Important
Trending

ವೆಲೈಂಟೈನ್ ದಿನದಂದೇ ಹಾರಿ ಹೋಗಿದ್ದ ಪ್ರೇಮ ಪಕ್ಷಿ ಮರಳಿ ಗೂಡಿಗೆ ? ಸಾವಿರಾರು ಕಿ.ಮೀ ದೂರದಿಂದ ಸುರಕ್ಷಿತವಾಗಿ ಕರೆತರಲು ಕರ್ತವ್ಯ ನಿಭಾಯಿಸಿದ ಪೊಲೀಸರು

ಅಂಕೋಲಾ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ತಾಲೂಕಿನ ಹಾರವಾಡಾ ಮೂಲದ ಯುವತಿ ಯೋರ್ವಳು ಅನ್ಯರಾಜ್ಯದ ಯುವಕನ ಪ್ರೇಮದ ಬಲೆಗೆ ಬಿದ್ದು, ಮನೆ ಬಿಟ್ಟು ನಾಪತ್ತೆಯಾಗಿ ಹೋದವಳು, ಪ್ರೀತಿಸಿದ ಹುಡುಗನ ಜೊತೆ 3 – 4 ತಿಂಗಳು ಕಳೆದು, ಆತ ಮತ್ತು ಆತನ ಕುಟುಂಬದ ಜೊತೆ ತಾನು ಬಾಳ್ವೆ ಮಾಡುವುದು ಕಷ್ಟ ಎಂದು ಕೊರಗಿ, ಮನೆಯವರ ಬಳಿ ತನ್ನ ಅಳಲು ತೋಡಿಕೊಂಡು, ಪೋಲೀಸರ ಮೂಲಕ ಮನೆ ಸೇರಿದ ಅಪರೂಪದ ಘಟನೆ ಗುರುವಾರ ನಡೆದಿದೆ.

ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಗಾಬೀತವಾಡದ ಯುವತಿ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ವೇಳೆ ಪರಿಚಿತನಾಗಿದ್ದ ಓರಿಸ್ಸಾದ ಯುವಕನೊರ್ವನೊಂದಿಗೆ ಸ್ನೇಹ – ಪ್ರೀತಿ – ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ.

ಅಂಕೋಲಾದ ತನ್ನ ಮನೆಯಿಂದ ಕಳೆದ ಫೆಬ್ರುವರಿ ತಿಂಗಳಿನಲ್ಲಿ ಉದ್ಯೋಗಕ್ಕೆ ತೆರಳುತ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದ ಯುವತಿ, ಅತ್ತ ಉದ್ಯೋಗಕ್ಕೂ ಹೋಗದೇ , ಇತ್ತ ಮನೆಗೂ ವಾಪಸ್ಸಾಗದ ಕುರಿತು ಆಕೆಯ ತಂದೆ ತನ್ನ ಮಗಳನ್ನು ಹುಡುಕಿ ಕೊಡುವಂತೆ ಮೇ ತಿಂಗಳಿನಲ್ಲಿ ಪೊಲೀಸ್ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು,ಯುವತಿ ಉದ್ಯೋಗ ಮಾಡುತ್ತಿದ್ದ ಕಂಪನಿ,ಮತ್ತಿತರಡೆ ವಿಚಾರಿಸಿ,ಯುವತಿಯ ಜೊತೆ ಓಡಿಸಾ ಮೂಲದ ಯುವಕನ ಪಾತ್ರ ಮತ್ತು ಸಂಬಂಧದ ಬಗ್ಗೆ,ಹಾಗೂ ಅವರಿಬ್ಬರೂ ಇರುವ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು ಎನ್ನಲಾಗಿದೆ.

ಈ ನಡುವೆ ಒಡಿಶಾದ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದ ಯುವತಿ ತಾನು ಸ್ವ ಇಚ್ಫೆಯಿಂದ ಇಲ್ಲಿಯ ಯುವಕನ ಜೊತೆ ಬಂದಿದ್ದು, ಅವನ ಜೊತೆಯೇ ಸಂಸಾರ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಳು, ಪ್ರಾಪ್ತ ವಯಸ್ಕ ಯುವತಿಯ ಹೇಳಿಕೆ ಪಡೆದುಕೊಂಡಿದ್ದ ಪೋಲೀಸರು ಪ್ರಕರಣವನ್ನು ಅಲ್ಲಿಗೇ ಕೊನೆಗಾಣಿಸಿದ್ದರು ಎನ್ನಲಾಗಿದೆ.

ಈ ನಡುವೆ ತಾನು ಪ್ರೀತಿಸಿದ ಹುಡುಗನ ಒತ್ತಾಯ ಇಲ್ಲವೇ ಇತರೇ ಕಾರಣಗಳಿಂದ ಆತನ ಜೊತೆ ಅಲ್ಲಿಯೇ ವಿವಾಹ ನೋಂದಣಿ ಮಾಡಿಸಿಕೊಂಡಿದ್ದಳು ಎನ್ನಲಾಗಿತ್ತು. ನಂತರ ಗಂಡನ ಮನೆಯಲ್ಲಿರಬೇಕಾದವಳು ಅದಾವುದೋ ಕಾರಣದಿಂದ ಗಂಡನ ಸಹೋದರಿ ಮನೆಯಲ್ಲಿ ಇರಬೇಕಾಗಿ ಬಂದು ,ಅಲ್ಲಿ ಸಂಕಟ ಪಡುವಂತಾಗಿತ್ತು ಎನ್ನುವ ಮಾತು ಕೇಳಿ ಬಂದಿದೆ.

ತವರು ತೊರೆದಿದ್ದ ಅವಳು ಗಂಡನ ಮನೆಯಲ್ಲಿಯೂ ತನಗೆ ಸುಖಸಂಸಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಕೊರಗಿ,ತನ್ನ ಕುಟುಂಬಸ್ಥರಿಗೆ ಪೋನ ಕರೆಮಾಡಿ ಗೋಳು ತೋಡಿಕೊಂಡಿದ್ದಳು ಎನ್ನಲಾಗಿತ್ತು. ಮನೆ ಮಗಳ ರಕ್ಷಣೆಗೆ ಕುಟುಂಬಸ್ಥರು ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಇವರಲ್ಲಿ ನಿವೇದಿಸಿಕೊಂಡ ವೇಳೆ,ಶಾಸಕಿ ರೂಪಾಲಿ ನಾಯ್ಕ ,ನೊಂದ ಕುಟುಂಬದವರಿಗೆ ಧೈರ್ಯ ತುಂಬಿ ಮಗಳನ್ನು ಕರೆತರುವ ಭರವಸೆ ನೀಡಿ,ಕೂಡಲೇ ಪೊಲೀಸರಿಗೆ ಯುವತಿಯನ್ನು ಮನೆಗೆ ಕರೆ ತರುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಅಷ್ಟರಲ್ಲಾಗಲೇ ಜುಲೈ 1 ರ ಒಳಗೆ ಅದೇ ಯುವತಿಯ ಮದುವೆ ಸಮಾರಂಭಕ್ಕೆ ಯುವಕನ ಕುಟುಂಬ ವರ್ಗ ಭರದ ಸಿಧ್ಧತೆ ನಡೆಸಿದ್ದು ಅದಕ್ಕೆ ಸಮ್ಮತಿಸದ ಯುವತಿಗೆ ಅಪಾಯದ ಸಾಧ್ಯತೆಯೂ ಇತ್ತು ಎನ್ನಲಾಗಿದೆ. ಇದರಿಂದ ಕಡಿಮೆ ಅವಧಿಯೊಳಗೆ ಅಂಕೋಲಾ ದಿಂದ ದೂರದ ಓಡಿಶಾಗೆ ತೆರಳಿ ,ಯುವತಿ ರಕ್ಷಣೆಯ ಜವಾಬ್ದಾರಿ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು.

ಜಿಲ್ಲೆಯ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ಎಸ್ ಪಿ ಸುಮನ್ ಪೆನ್ನೇಕರ್ ನಿರ್ದೇಶನದಂತೆ, ಸಿಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ತ್ವರಿತ ರಕ್ಷಣಾ ಕಾರ್ಯಕ್ಕೆ ಮುಂದಾದ ಅಂಕೋಲಾ ಪಿ ಎಸೈ ಮಹಾಂತೇಶ ಬಿ.ವಿ, ಸಿಬ್ಬಂದಿ ಶ್ರೀಕಾಂತ್ ಕಟಬರ್, ಮತ್ತು ಯುವತಿಯ ತಂದೆಯೊಂದಿಗೆ ಕಲ್ಕತ್ತಾ ವಿಮಾನ ಏರಿದ್ದರು.

ಅಲ್ಲಿಂದ ಭುವನೇಶ್ವರ ಮಾರ್ಗವಾಗಿ ಓರಿಸ್ಸಾ ರಾಜ್ಯದ ,ಭಾದ್ರಕ ಜಿಲ್ಲೆ – ಭಾಂಡಾರಿಪೋಕಾರಿ ಪೊಲೀಸ್ ಠಾಣೆಗೆ ತೆರಳಿ, ಸ್ಥಳೀಯ ಪೊಲೀಸರ ನೆರವಿನಿಂದ
ಯುವತಿ ಇರುವ ಸ್ಥಳಕ್ಕೆ ತೆರಳಿ, ಚಾಣಾಕ್ಷತನದಿಂದ ತಾವು ತಂದಿದ್ದ ವಾಹನದ ಮೇಲೆ ಕೂಡ್ರಿಸಿಕೊಂಡು, ನಂತರ ಅಂಕೋಲಾಕ್ಕೆ ಕರೆ ತಂದಿದ್ದಾರೆ ಎನ್ನಲಾಗಿದೆ.

ಫೆ.14ರ ಪ್ರೇಮಿಗಳ ದಿನ ( ವೆಲೆಂಟೈನ್ ಡೇ ) ದಂದು ತನ್ನ ಹೊಂಗನಸು ಕಟ್ಟಿಕೊಂಡು ಇಲ್ಲಿಂದ ಹಾರಿ ದೂರದೂರಿಗೆ ಹೋಗಿ ಸೇರಿಕೊಂಡಿದ್ದ ಪ್ರೇಮ ಪಕ್ಷಿ, ಪುನಃ ಅಲ್ಲಿಂದ ಹಾರಿ ಬಂದು ಮರಳಿ ಗೂಡು ಸೇರಿಕೊಂಡಂತಾಗಿದೆ.

ಅತ್ತ ತನ್ನ ಪತ್ನಿಯನ್ನು ಯಾರೋ ಬಂದು ಕರೆದೊಯ್ಯದಿದ್ದಾರೆ ಎಂದು ಒರಿಸ್ಸಾದ ಯುವಕನೂ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾನೆ ಎನ್ನಲಾಗಿದೆ. ಮತ್ತೆ ಆತ ಪ್ರೀತಿಯ ಪಾರಿವಾಳವನ್ನರಸಿ ಬರಬಹುದೇ?. ವಿವಾಹ ನೊಂದಣಿಯಾಗಿಯೂ ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೆ ಹೇಗೆ? ಮುಂದೇನು ? ಎಂಬಿತ್ಯಾದಿ ಪ್ರಶ್ನೆಗಳು ಅಲ್ಲಲ್ಲಿ ಕೇಳಿ ಬಂದಂತಿದ್ದು ಕಾನೂನು ಚೌಕಟ್ಟೇ ಇದಕ್ಕೆಲ್ಲ ಪರಿಹಾರ ಎನ್ನುವವರೂ ಇದ್ದಾರೆ.

ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಅಸಹಾಯಕ ಸ್ಥಿತಿಯಲ್ಲಿ ಸಿಲುಕಿ ಸಂಕಟಪಡುತ್ತಿದ್ದ ಹೆಣ್ಣು ಮಗಳನ್ನು, ಸಾವಿರಾರು ಕಿ.ಮೀ ದೂರದಿಂದ ಸುರಕ್ಷಿತವಾಗಿ ಕರೆತರುವಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಮತ್ತು ವಿಶೇಷ ಕಳಕಳಿ ವ್ಯಕ್ತಪಡಿಸಿದ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಹಕರಿಸಿದ ಸರ್ವರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Back to top button