ಗಣಪತಿಯ ಅಲಂಕಾರದ ಆಭರಣ ಕಳ್ಳತನ: ಮನೆಯ ಹಿಂಬಾಗಿಲು ಒಡೆದು ಹೊಂಚು ಹಾಕಿ ಕದ್ದ ಕಳ್ಳರು: ಕಾಡುತ್ತಿದೆ ಹಲವು ಅನುಮಾನ?
ಅಂಕೋಲಾ: ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಹಿಂಬದಿ ಬಾಗಿಲು ಒಡೆದು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ತಾಲೂಕಿನ ಬೇಳಾ ಬಂದರ ರಸ್ತೆಯ ಕನಸೆಗದ್ದೆಯ ಪೀರ ಶೆಟ್ಟಿಕಟ್ಟೆ ಬಳಿ ನಡೆದಿದೆ.
ಜುಲೈ 6 ರಿಂದ ಜುಲೈ 10 ರ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದು,ನಾರಾಯಣ ಶೆಟ್ಟಿ ಎನ್ನುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಸಂತೋಷ ಗಣಪತಿ ನಾಯ್ಕರವರ ಮನೆಯ ಹಿಂಬದಿಯ ಬಾಗಿಲನ್ನು ಯಾರೋ ಕಳ್ಳರು ಒಡೆದು ಒಳನುಗ್ಗಿ ಗೋದ್ರೆಜನಲ್ಲಿಟ್ಟದ್ದ 20 ಗ್ರಾಂ ತೂಕದ ಲಾಕೆಟ್ ಸಹಿತ ಇರುವ 1 ಬಂಗಾರದ ಚೈನ್,5 ಗ್ರಾಂ ತೂಕದ 3 ಬಂಗಾರದ ಉಂಗುರಗಳು ಸೇರಿ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಚೈನು, ಕಡಗ, ನೇಮಾ, ಕಾಲಗೆಜ್ಜೆ,ಇಲಿ, ಸೊಂಡಿಲ ಪಟ್ಟಿ ಸೇರಿದಂತೆ 7 ಸಾವಿರ ರೂಪಾಯಿ ಮೌಲ್ಯದ ಸುಮಾರು 200 ಗ್ರಾಂ ತೂಕದ ಬೆಳ್ಳಿ ( ಚೌತಿ ಗಣಪನ ಅಲಂಕಾರದ ) ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ವಾಚಮನ್ ಹಾಗೂ ಕೂಲಿ ವೃತ್ತಿಯ ಸಂತೋಷ ಗಣಪತಿ ನಾಯ್ಕ (40), ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ. ಅವಿವಾಹಿತನಾದ ಸಂತೋಷನು ಮೊದಲಿನಿಂದಲೂ ಕಷ್ಟ ಪಟ್ಟು ಕೂಲಿನಾಲಿ ಮಾಡುವುದು, ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುವುದು, ಮನೆಮನೆಗೆ ದಿನಪತ್ರಿಕೆ – ಹಾಲು ಹಂಚಿ ಸ್ವಾಭಿಮಾನದಿಂದ ಬದುಕುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದ. ಕಳೆದ ಕೆಲದಿನಗಳ ಹಿಂದೆ ತಾನಿರುವ ಹಳೆಯ ಮನೆ ಸೋರಿ ಮಳೇ ನೀರು ಬಳಿ ಸೇರುತ್ತಿದೆ ಎಂದು ಮನೆ ಮಾಲಕರ ಬಳಿ ಹೇಳಿ ಪಕ್ಕದ ರೂಂ ಗೆ ಶಿಫ್ಟ್ ಆಗಿದ್ದ .
ಈ ವೇಳೆ ಸಂತೋಷನ ಮನೆ ಸಾಮಾಗ್ರಿ ಶಿಫ್ಟ್ ಮಾಡಲು ಸಹಕರಿಸಿದ್ದ ಪರಿಚಿತ ಗೆಳೆಯ, ತದನಂತರ ಸಂತೋಷ ಮನೆಯಲ್ಲಿರದ ವೇಳೆ ಹಿಂಬದಿ ಬಾಗಿಲ ಮೂಲಕ ಪ್ರವೇಶಿಸಿ ಕಳ್ಳತನ ಎಸಗಿರುವ ಸಾಧ್ಯತೆಗಳ ಕುರಿತು ಸಂಶಯದ ಮಾತುಗಳು ಕೇಳಿ ಬಂದಂತ್ತಿದ್ದು ಪೋಲೀಸ್ ತಖೆಯಿಂದ ಸತ್ಯಾಂಶ ಹೊರಬೀಳ ಬೇಕಿದೆ. ಕಳ್ಳ ಯಾರೇ ಇದ್ದರೂ ಬಡಪಾಯಿ ಸಂತೋಷನ ಅದರಲ್ಲೂ ಮುಖ್ಯವಾಗಿ ಮಹಾಗಣಪತಿ ಆಭರಣ ಕದ್ದವ ಕಂಬಿ ಎಣಿಸಲೇ ಬೇಕು. ಆತ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ಕೆಲ ಸ್ಥಳೀಯರ ನಂಬಿಕೆಯಾಗಿದೆ.ಮಳೆಗಾಲ ಮತ್ತಿತರ ಕಾರಣಗಳಿಂದ ಪ್ರಕರಣಗಳು ಥಟ್ಟನೆ ಬೆಳಕಿಗೆ ಬರಲು ತೊಡಕಾಗುತ್ತಿದ್ದು, ಸಾರ್ವಜನಿಕರು ತಮ್ಮ ಅಮೂಲ್ಯ ವಸ್ತುಗಳ ಕುರಿತು ಸ್ವತಃ ತಾವೇ ಮತ್ತಷ್ಟು ಜಾಗರೂಕತೆ ವಹಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ