ರೈಲಿನಲ್ಲಿ ತಾಯಿ ಇರಲಿಲ್ಲ, ಬರೀ ಲಗೇಜ್ ಮಾತ್ರ ಇತ್ತು: ಶೌಚಾಲಯಕ್ಕೆ ಹೋಗುವ ವೇಳೆ ಆಯತಪ್ಪಿ ಬಿದ್ದು ಸಾವನ್ನಪಿದ್ದಳೇ ಮಹಿಳೆ?
ತಾಯಿಯ ಮೃತದೇಹ ಗುರುತಿಸಿದ ಮಗ
ಅಂಕೋಲಾ ತಾಲೂಕಿನ ಉಳುವರೆ ಬೋಳುಕಟ್ಟೆ ಸಮೀಪ ರೈಲ್ವೆ ಹಳಿ ಪಕ್ಕದ ಮುಳ್ಳು ಪೊದೆಗಳ ಬಳಿ ಕಳೆದ ಗುರುವಾರ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಮೃತ ದೇಹವನ್ನು, ಮೃತಳ ಕುಮಂಬಸ್ಥರು ಗುರುತಿಸಿ ತಮ್ಮ ತಾಬಾ ತೆಗೆದುಕೊಳ್ಳುವ ಮೂಲಕ ಸಾವಿನ ಸುತ್ತ ಹಬ್ಬಿದ್ದ ಸಂಶಯದ ಹುತ್ತ ನಿವಾರಣೆಯಾದಂತಾಗಿದೆ.
ಕಳೆದ ಎರಡು ದಿನಗಳ ಹಿಂದೆ ಅಂಕೋಲಾ ತಾಲೂಕಿನ ಉಳುವರೆ ವ್ಯಾಪ್ತಿಯಲ್ಲಿ ಕೊಂಕಣ ರೈಲ್ವೆ ಹಳಿ ಹಾದು ಹೋಗಿರುವ ಮಾರ್ಗ ಮಧ್ಯೆ ಬೋಳುಕುಂಟೆ ಪ್ರದೇಶದ ಮುಳ್ಳುಕಂಟೆಗಳಿದ್ದ ಸ್ಥಳದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿ,ಸಾವಿನ ಕುರಿತಂತೆ ಹಲವು ಅನುಮಾನಗಳು ಕಾಡಹತ್ತಿದ್ದವು. ಸ್ಥಳೀಯ ಪೋಲೀಸರು ರೈಲ್ವೆ ಪೊಲೀಸರಿಗೂ ಈ ಕುರಿತು ಮಾಹಿತಿ ರವಾನಿಸಿದ್ದರು. ಆ ಬಳಿಕ ಮೃತ ಮಹಿಳೆ ಮಹಾರಾಷ್ಟ್ರದ ಪನವೇಲ್ ನಿವಾಸಿ ನಿರ್ಮಲಾದೇವಿ(63) ಎಂದು ತಿಳಿದು ಬಂದಿದೆ.
ಈಕೆ ಕೇರಳದ ಕೋಚಿವಲಿಯಿಂದ ಮುಂಬೈ ಸಮೀಪದ ಪನವೇಲ್ ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈಕೆ ಶೌಚಾಲಯಕ್ಕೆ ಹೋಗುವ ಸಂದರ್ಭದಲ್ಲಿ ಚಲಿಸುತ್ತಿರುವ ರೈಲಿನ ಬಾಗಿಲಿನಿಂದ ಆಯ ತಪ್ಪಿ ಕೆಳಗೆ ಬಿದ್ದು ಮೃತ ಪಟ್ಟಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಗುರುವಾರ ತನ್ನ ತಾಯಿಯ ಬರುವಿಕೆಗಾಗಿ ಪನವೇಲ್ ರೈಲ್ವೆ ನಿಲ್ದಾಣದಲ್ಲಿ ಕಾದಿದ್ದ ಮಗ, ನಿಗದಿತ ರೈಲು ಬಂದರೂ ತನ್ನ ತಾಯಿ ಕಾಣದಿದ್ದಾಗ ಹುಡುಕಾಡಿ, ತಾಯಿ ಇರಬೇಕಾದ ರೈಲು ಭೋಗಿಯಲ್ಲಿ ಕೇವಲ ತಾಯಿಯ ಲಗೇಜು ಬ್ಯಾಗಗಳಿರುವುದನ್ನು ಕಂಡು, ಆತಂಕದಿಂದ ಅದೇ ರೈಲಿನಲ್ಲಿದ್ದ ಸಹ ಪ್ರಯಾಣಿಕರನ್ನು ವಿಚಾರಿಸಿದ ವೇಳೆ, ಸಹ ಪ್ರಯಾಣಿಕರಾರೋ ಉತ್ತರಿಸಿ, ನೀವು ತಾಯಿ ಎಂದು ಹೇಳಿ ನಮ್ಮ ಬಳಿ ವಿಚಾರಿಸುತ್ತಿರುವ ಮಹಿಳೆ,ನಸುಕಿನ ಜಾವ ಎದ್ದು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ತಿರುಗಿ ಬಂದತಿಲ್ಲಾ ಎಂದು ಹೇಳಿದರು ಎನ್ನಲಾಗಿದೆ.
- ಮನೆಗೆ ಅಪ್ಪಳಿಸಿದ ಸಿಡಿಲು: ಮನೆ ಹೇಗಾಗಿದೆ ನೋಡಿ?
- ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು
- ಬೈಕ್ ಗಳ ನಡುವೆ ಡಿಕ್ಕಿ: ಸವಾರ ಗಂಭೀರ : ಡಿಕ್ಕಿ ಪಡಿಸಿದ ಇನ್ನೋರ್ವ ಪರಾರಿ
ಈ ನಡುವೆ ಅಂಕೋಲಾದಲ್ಲಿ ಅಪರಿಚಿತ ಮಹಿಳೆಯ ಮೃತ ದೇಹ ದೊರಕಿದ ಕುರಿತು ರೈಲ್ವೆ ಪೊಲೀಸರಿಗೂ ಸ್ಥಳೀಯ ಪೊಲೀಸರು ಮಾಹಿತಿ ರವಾನಿಸಿದ್ದರು. ಮಹಿಳೆ ಧರಿಸಿದ್ದ ಬಟ್ಟೆ, ಕಿವಿಯೋಲೆ ಗುರುತಿಸುವಿಕೆ ಮೂಲಕ ಅಂಕೋಲಾದಲ್ಲಿ ಮೃತಪಟ್ಟಿರುವ ಮಹಿಳೆ ತನ್ನ ತಾಯಿಯೇ ಎಂದು ಹೇಳಿ ಇಲ್ಲಿಗೆ ಬಂರು ಅಂಕೋಲಾ ಪೊಲೀಸರನ್ನು ಸಂಪರ್ಕಿಸಿ, ಕಾರವಾರದ ಶವಾಗಾರದಲ್ಲಿ ಇಡಲಾಗಿದ್ದ ಮೃತದೇಹ ನೋಡಿ, ತನ್ನ ತಾಯಿ ಎಂದು ಧೃಡಪಡಿಸಿಕೊಂಡು, ಕಾನೂನು ಪ್ರಕ್ರಿಯೆ ಮುಗಿಸಿ , ಮೃತದೇಹವನ್ನು ತಮ್ಮ ತಾಬಾ ತೆಗೆದುಕೊಂಡು ಊರಿಗೆ ಮೃತ ದೇಹವನ್ನು ಒಯ್ದಿರುವುದಾಗಿ ತಿಳಿದು ಬಂದಿದೆ.
ಉಳುವರೆ ಬೋಳು ಕುಂಟೆ ಬಳಿ ಗುರುವಾರ ಮೃತದೇಹ ಪತ್ರೆಯಾಗಿ ನಾನಾ ಊಹಾಪೋಹಗಳಿಗೆ ಕಾರಣವಾಗಿತ್ತಾದ್ದರೂ,ಮೃತ ಮಹಿಳೆ ಸಂಚರಿಸುತ್ತಿರುವ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ವಿಸ್ಮಯ ವಾಹಿನಿಯೂ ಸುದ್ದಿ ಬಿತ್ತರಿಸಿತ್ತು. ಅಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ, ಮಹಿಳೆಯ ಮೃತ ದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲು ವ್ಯವಸ್ಥೆ ಕಲ್ಪಿಸಿ ರೈಲ್ವೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.
ಘಟನಾ ಸ್ಥಳದಿಂದ ಕಾರವಾರ ಶವಗಾರಕ್ಕೆ ಮೃತದೇಹ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ,ಸಹಾಯಕ ಬೊಮ್ಮಯ್ಯ ನಾಯ್ಕ ಇವರಿಗೆ ಪೊಲೀಸ್ ಸಿಬ್ಬಂದಿಗಳು ಮತ್ತು ಸ್ಥಳೀಯರು ಸಹಕರಿಸಿದ್ದರು. ಎಲ್ಲಿಂದಲೋ ಹೊರಟು ಎಲ್ಲೋ ತಲುಪಬೇಕಿದ್ದ ಮಹಿಳೆ ದಾರಿ ಮಧ್ಯೆ ಮೃತಪಟ್ಟಿದ್ದು ,ಕೊನೆಗೂ ಅವಳ ಗುರುತಿಸುವಿಕೆ ಮೂಲಕ ಸಾವಿನ ಕುರಿತಾದ ಉಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ