Focus NewsImportant
Trending

ಕರ್ತವ್ಯ ನಿರತ ಶಿಕ್ಷಕ ಮತ್ತು ನಿವೃತ್ತ ಶಿಕ್ಷಕ ಇವರ ನಡುವೆ ಮಾರಾ -ಮಾರಿ? ಪೊಲೀಸ್ ಠಾಣೆಯಲ್ಲಿ ದಾಖಲಾಯಿತು ದೂರು ಪ್ರತಿ ದೂರು

ಅಂಕೋಲಾ: ರಾ.ಹೆ ಅಂಚಿಗಿರುವ ಗ್ರಾಮೀಣ ಭಾಗದ ಸರಕಾರಿ ಶಾಲೆಯೊಂದರ ಕರ್ತವ್ಯ ನಿರತ ಶಿಕ್ಷಕ ಮತ್ತು ಅದೇ ಶಾಲೆಯ ಹತ್ತಿರದ ನಿವಾಸಿಯಾದ ನಿವೃತ್ತ ಶಿಕ್ಷಕ ಇವರೀರ್ವರ ನಡುವೆ ಪರಸ್ಪರ ಜಗಳ, ಹೊಡೆದಾಟ,ಹಲ್ಲೆ ಪ್ರಕರಣ ನಡೆದು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು  ದಾಖಲಾದ ಘಟನೆ ಎಪ್ರಿಲ್ 1 ರ ಶನಿವಾರ ನಡೆದಿದೆ.

ರಾ.ಹೆ 66 ರ ಅಂಕೋಲಾ – ಕುಮಟಾ ಮಾರ್ಗಮಧ್ಯೆ ಅಂಕೋಲಾ ತಾಲೂಕಿನ ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳೆ ಪ್ರಾಥಮಿಕ ಶಾಲೆಯ ಶಿಕ್ಷಕ ಶೆಟಗೇರಿ ಕ್ರಾಸ್ ಬಳಿಯ ನಿವಾಸಿ ಜಗದೀಶ ಗಣಪತಿ ನಾಯಕ (54) ಹೊಸ್ಕೇರಿ ಅವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿ ತಾವು ಶಾಲೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ, ಶಾಲೆಯ ಸಮೀಪದ ನಿವಾಸಿ ನಿವೃತ್ತ ಶಿಕ್ಷಕ ಸುಬ್ರಾಯ ಮೋನಪ್ಪ ನಾಯಕ (70) ಅವರು ಶಾಲೆಯ ಗೇಟಿನ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದಾಗ,ಹಿರಿಯರಾದ ತಾವು ಸಕಾರಣವಿಲ್ಲದೇ ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿದರೂ ಕೇಳದ  ಸುಬ್ರಾಯ ನಾಯಕ, ಪಕ್ಕದಲ್ಲಿ ಬಿದ್ದಿದ್ದ ಕಲ್ಲಿನಿಂದ ನನ್ನ ತಲೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ.         

ಬೋಳೆ ನಿವಾಸಿ ನಿವೃತ್ತ ಶಿಕ್ಷಕ ಸುಬ್ರಾಯ ಮೋನಪ್ಪ ನಾಯಕ  (70) ಪ್ರತ್ಯೇಕ  ದೂರು ದಾಖಲಿಸಿ,ಆಪಾದಿತ ಶಿಕ್ಷಕ ಜಗದೀಶ ನಾಯಕ ತಮ್ಮ ಮನೆಯ ಗೇಟಿನ ಒಳಗೆ ಬಂದು ನನ್ನ ಬಗ್ಗೆ ಅಧಿಕಾರಿಗಳಿಗೆ ತಳ್ಳಿ ಅರ್ಜಿ ಬರೆಯುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬಯ್ದು ಕತ್ತಿಯನ್ನು ಬೀಸಿದ್ದು ಅದು ತಪ್ಪಿ ಹೋದಾಗ, ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ಹೊಡೆದು, ದೂಡಿ ಹಾಕಿ ಚಪ್ಪಲಿ ಕಾಲಿನಿಂದ ಒದ್ದು ಕೊಲೆ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದು,ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರಣಗಳು ಅದೇನೆ ಇದ್ದರೂ ಜಗಳ – ಹೊಡೆದಾಟ – ಹಲ್ಲೆ ವರೆಗೆ ಇದು ಮುಂದುವರಿಯಬಾರದಿತ್ತು ಎಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಂತಿದೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button