ಪಂಚರ್ ತೆಗೆಯುತ್ತಿದ್ದ ವೇಳೆ ದುರ್ಮರಣ ಹೊಂದಿದ ಕ್ಲೀನರ್ : ಆಸ್ಪತ್ರೆ ಸೇರಿದ ಓನರ್: ಹಿಟ್ ಎಂಡ್ ರನ್ ಕೇಸ್ ದಾಖಲು ?
ಅಂಕೋಲಾ: ರಾ.ಹೆ. 63 ರ ಯಲ್ಲಾಪುರ ಅಂಕೋಲಾ ಮಾರ್ಗಮಧ್ಯೆ ಸುಂಕಸಾಳ ( ವಜ್ರಳ್ಳಿ. ಕಳಸದಮಕ್ಕಿ ) ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಒಂದರಲ್ಲಿ ಲಾರಿ ಕ್ಲೀನರ್ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಲಾರಿ ಮಾಲಕ ಕಾಲಿಗೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡುರಾತ್ರಿ 1.30 ರ ಸುಮಾರಿಗೆ ನಡೆದಿದೆ. ಹಾವೇರಿ ರಾಣೇಬೆನ್ನೂರು ಮೂಲದ ಬಸವರಾಜ (22 ) ಮೃತ ದುರ್ದೈವಿಯಾಗಿದ್ದಾನೆ.
ಹಾವೇರಿಯಿಂದ ಸಿಮೆಂಟ್ ಶೀಟ್ ಗಳನ್ನು ಗೋವಾ ಕಡೆ ಸಾಗಿಸುತ್ತಿದ್ದ ಲಾರಿ (kA 38 – 9371 ), ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಕಡೆ ಬರುತ್ತಿದ್ದಾಗ ದಾರಿ ಮಧ್ಯೆ ಲಾರಿಯ ಟೈಯರ್ ಪಂಚರ್ ಆಗಿದೆ. ಈ ವೇಳೆ ತಮ್ಮ ವಾಹನವನ್ನು ರಸ್ತೆಯಂಚಿಗೆ ನಿಲ್ಲಿಸಿ, ದುರಸ್ಥಿ ಕಾರ್ಯ ನಡೆಸುತ್ತಿದ್ದಾಗ, ಜೋರಾಗಿ ಬಂದ ಇನ್ನೊಂದು ಟ್ಯಾಂಕರ್ ಲಾರಿಯ ಚಕ್ರಗಳು ರಸ್ತೆಯಂಚಿನಲ್ಲಿ ಫಂಕ್ಚರ್ ತೆಗೆಯುತ್ತಿದ್ದ ಲಾರಿ ಕ್ಲೀನರ್ ಬಸವರಾಜ ಈತನ ಮೇಲೆ ಹಾದು ಹೋಗಿದೆ ಎನ್ನಲಾಗಿದ್ದು, ಅದರ ಪರಿಣಾಮ ಗಂಭೀರ ಗಾಯಗೊಂಡು ಆತ ಸ್ಥಳದಲ್ಲಿಯೇ ಮೃತಪಟ್ಟರೆ, ಪಕ್ಕದಲ್ಲಿಯೆ ಇದ್ದ ಲಾರಿ ಮಾಲಕ ಲಿಂಗರಾಜ್ ಈತನಿಗೂ ಟ್ಯಾಂಕರ್ ಲಾರಿ ಬಡಿದ ಪರಿಣಾಮ ಆತನ ಎಡ ಕಾಲಿಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಿಸುವಂತಾಗಿದೆ.
ಅಪಘಾತ ಪಡಿಸಿದ ಟ್ಯಾಂಕರ್ ಲಾರಿ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ. ಹೆದ್ದಾರಿಗಸ್ತು ವಾಹನ ಹಾಗೂ, ಸುಂಕಸಾಳ ಓಪಿ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಿದರು. ರಾಮನಗಳಿ ಪಿ.ಎಚ ಸಿ ಅಂಬುಲೆನ್ಸ್ ವಾಹನದ ಮೂಲಕ ಗಾಯಾಳುವನ್ನು ಅಂಕೋಲಾ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಸಿಗದ್ದೆಯ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಮತ್ತಿತರರು ಬಸವರಾಜನ ಮೃತ ದೇಹವನ್ನು ಶವಾಗಾರಕ್ಕೆ ಸಾಗಿಸಲು ಸಹಕರಿಸಿರು.
ಹಿಟ್ ಎಂಡ್ ರನ್ ಕೇಸ್ ದಾಖಲಾಗುವ ಸಾಧ್ಯತೆ ಇದ್ದು , ಸಿಪಿಐ ರಾಬರ್ಟ್ ಡಿಸೋಜಾ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡಿದ್ದು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ