ರೈತರ ಒಡನಾಡಿ ಗೋವುಗಳಿಗೆ ಚರ್ಮಗಂಟು ರೋಗ : ಉತ್ತರಕನ್ನಡದಲ್ಲಿ ನೂರಕ್ಕೂ ಅಧಿಕ ಜಾನುವಾರುಗಳ ಸಾವು

ಹಳ್ಳಿಪ್ರದೇಶದಲ್ಲಿ ಹೆಚ್ಚಿದ ಆತಂಕ

ಕಾರವಾರ: ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ರೋಗ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಮೈಮೇಲೆ ಏಳುವ ಗಂಟು ಗಂಟಾದ ಗುಳ್ಳೆಗಳು ದನಕರುಗಳನ್ನು ನರಳಿ ನರಳಿ ಸಾಯುವಂತೆ ಮಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿಯೂ ರೋಗದ ತೀವ್ರತೆ ಹೆಚ್ಚಾಗತೊಡಗಿದೆ. ಆದರೆ ಇಂತಹ ಹೊತ್ತಲ್ಲಿಯೇ ಜಿಲ್ಲೆಯ ಪಶು ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ದೊಡ್ಡ ತಲೆನೋವಾಗಿದ್ದು, ಚಿಕಿತ್ಸೆಗಾಗಿ ರೈತರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Railway Recruitment 2022: ಒಟ್ಟು 2422 ಹುದ್ದೆಗಳಿಗೆ ನೇಮಕಾತಿ: SSLC, ITI, PUC ಆದವರು ಅರ್ಜಿ ಸಲ್ಲಿಸಬಹುದು

ರೈತರ ಒಡನಾಡಿ ಗೋವುಗಳಿಗೆ ಚರ್ಮಗಂಟು ರೋಗ ಹರಡುತ್ತಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿಯೂ ಇದರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ದಕ್ಷಿಣ ಹಾಗೂ ಮಧ್ಯೆ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹರಡಿದ್ದ ರೋಗವು ಇದೀಗ ಉತ್ತರಕನ್ನಡ ಜಿಲ್ಲೆಗೂ ವ್ಯಾಪಿಸಿದ್ದು ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 111 ಜಾನುವಾರುಗಳು ಸಾವನ್ನಪ್ಪಿವೆ. ಒಟ್ಟು 434 ಹಳ್ಳಿಗಳಲ್ಲಿ 2500ಕ್ಕೂ ಹೆಚ್ವು ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಸದ್ಯ 1 ಸಾವಿರದಷ್ಟು ಜಾನುವಾರುವಳು ಗುಣಮುಖವಾಗಿದ್ದು ಲಕ್ಷದಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಭಟ್ಕಳ, ಹೊನ್ನಾವರ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೊನ್ನಾವರದ ಸಾಲ್ಕೋಡು ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳ ಅವಧಿಯಲ್ಲಿಯೇ 3 ಆಕಳುಗಳು ಸಾವಿಗೀಡಾಗಿವೆ. ಅಲ್ಲದೆ ರೋಗವು ಒಂದು ಆಕಳಿಂದ ಇನ್ನೊಂದು ಆಕಳಿಗೆ ಹರಡುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳನ್ನು ಸಾಕುವ ಹಳ್ಳಿಗಳಲ್ಲಿ ಇದೀಗ ಆತಂಕ ಹೆಚ್ಚಾಗಿದೆ.

ಇನ್ನು ಹಳ್ಳಿಯಲ್ಲಿರುವ ಬಹುತೇಕ ಜನರಿಗೆ ಗೋವುಗಳೇ ಆಧಾರ ಸ್ತಂಭ ಇಂತಹ ಗೋವುಗಳಿಗೆ ಎದುರಾಗಿರುವ ಸಂಕಷ್ಟ ನೀವಾರಣೆಗೆ ಬಹುತೇಕರು ಪಶು ಆಸ್ಪತ್ರೆಗಳತ್ತ ತೆರಳುತ್ತಿದ್ದಾರೆ. ಆದರೆ ಇಂತಹ ಸಂದಿಗ್ದ ಸ್ಥಿತಿಯಲ್ಲಿಯೇ ಜಿಲ್ಲೆಯ ಪಶು ಇಲಾಖೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ.ಆ್ಯಂಬುಲೆನ್ಸ್ ಕೂಡಾ ಓಡಾಡುತ್ತಿಲ್ಲ. ಇದರಿಂದ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಅವರು ಸೂಚಿಸಿದ ಔಷಧಿಗಳನ್ನು ನೀಡುವುದರ ಜತೆಗೆ ವನಸ್ಪತಿ ಎಣ್ಣೆ, ಜಾನುವಾರುಗಳ ಮೈಗೆ ಕೀಟಗಳು ಬಾರದಂತೆ ಕಹಿಬೇವು ನುಗ್ಗೆಸೊಪ್ಪಿನ ಹೊಗೆ ಮುಂತಾದವುಗಳನ್ನು ಕೂಡಾ ಬಳಸಲಾಗುತ್ತಿದೆ. ಜಾನುವಾರು ಸತ್ತ ಮೇಲೆ ಪರಿಹಾರ ನೀಡಿ ಯಾವುದೇ ಪ್ರಯೋಜನವಿಲ್ಲ ಅವುಗಳಿಗೆ ಸೂಕ್ತ ಚಿಕಿತ್ಸೆಗೆ ಲಸಿಕೆ ನೀಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದರೆ ಜಾನುವಾರುಗಳಿಗೆ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡಲಾಗಿದ್ರೂ, ವೈದ್ಯರ ಕೊರತೆಯಿಂದಾಗಿ ಆಗಿಲ್ಲ. ಜಿಲ್ಲೆಗೆ 13 ಆಂಬುಲೆನ್ಸ್ಗಳನ್ನು ಕೊಡಲಾಗಿದ್ದು, ಇದನ್ನು ಈ ತಿಂಗಳೊಳಗೆ ಕಾರ್ಯರೂಪಕ್ಕೆ ತರಲು ಆದೇಶ ನೀಡಲಾಗಿದೆ. ಸದ್ಯ 76 ಜಾನುವಾರುಗಳಿಗೆ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಜಾನುವಾರುಗಳಿಗೆ ಹಬ್ಬಿರುವ ಚರ್ಮಗಂಟು ರೋಗ ಸಾಕಷ್ಟು ಬಲಿ ತೆಗೆದುಕೊಂಡಿದ್ದು, ಸರಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಪ್ರತೀ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಜಾನುವಾರುಗಳ ಹಾಗೂ ಕೃಷಿಕರ ಜೀವನಕ್ಕೂ ಇದು ಕಂಟಕವಾಗುವುದರಲ್ಲಿ ಎರಡು ಮಾತಿಲ್ಲ.

ವಿಸ್ಮಯ ನ್ಯೂಸ್, ಕಾರವಾರ

Exit mobile version