ಸತತವಾಗಿ ಸುರಿಯುತ್ತಿರುವ ಮಳೆ : ಜಲಾವೃತಗೊಂಡ ಇಳೆ, ಕೃಷಿ ಕಾರ್ಯಕ್ಕೂ ಹಿನ್ನಡೆ :ಮರ ಬಿದ್ದು ರಸ್ತೆ ಸಂಚಾರಕ್ಕೆ ತಡೆ : ಮನೆಗಳಿಗೂ ಹಾನಿ

ಅಂಕೋಲಾ: ತಾಲೂಕಿನ ಬಹುತೇಕ ಕಡೆ ಕಳೆದ ಎರಡು ದಿನಗಳಿಂದ ಮಳೆ ಅರ್ಭಟ ಜೋರಾಗಿದ್ದು ಜನ ಜೀವನಕ್ಕೆ ಪರಿಣಾಮ ಬೀರುತ್ತಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವಂತಾಗಿದ್ದು, ಹೊಲ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ.

ತಾಲೂಕಿನ ವಾಸರಕುದ್ರಗಿ ಗ್ರಾಮದ ಮುಖ್ಯರಸ್ತೆಯ ಕಿರು ಸೇತುವೆ ಬಳಿ ನೀರು ಸರಾಗವಾಗಿ ಹರಿದು ಹೋಗಲು ಅಡೆ ತಡೆ ಉಂಟಾದ ಕಾರಣ ಅಕ್ಕ ಪಕ್ಕದ ಹೊಲ ಗದ್ದೆಗಳು ಜಲಾವೃತವಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ವಾಸರ ಕುದ್ರಗಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು ಕಳೆದ ಮೂರು ವರ್ಷಗಳ ಕಾಲ ಗಂಗಾವಳಿ ನದಿ ನೆರೆ ಹಾವಳಿಯಿಂದ ತತ್ತರಿಸಿದ್ದವು. ಕಳೆದೆರಡು ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ,ಮುಂಜಾಗ್ರತಾ ಕ್ರಮವಾಗಿ ತಹಶೀಲ್ಧಾರ ಉದಯ ಕುಂಬಾರ ವಿವಿಧ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ನಾಯಕ ವಾಸರೆ,ಸ್ಥಳೀಯ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು.

ಪಿ.ಡಿ.ಓ ವಂದನಾ ನಾಯಕ, ಕಂದಾಯ ನಿರೀಕ್ಷಕ ಪ್ರಜ್ಞೇಶ, ಗ್ರಾಮ ಲೆಕ್ಕಾಧಿಕಾರಿ ಶೈಲೇಶ ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.


ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊರಳ್ಳಿ ಬಳಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಪರಿಣಾಮ ಹಿಲ್ಲೂರು -ಹೊಸಕಂಬಿ ಮತ್ತು ಅಚವೆ ಮಾರ್ಗದಲ್ಲಿ ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿ, ಕೆಲ ವಾಹನ ಸವಾರರು ಪರ್ಯಾಯ ವ್ಯವಸ್ಥೆ ಇಲ್ಲದೇ ಕೆಲ ಹೊತ್ತು ಕಾಯುವಂತಾಯಿತು.

ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಅಕ್ಕ ಪಕ್ಕದ ಎರಡು ವಿದ್ಯುತ್ ಕಂಬಗಳು ಸಹ ತುಂಡಾಗಿ, ರಸ್ತೆಯಲ್ಲಿ ಬಿದ್ದು ಮತ್ತಷ್ಟು ಸಮಸ್ಯೆ ಎದುರಾಯಿತು.
ಶಾಲಾ- ಕಾಲೇಜ ವಿದ್ಯಾರ್ಥಿಗಳು ಸಂಚರಿಸುವ ಬಸ್,ಮತ್ತಿತರ ವಾಹನಗಳ ಓಡಾಟಕ್ಕೆ ಅನುಕೂಲವಾಗುವಂತೆ ಅಚವೆ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು, ಇತರರು ರಸ್ತೆಯಲ್ಲಿ ಬಿದ್ದ ಮರ ತೆರುಗೊಳಿಸಿ, ಸುಗಮ ಸಂಚಾರಕ್ಕೆ ಶ್ರಮಿಸಿದರು.ತಾಲೂಕಿನ ವಿವಿಧ ಕಡಲ ತೀರಗಳಲ್ಲಿಯೂ ಸಮುದ್ರ ಭೋರ್ಗೆರೆತ ಜೋರಾಗಿದ್ದು ಭಾರಿ ಅಲೆಗಳು ದಡದಂಚಿನ ಪ್ರದೇಶಕ್ಕೆ ಅಪ್ಪಳಿಸಲಾರಂಭಿಸಿದೆ.

ಇದರಿಂದ ಕೆಲವೆಡೆ ಕಡಲ ಕೊರೆತದ ಭೀತಿ ಹಾಗೂ ಆತಂಕ ಹಲವರನ್ನು ಕಾಡುತ್ತಿದೆ. ಪಟ್ಟಣ ವ್ಯಾಪ್ತಿಯ ಹೊನ್ನೇ ಕೇರಿಯಲ್ಲಿ ಮನೆಯೆಂದರೆ ಮೇಲೆ ಹಲಸಿನ ಮರ ಬಿದ್ದು ಹೆಚ್ಚಿನ ಹಾನಿ ಸಂಭವಿಸಿದ್ದರೆ, ಗ್ರಾಮೀಣ ವ್ಯಾಪ್ತಿಯ ಶಿರೂರು ಹಾಗೂ ಜೂಗಾ ವ್ಯಾಪ್ತಿಯಲ್ಲಿ ಮನೆಯ ಮೇಲೆ ತೆಂಗಿನ ಮರ ಬಿದ್ದು ಪ್ರತ್ಯೇಕ – ಪ್ರತ್ಯೇಕ (ಎರಡು) ಮನೆಗಳಿಗೆ ಭಾಗಶಹ ಹಾನಿಯಾದ ವರದಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಹಾನಿ ಸಮೀಕ್ಷೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version