ಮಳೆ ಗಾಳಿ ಇಲ್ಲದಿದ್ದರೂ ಕರೆಂಟ್ ಕಣ್ಣ ಮುಚ್ಚಾಲೆ !. ಶಾಸಕರು ಓಡಾಡುವ ಸ್ಥಳಗಳಲ್ಲಿಯೇ ವಿದ್ಯುತ್ ಕಡಿತಗೊಳ್ಳಲು ಕಾರಣಗಳೇನು?
ಅಂಕೋಲಾ: ಮಳೆಯೂ ಇಲ್ಲ. ಗಾಳಿಯೂ ಇಲ್ಲ . ಆದರೂ ಆಗಾಗ ಕರೆಂಟ್ ಹೋಗುವುದು ತಪ್ಪುತ್ತಿಲ್ಲ . ಅದೂ ಅಂತಿಥ ಸಾಮಾನ್ಯ ಘಳಿಗೆಯಲ್ಲಿಯೂ ಅಲ್ಲ, ಶಾಸಕರೊಬ್ಬರು ಉಪಸ್ಥಿತರಿರುವ ಸಭೆ ಸಮಾರಂಭಗಳು,ಅವರು ಓಡಾಡುವ ರಸ್ತೆ ಮತ್ತಿತರ ಕಡೆಗಳಲ್ಲಿಯೇ ಹೆಚ್ಚಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆಯಂತೆ ಇಂತಹ ಒಂದು ಗಂಭೀರ ಆರೋಪ ಮಾಡಿದ್ದು ಸ್ವತಃ ಶಾಸಕಿ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
ಅಂಕೋಲಾ ತಾಲೂಕಿನಲ್ಲಿ ತಾವು ಉಪಸ್ಥಿತರಿರುವ ಸಂದರ್ಭದಲ್ಲಿ ಪದೇ ಪದೇ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದ್ದು ಈ ಕುರಿತು ತಮ್ಮ ಹೆಸ್ಕಾಂ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸುವಂತೆ ಶಾಸಕಿ ರೂಪಾಲಿ ನಾಯ್ಕ ಅವರು ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ ನಾಯ್ಕ ಅವರಿಗೆ ಸೂಚಿಸಿದರು.
ತಾಂತ್ರಿಕ ತೊಂದರೆ ಆಗುವುದು ಸಹಜ ಆದರೆ ಪ್ರತಿ ಬಾರಿ ತಾವು ಸಭೆ ಸಮಾರಂಭಗಳಿಗೆ ಹೋಗಿ ಬರುವ ಅನೇಕ ಕಡೆಗಳಲ್ಲಿ, ಅದರಲ್ಲಿಯೂ ಹೆಚ್ಚಾಗಿ ರಾತ್ರಿ ಸಮಯದಲ್ಲಿ ಕಾರ್ಯಕ್ರಮಕ್ಕೆ ಹೊರಟ ಸಂದರ್ಭದಲ್ಲೇ ಪದೇ ಪದೇ ಯಾಕೆ ಈ ರೀತಿ ಆಗುತ್ತದೆ ಎನ್ನುವ ಕುರಿತು ಗಂಭೀರವಾಗಿ ವಿಚಾರಣೆ ಮಾಡಬೇಕಾಗುತ್ತದೆ. ನನಗೆ ಆಪತ್ತು ತರಲು ಕಾಣದ ಕೈಗಳು, ಹೆಸ್ಕಾಂ ಸಿಬ್ಬಂದಿಗಳನ್ನು ಇಲ್ಲವೇ ಇತರ ಕಿಡಿಗೇಡಿಗಳನ್ನು ಬಳಸಿಕೊಂಡು ಕುತಂತ್ರ ನಡೆಸುತ್ತಿದ್ದಾರೆಯೇ ಎಂದ ಶಾಸಕಿ ರೂಪಾಲಿ ನಾಯ್ಕ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮತ್ತು ಅಂಕೋಲಾ ಪೊಲೀಸ್ ನಿರೀಕ್ಷಕರಿಗೆ ದೂರು ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಕಾರವಾರ ಮತ್ತು ಅಂಕೋಲಾ ತಾಲೂಕುಗಳಲ್ಲಿ ಇದೇ ರೀತಿಯ ಘಟನೆಗಳು ಜರುಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದು,
ಇದರ ಹಿಂದಿರುವ ಸತ್ಯಾಂಶ ತಿಳಿದು ಬರಬೇಕಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು..
ಅಂಕೋಲಾ ತಹಶೀಲ್ಧಾರ ಉದಯ ಕುಂಬಾರ ಅವರು ಮಾತನಾಡಿ, ಶಾಸಕರ ಗಂಭೀರ ಆರೋಪದ ಕುರಿತು , ಪರಿಶೀಲಿಸಿ ವರದಿ ಸಲ್ಲಿಸುವಂತೆ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಸೂಚಿಸಿದರು. ಈ ಹಿಂದಿನ ದಿನಗಳ
ವಿದ್ಯುತ್ ಕಡಿತದ ಕುರಿತು ಕಾರಣ ಬರೆದಿರುವ ಯಾದಿಯನ್ನು ಪರಿಶೀಲಿಸಿ ವರದಿ ಸಲ್ಲಿಸುವುದಾಗಿ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ ನಾಯ್ಕ ತಿಳಿಸಿದರು. ಒಟ್ಟಿನಲ್ಲಿ ವಿದ್ಯುತ್ ಕಣ್ಣ- ಮುಚ್ಚಾಲೆ ಕುರಿತು ಸತ್ಯಾಂಶ ಹೊರಬೀಳಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ