Follow Us On

WhatsApp Group
Focus News
Trending

ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರ: ಕನ್ನಡ ವಿಷಯದಲ್ಲಿರುವ ಕ್ಲಿಷ್ಟಾಂಶ ಕುರಿತು ಶಿಕ್ಷಕರ ಜೊತೆ ಚರ್ಚೆ

ಕುಮಟಾ:- ಕ್ಷೇತ್ರ ಶಿಕ್ಷಣಾಧಿಕಾರಗಳ ಕಾರ್ಯಾಲಯ ಕುಮಟಾ, ಮಹಾತ್ಮಾಗಾಂಧಿ ಪ್ರೌಢಶಾಲೆ ಚಿತ್ರಿಗಿ ಹಾಗೂ ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಕುಮಟಾ ತಾಲೂಕಾ ಪ್ರೌಢಶಾಲೆಗಳ ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರವನ್ನು ಮಹಾತ್ಮಾಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಸಂಯೋಜಕರಾದ ಶ್ರೀಮತಿ ಜಯಶ್ರೀ ಎ.ಪಿ ರವರು ಮಾತನಾಡಿ “ಕನ್ನಡ ಭಾಷಾ ಶಿಕ್ಷಕರ ಸಂಘವು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರತಿಭೆಯನ್ನು ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದರ ಮೂಲಕ ಗುರುತಿಸಬೇಕು” ಎನ್ನುವುದರ ಜೊತೆಗೆ ಶಿಕ್ಷಕರು ವೃತ್ತಿಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಕಾರ್ಯಗಾರಗಳಿಂದ ವಿಷಯದಲ್ಲಿನ ಕ್ಲಿಷ್ಟಾಂಶಗಳನ್ನು ಶಿಕ್ಷಕರು ಬಗೆಹರಿಸಿಕೊಳ್ಳಬೇಕು” ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾತ್ಮಾಗಾಂಧಿ ಪ್ರೌಢಶಾಲೆ ಚಿತ್ರಿಗಿ ಮುಖ್ಯಾಧ್ಯ್ಯಾಪಕರಾದ ಹಾಗೂ ಕುಮಟಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪಾಂಡುರoಗ ವಾಗ್ರೇಕರ್ ಮಾತನಾಡಿ “ನಮ್ಮ ಭಾಷೆಯಲ್ಲಿಯೇ ತಿಳಿಯಲಾರದಷ್ಟು ವಿಷಯವಿರುವಾಗ, ಸಾಹಿತ್ಯವಿರುವಾಗ ಪರದೇಶಿ ಭಾಷೆಗಳ ವ್ಯಾಮೋಹ ಕಂಡು ಮನಸ್ಸು ವ್ಯಥೆ ಪಡುತ್ತದೆ. ಶಿಕ್ಷಣದ ಹೊಸ ಸಂವತ್ಸರ ಆರಂಭಗೊoಡಿದೆ, ವಿದ್ಯೆಯಲ್ಲಿ ಈಗ ವಿನೂತನ ವಿದ್ಯಮಾನಗಳು, ವಿನೂತನ ವಿದ್ಯುನ್ಮಾನಗಳು, ತಾಂತ್ರಿಕ ಸಾಧನಗಳು ಇಂದು ಶಿಕ್ಷಣದ ಅವಿಭಾಜ್ಯ ಅಂಗ ಅದಕ್ಕಾಗಿ ಇಂತಹ ಕಾರ್ಯಗಾರಗಳು ಶಿಕ್ಷಕರಿಗೆ ಅತಿ ಅಗತ್ಯ” ಎಂದರು.

ಕಾರ್ಯಕ್ರಮ ಮುಖ್ಯ ಅತಿಥಿಗಳಾದ ಬಿ.ಆರ್.ಪಿ ಕುಮಟಾ ಶ್ರೀಮತಿ ವಿಜಯಲಕ್ಷಿ ಹೆಗಡೆಯವರು ಮಾತನಾಡಿ “ಗುಣಾತ್ಮಕ ಶಿಕ್ಷಣ ನೀಡಲು ಇಂತಹ ಕಾರ್ಯಾಗಾರಗಳು ಅತ್ಯಂತ ಅವಶ್ಯಕ, ಪ್ರಕೃತಿದತ್ತವಾದ ವಾತಾವರಣದಲ್ಲಿರುವ ಚಿತ್ರಿಗಿ ಪ್ರೌಢಶಾಲೆಯಲ್ಲಿ ಕಾರ್ಯಗಾರ ಹಮ್ಮಿಕೊಂಡಿದ್ದು ಸಂತೋಷದ ವಿಷಯ” ಎಂದರು.

ಚಿತ್ರಿಗಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಚಿತ್ರಿಗಿ ಪ್ರೌಢಶಾಲೆಯ ಶಾಲೆಯ ಕನ್ನಡ ಶಿಕ್ಷಕರಾದ ಎಸ್.ಪಿ ಪೈ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ಎನ್ ರಾಮು ಹಿರೇಗುತ್ತಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಮಂಜುಳಾ ಕುಮಟಾಕರ ವಂದಿಸಿದರು.

ನಂತರ ಕನ್ನಡ ವಿಷಯದಲ್ಲಿರುವ ಕ್ಲಿಷ್ಟಾಂಶಗಳನ್ನು ಶಿಕ್ಷಕರ ಜೊತೆ ಚರ್ಚಿಸಿ ವಿಷಯ ಮಂಡಿಸಿದರು. ಕಾರ್ಯಾಗಾರಕ್ಕೆ ಆಗಮಿಸಿದ ಶಿಕ್ಷಕರು ಚರ್ಚಿಸಿ ಪಾಠಬೋಧನೆಯಲ್ಲಿ ಕಲಿಕಾ ಹಾಳೆಗಳ ಬಳಕೆ ಕುರಿತು ಚರ್ಚಿಸಿದರು. ಕುಮಟಾ ತಾಲೂಕಿನ ಎಲ್ಲಾ ಪ್ರೌಢಶಾಲಾ ಕನ್ನಡ ಶಿಕ್ಷಕರು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

Back to top button