ಪ್ರತ್ಯೇಕ ಎರಡು ಕಡೆ ಬೆಂಕಿ ಅವಘಡ: ಬೆಂಕಿಯಲ್ಲಿ ಸುಟ್ಟು ಹೋದ ಕೃಷಿ ಕೂಲಿ ಕಾರ್ಮಿಕ

ರಸ್ತೆ ಸಂಪರ್ಕ ವಿಲ್ಲದೇ ಭುಜದ ಮೇಲೆಯೇ ಮೃತ ದೇಹ ಹೊತ್ತು ಸಾಗಿಸಿದ ಸ್ಥಳೀಯರು

ಅಂಕೋಲಾ: ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಬೆರಡೆ ಮತ್ತು ಬಳಲೆ ವ್ಯಾಪ್ತಿಯಲ್ಲಿ ಪ್ರತ್ಯೇಕ – ಪ್ರತ್ಯೇಕ ಬೆಂಕಿ ಅವಘಡ ಸಂಭವಿಸಿದ್ದು, ಒಂದೆಡೆ ಜೀವ ಹಾನಿಯಾಗಿದ್ದರೆ, ಇನ್ನೊಂದೆಡೆ  ಲಕ್ಷಾಂತರ ರೂಪಾಯಿ ಆಸ್ತಿ-ಪಾಸ್ತಿ ಹಾನಿ ಅಂದಾಜಿಸಲಾಗಿದೆ.  ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಬೆರಡೆ ಗ್ರಾಮದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೃಷಿ ಕೂಲಿ ಕೆಲಸಗಾರನೊಬ್ಬ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಮೃತಪಟ್ಟಿದ್ದಾನೆ.

ದಾಮೋದರ್ ನೆಮು ನಾಯ್ಕ್ (70 ) ಮೃತ್ ದುರ್ದೈವಿಯಾಗಿದ್ದು, ಈತನು ತಮ್ಮ ಮನೆಯ ಹತ್ತಿರವಿರುವ ಮತ್ತೊಬ್ಬರ ಜಮೀನಿನಲ್ಲಿ ಹುಲ್ಲು ಗಿಡ ಗಂಟಿಗಳಿಗೆ ಅತಿಯಾದ ಗಾಳಿಯಿಂದ ಯಾವುದೇ ರೀತಿಯಲ್ಲಿ ಬೆಂಕಿ ಬಿದ್ದಿದ್ದು, ಅದನ್ನು ಆರಿಸಲು ಅಥವಾ ಹತ್ತಿರದ ದೇವಸ್ಥಾನವೊಂದಕ್ಕೆ ಹೋಗಿ ಬರುತ್ತಿದ್ದಾಗ, ಅಥವಾ ಅದಾವುದೋ ಕಾರಣಕ್ಕೆ ಪಕ್ಕದ ಜಮೀನಿಗೆ ಹೋದವನು ಬೆಂಕಿಯಲ್ಲಿ ಸಿಕ್ಕಿ ಹಾಕಿಕೊಂಡು ಸುಟ್ಟು ಮೃತಪಟಿದ್ದು, ಈ ಕುರಿತು ಮೃತನ ಹೆಂಡತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪಿ. ಎ ಸೈ ಮಹಾಂತೇಶ ವಾಲ್ಮೀಕಿ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದರು. ಬೆರಡೆ ಗ್ರಾಮದ ಬಹುತೇಕ ಪ್ರದೇಶ ನೌಕಾನೆಲೆ (ಸೀಬರ್ಡ್ ) ವ್ಯಾಪ್ತಿಯಲ್ಲಿ ಬರುತ್ತಿದ್ದು ಇಲ್ಲಿ ಹೋಗಿ ಬರಲು ರಸ್ತೆ ಸಂಪರ್ಕ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು ,ರೈತ ಕೂಲಿಕಾರರು, ಮಹಿಳೆಯರು ಅತೀವ ಸಂಕಟ ಪಡುತ್ತಿರುವ ನಡುವೆಯೇ, ಮೃತ ದೇಹವನ್ನು ಕಾಲು ದಾರಿಯಲ್ಲಿ ಸುಮಾರು 1 ಕಿ.ಮೀ. ದೂರದ ವರೆಗೆ ನಾಲ್ಕಾರು ಜನ ಭುಜದ ಮೇಲೆ ಹೊತ್ತು ತಂದು ಬಾಳೆಗುಳಿ ಬಳಿಯ  ರಾ.ಹೆ. ವರೆಗೆ ಸಾಗಿಸಿ ಬಳಿಕ  ರಕ್ಷಕ ವಾಹನದ ಮೇಲೆ ಸಾಮಾಣಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ನೆರವಿ ನೊಂದಿಗೆ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು.

ಲೋಕೇಶ ಗಾಂವಕರ ಇವರಿಂದ ಸುದ್ದಿ ಕೇಳಿ ತಿಳಿದ  ಮಾಜಿ ಶಾಸಕ ಸತೀಶ್ ಸೈಲ್ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ  ಘಟನೆ ಕುರಿತು ಅತೀವ ಬೇಸರ ವ್ಯಕ್ತಪಡಿಸಿ , ತೀವೃ ಸಂತಾಪ  ಸೂಚಿಸುವುದರೊಂದಿಗೆ, ನೊಂದ ಬಡ ರೈತ ಕುಟುಂಬಕ್ಕೆ ಸರ್ಕಾರ ಯೋಗ್ಯ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಬಳಲೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಮತ್ತೊಂದು ಬೆಂಕಿ ಅವಘಡದಲ್ಲಿ ಗುತ್ತಿಗೆದಾರರೊಬ್ಬರಿಗೆ ಸಂಬಂಧಿಸಿದ  ಕಟ್ಟಡದೊಳಗೆ  ಆಕಸ್ಮಿಕ ಬೆಂಕಿ ಕಾಣಿಸಿಕೊಂಡು  ಲಕ್ಷಾಂತರ ರೂಪಾಯಿ ಮೌಲ್ಯದ  ಹಾನಿ ಅಂದಾಜಿಸಲಾಗಿದೆ. ಈ  ಎರಡು ಬೆಂಕಿ ಅವಘಡದ   ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version