Important
Trending

ಉತ್ತರಕನ್ನಡ ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಹಾಗೂ ನಾಡಪ್ರಭು ಕೆಂಪೇಗೌಡರವರ ಜಯಂತೋತ್ಸವ

ಕುಮಟಾ: ಪ್ರತಿಭೆ ಮನುಷ್ಯನ ಸಹಜ ಗುಣ. ಅದು ಸುಪ್ತವಾಗಿ ಎಲ್ಲರಲ್ಲೂ ಅಡಗಿರುತ್ತದೆ. ಅದನ್ನು ಪ್ರಕಾಶಿಸುವಂತೆ ಮಾಡಲು ನಾವು ಪ್ರಯತ್ನಿಸಬೇಕು. ಪ್ರತಿಭೆಗೆ ಮೇಲ್ವರ್ಗ ಕೆಳವರ್ಗ ಎಂಬ ಭೇದ ತಾರತಮ್ಯ ಇರುವುದಿಲ್ಲ. ಯಾವ ವ್ಯಕ್ತಿ ಅಧ್ಯಯನ ಶೀಲನಾಗಿರುತ್ತಾನೋ  ಅವನಲ್ಲಿ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಶಾಖಾ ಮಠದ  ಪ್ರಸನ್ನನಾಥ ಸ್ವಾಮೀಜಿ ಅವರು ಅಭಿಪ್ರಾಯ ಪಟ್ಟರು.

ಎರಡು ಕಾರುಗಳ ನಡುವೆ ಭೀಕರ ಅಪಘಾತ: ಮೂವರ ಸಾವು: ಹಲವರಿಗೆ ಗಂಭೀರ ಗಾಯ

ಅವರು ಕುಮಟಾ ತಾಲ್ಲೂಕಿನ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಹಾಲಕ್ಕಿ ಒಕ್ಕಲಿಗರ ಸಂಘ ಕುಮಟಾ-ಹೊನ್ನಾವರ ವತಿಯಿಂದ ಆಯೋಜಿಸಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಹಾಗೂ ನಾಡಪ್ರಭು ಕೆಂಪೇಗೌಡರವರ ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯದ ವಹಿಸಿ ಮಾತನಾಡುತ್ತಾ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹಾಲಕ್ಕಿ ಒಕ್ಕಲಿಗರು ಬುಡಕಟ್ಟು ಸಂಸ್ಕೃತಿ ಹೊಂದಿರುವ ಕಲೆ ಸಂಪ್ರದಾಯದಲ್ಲಿ ಶ್ರೀಮಂತವಾಗಿರುವ ಸಮುದಾಯ. ಆರ್ಥಿಕವಾಗಿ, ಶೈಕ್ಷಣಿಕವಾಗಿ  ಹಿಂದುಳಿದವರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಾಕೆ ಹಿಂದುಳಿದಿದ್ದಾರೆ ಎಂಬುದನ್ನು ಪ್ರತಿಯೊಬ್ಬ ಹಾಲಕ್ಕಿ ಪ್ರಶ್ನಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಶಿಕ್ಷಣ ಪ್ರತಿಯೊಬ್ಬರ ಹಕ್ಕು

ಎಲ್ಲಿ ಶಿಕ್ಷಣ ಇರುತ್ತೋ ಅಲ್ಲಿ ದಾರಿದ್ರ್ಯ  ಮುಕ್ತವಾಗುತ್ತದೆ.  ಶಿಕ್ಷಣ ಪ್ರತಿಯೊಬ್ಬರ ಹಕ್ಕು ಇದು ಸಂವಿಧಾನವೇ ನಮಗೆ ನೀಡಿದೆ. ಅದನ್ನು ಪಡೆದುಕೊಳ್ಳುವ ಛಲ ಹೋರಾಟ ಮಾಡಬೇಕು.. ಪ್ರತಿಭಾ ಪುರಸ್ಕಾರದಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿರುವುದು ಅತ್ಯಂತ ಅಭಿನಂದನೀಯ ಮತ್ತು ಶ್ಲಾಘನೀಯ ಕೆಲಸ. ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳು ತಮ್ಮ ಮುಂದಿನ ಪೀಳಿಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಅಂದಾಗ ಮಾತ್ರ ಸಮಾಜ ಮುಂದುವರೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ಚುಂಚಶ್ರೀ ಪ್ರಶಸ್ತಿಗೆ ಆಯ್ಕೆಯಾದ ತುಳಸಿ  ಗೌಡರವರು  ಎಲ್ಲರೂ ಗಿಡ ನೆಡುವುದರ ಮೂಲಕ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗೋವಿಂದ ಗೌಡರವರು  ಪ್ರತಿಭಾವಂತರಾಗಿರುವ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಹೆದರಿ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನೆರವು ನೀಡಲು ನಮ್ಮ ಸಂಘ ವಿದ್ಯಾನಿಧಿ ಎನ್ನುವ ಯೋಜನೆ ಮೂಲಕ  ಎಲ್ಲಾ ದಾನಿಗಳ ನೆರವು ಪಡೆದು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಅದನ್ನು ಪಡೆದವರು ಭವಿಷ್ಯದಲ್ಲಿ ಅಷ್ಟೇ ಗೌರವ ಪೂರಕವಾಗಿ ಹಿಂದಿರುಗಿಸಿ ಉಳಿದವರಿಗೆ ಅನುಕೂಲ ಮಾಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ವೇದಿಕೆಯಲ್ಲಿ   ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಕಾರವಾರ ಪ್ರಾಂಶುಪಾಲರಾದ ವಾಸುದೇವ ಗೌಡ,  ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ ಬಿ ಗೌಡ, ನೌಕರರ ಸಂಘದ ಅಧ್ಯಕ್ಷ ಆರ್ ಪಿ ಗೌಡ, ಗ್ರಾಮ ಒಕ್ಕಲು ಸಮುದಾಯ ಭವನದ ಅಧ್ಯಕ್ಷ  ಮಂಜುನಾಥ್ ಪಟಗಾರ, ಎಚ್ ಎನ್ ರಾಜೇಶ್ ಮಾತನಾಡಿದರು. ವೇದಿಕೆಯಲ್ಲಿ ಸುಬ್ರಾಯ ಗೌಡ, , ಸೀಮೆ ಗೌಡರಾದ ದೇವು ಗೌಡ, ಗೋಪಾಲ್ ಗೌಡ, ಪಕೀರ ಗೌಡ ಉಪಸ್ಥಿತರಿದ್ದರು. 

ಕಳೆದ ಸಾಲಿನ ಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ 85 ಹಾಗೂ ಪಿಯುಸಿ ಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಧಿಕ ಅಂಕಗಳಿಸಿದ 160 ವಿದ್ಯಾರ್ಥಿ ಪ್ರತಿಭೆಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಪನ್ಯಾಸಕ ಡಾ. ಬಾಬು ಗೌಡ, ಸರ್ಕಾರಿ ವಕೀಲ ವೆಂಕಟೇಶ್ ಗೌಡ, ಪ್ರಜಾವಾಣಿ ಚೇಂಜ್ ಮೇಕರ್ ಪ್ರಶಸ್ತಿ ಪುರಸ್ಕೃತ ಮಾರುತಿ ಗೌಡ, ಬಿಲ್ವಿದ್ಯೆ ಪ್ರವೀಣ ಅಮಿತ್ ಗೌಡ, ರಾಷ್ಟ್ರೀಯ ಕ್ರೀಡಾಪಟು ಕೃಷ್ಣ ಗೌಡ, ಜಿಲ್ಲಾ ಉತ್ತಮ ಶಿಕ್ಷಕ ಮಹಾದೇವ ಗೌಡ, ರಾಜ್ಯಮಟ್ಟದ ನಿರೂಪಕ ದಿನೇಶ್ ಗೌಡ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈಶ್ವರ ಗೌಡ ಸ್ವಾಗತಿಸಿದರು. ಡಾ.ಶ್ರೀಧರ ಗೌಡ ಪ್ರಸ್ತಾವಿಕ ಮಾತನ್ನಾಡಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button