 3 ಜಿ.ಪಂ ಮತ್ತು 11  ತಾ.ಪಂ ಕ್ಷೇತ್ರಗಳಿದ್ದು, ಈಗ ಜಿ.ಪಂ ಕ್ಷೇತ್ರ 3 ರಿಂದ 5ಕ್ಕೆ ಏರಿಕೆ ಆದರೆ, ತಾ.ಪಂ ಕ್ಷೇತ್ರ 11 ರಿಂದ 9ಕ್ಕೆ ಇಳಿಕೆಯಾಗಿರುವುದು ಹಲವು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕನಿಷ್ಟ ಪಕ್ಷ ಪ್ರತಿ ಜಿ. ಪಂಗೆ  2 ರಂತೆ ಒಟ್ಟು 5 ಜಿ.ಪಂ ಗೆ 10 ತಾ.ಪಂ ಕ್ಷೇತ್ರಗಳಿದ್ದರೆ ಕ್ಷೇತ್ರ ವಿಂಗಡಣೆಗೆ ಮತ್ತಷ್ಟು ಬಲ ಬರುತ್ತಿತ್ತು ಎನ್ನುವ ಮಾತು ಅಲ್ಲಲ್ಲಿ ಕೇಳಿ ಬಂದಿದೆ. ಕ್ಷೇತ್ರ ವಿಂಗಡಣೆ ಯಾದಿ  ಕುರಿತು ವಿವಿಧ ಪಕ್ಷಗಳ ಮುಖಂಡರ ಸಭೆ ಕರೆದು ತಿಳಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕುರಿತು ಒಂದೆರೆಡು ಕ್ಷೇತ್ರಗಳ ಕೆಲ ಬದಲಾವಣೆಗೆ ಒತ್ತಾಯಿಸಿ ಪ್ರಮುಖ ರಾಜಕೀಯ ಪಕ್ಷವೊಂದರ ತಾಲೂಕಾ ಘಟಕದ ಅಧ್ಯಕ್ಷರು ಆಕ್ಷೇಪಣೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಕ್ಷೇತ್ರ ಮರುವಿಂಗಡಣೆ, ಆಕ್ಷೇಪಣೆಗೆ ಮನ್ನಣೆ ಸಿಗುವ ಪೂರ್ವ ಆಯಾ ವ್ಯಾಪ್ತಿಯ ಜನಸಂಖ್ಯೆ, ಭೂ ಗಡಿ, ಈ ಹಿಂದೆ ಯಾವೆಲ್ಲ ಕ್ಷೇತ್ರಗಳು ಒಂದಾಗಿದ್ದವು ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ಹೀಗಾಗಿ ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಇತರೆಡೆಯೂ ಪ್ರಾಥಮಿಕ ಹಂತದ ಅಧಿಸೂಚನೆ ಮಾತ್ರ ಹೊರಡಿಸಲಾಗಿದ್ದು, ಕ್ಷೇತ್ರ ವಿಂಗಡಣೆ ಕುರಿತು ಈಗಿನ ಯಾದಿಯೇ ಅಂತಿಮ ಎ೦ದು ಹೇಳಲಾಗದು . ಈ ಕುರಿತು ಚುನಾವಣಾ ಆಯೋಗ ಅಧಿಕೃತ ಅಧಿಸೂಚನೆ  ಹೊರಡಿಸುವ ವರೆಗೆ ಕಾಯಲೇಬೇಕಿದೆ.

ಆ ಬಳಿಕವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ.. ಆದ್ಯಾಗ್ಯೂ ತಾ.ಪಂ ಮತ್ತು ಜಿ.ಪಂ ಚುನಾವಣೆಗೆ ಕಾದಿರುವ ಸ್ಥಳೀಯ ರಾಜಕಾರಣಿಗಳು ತಮ್ಮದೇ ರಾಜಕೀಯ ಲೆಕ್ಕಚಾರ – ಚರ್ಚೆಯಲ್ಲಿ ತೊಡಗಿಸಿಕೊಂಡಂತೆ ಕಂಡುಬರುತ್ತಿದೆ. ಇನ್ನು ಕೆಲವರ ಪ್ರಕಾರ ಚುನಾವಣೆಗೆ ಸಂಬಂಧಿಸಿದಂತೆ ಈಗ ಕೇವಲ ಆರಂಭಿಕ  ಪ್ರಕ್ರಿಯೆ  ಅಷ್ಟೇ ಶುರುವಾಗಿದ್ದು , ಎಲ್ಲಾ ತಯಾರಿಗಳು ಪೂರ್ಣಗೊಂಡು ಚುನಾವಣೆ ನಡೆಸಲು ಹೆಚ್ಚಿನ ಕಾಲಾವಕಾಶ ಬೇಕಿದ್ದು , ಸದ್ಯಕ್ಕಂತೂ ಚುನಾವಣೆ ನಡೆಯುವುದಿಲ್ಲ ಎಂಬ ಮಾತು ಕೇಳಿ ಬರಲಾರಂಭಿಸಿದೆ.

ಆದರೂ ಕಳೆದ ವರ್ಷದಿಂದೀಚೆಗೆ ಚಾತಕ ಪಕ್ಷಿಯಂತೆ ಕಾದು ಕುಳಿತ ಕೆಲವರಿಗೆ ಹೊಸ  ಕ್ಷೇತ್ರ ವಿಂಗಡಣೆ ನೀತಿ ಆರಂಭವಾಗಿರುವುದು ಹೊಸ ಆಸೆ ಮೂಡಿಸಿ ಅವರು ತಾಲೀಮಿಗೆ ಸಿದ್ಧತೆ ನಡೆಸಲು ಮುಂದಾದರೆ, ಇನ್ನು ಕೆಲವರು ಕ್ಷೇತ್ರ ವಿಂಗಡಣೆ,ವಿಭಜನೆಯ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದು, ಇದು ಮುಗಿದ ನಂತರ ಬರಬಹುದಾದ ಮೀಸಲಾತಿ ಕುರಿತು ಯೋಚಿಸುವಂತೆಯೂ ಮಾಡಿದೆ.ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ರಾಜಕೀಯ ಕಾವು ಏರಿಸಬೇಕಿದ್ದ ತಾಪಂ ಮತ್ತು ಜಿ.ಪಂ ಚುನಾವಣೆ ಬರುವ ಡಿಸೆಂಬರ್ ಒಳಗೆ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದ್ದು, ರಾಜ್ಯ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ನಡೆದ ಬಳಿಕವೇ ತಾ.ಪಂ ಮತ್ತು ಜಿ.ಪಂ ಚುನಾವಣೆ ನಡೆದರೂ ಆಶ್ಚರ್ಯ ಪಡಬೇಕಿಲ್ಲ .                     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button