Focus NewsImportant
Trending

ತಮ್ಮನ ಹೆಂಡತಿ ಮತ್ತು ಆಕೆಯ ಮಗನನ್ನೇ ಗುಂಡಿಕ್ಕಿ ಕೊಲೆ ಮಾಡಿದ್ದ ಆರೋಪ ಸಾಬೀತು:ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಂಕೋಲಾ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಈ ಹಿಂದಿನ ಅವಳಿ ಕೊಲೆ ಪ್ರಕರಣವೊಂದರಲ್ಲಿ ಓರ್ವ ಗೃಹಿಣಿ ಮತ್ತು ಅವಳ ಮಗನನ್ನು ಗುಂಡಿಟ್ಟು ಹತ್ಯೆಗೈದ ಆರೋಪಿಗೆ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

2019ರ ಜುಲೈ 27 ರಂದು ಅಂಕೋಲಾದ ಮಠಾಕೇರಿಯ ಮನೆಯೊಂದರಲ್ಲಿ ಸಾಯಂಕಾಲ 7.10 ರ ಸುಮಾರಿಗೆ ಗುಂಡಿನ ದಾಳಿಯ ಸದ್ದು ಕೇಳಿ ಬಂದಿದ್ದು,ಆರೋಪಿತ ಸುಬ್ರಾಯ ಯಾನೆ ಅಜಯ ಅಚ್ಯುತ್ ಪ್ರಭು ಎಂಬಾತ ಪಿತ್ರಾರ್ಜಿತ ಆಸ್ತಿ ಪಾಲಿನ ವಿಷಯದಲ್ಲಿ ಈ ಮೊದಲಿನಿಂದಲೂ ದ್ವೇಷದಿಂದ ಇದ್ದವನು ತನ್ನ ತಮ್ಮ ಅಮಿತ ಪ್ರಭುವಿನ ಹೆಂಡತಿ ಮೇಧಾ ಅಮಿತ್ ಪ್ರಭು (30) ಎಂಬಾಕೆಯ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ತಾಯಿಯ ಬಳಿ ಪಾಠ ಕೇಳುತ್ತಿದ್ದ 9 ವರ್ಷದ ಪುಟ್ಟ ಬಾಲಕ ಅನುಜನಿಗೂ ಗುಂಡು ತಗುಲಿ ಆತನ ಪ್ರಾಣ ಪಕ್ಷಿ ಹಾರಿ ಹೋದ ಹೃದಯ ವಿದ್ರಾವಕ ಘಟನೆ ನಡೆದಿತ್ತು.

ಗುಂಡೇಟಿನಿಂದ ತೀವ್ರ ಗಾಯಾಳುವಾಗಿದ್ದ ತಾಯಿ ಮೇಧಾ ಪ್ರಭು ಇವಳನ್ನು ಅಂಕೋಲಾದ ಖಾಸಗಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸಾಗಿಸುವಾಗ ದಾರಿ ಮಧ್ಯೆಯೇ ಕೊನೆ ಉಸಿರೆಳೆದಿದ್ದಳು. ಈ ಮೂಲಕ ತಾಯಿ ಹಾಗೂ ಮಗ ಪಾತಕಿಯ ಗುಂಡೇಟಿಗೆ ಬಲಿಯಾಗುವಂತಾಗಿತ್ತು
ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸಾಕ್ಷಾಧಾರಗಳ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿತ ಅಜಯ ಪ್ರಭು ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಎಪ್ರಿಲ್ 24, ಎ. 27 ರ ಬಳಿಕ
ಇದೀಗ ಎಪ್ರಿಲ್ 29 ರಂದು ಆರೋಪಿತನಿಗೆ ಜಿಲ್ಲಾ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅವರು ಭಾರತೀಯ ದಂಡ ಸಂಹಿತೆ ಕಲಂ 449,450,302 ಮತ್ತು ಶಸ್ತ್ರಾಸ್ತ್ರ ಕಾಯ್ದೆ ಕಲಂ 3 ಮತ್ತು 25 ನೇದರಲ್ಲಿ ತಪಿತಸ್ಥ ಎಂದು ಘೋಷಿಸಿದೆ. ಇದರ ಪ್ರಕಾರ ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ದಂಡ ವಿಧಿಸಿದ್ದಾರೆ.

ದಂಡ ಕಟ್ಟಲು ತಪ್ಪಿದರೆ ಮೂರು ವರ್ಷಗಳ ಕಠಿಣ ಕಾರಾಗೃಹ ಸಜೆ ಭಾರತೀಯ ದಂಡ ಸಂಹಿತೆ 449 ರ ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಸಜೆ ಮತ್ತು 40 ಸಾವಿರ ದಂಡ ವಿಧಿಸಲಾಗಿದ್ದು ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಕಠಿಣ ಸಜೆ
ಭಾರತೀಯ ದಂಡ ಸಂಹಿತೆ 450 ರ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆ ಮತ್ತು 40 ಸಾವಿರ ದಂಡ ವಿಧಿಸಲಾಗಿದ್ದು ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಕಠಿಣ ಜೈಲು ಶಿಕ್ಷೆ ಹಾಗೂ ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ 3 ವರ್ಷಗಳ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದ್ದು ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳುಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ಆದೇಶಿಸಲಾಗಿದೆ.

ಸರ್ಕಾರದ ಪರ ಸರ್ಕಾರಿ ಅಭಿಯೋಜಕ ರಾಜೇಶ ಎಂ.ಮಳಗೀಕರ ವಾದಿಸಿದ್ದರು. ಎ.ಪಿ ಪಿ ತನುಜಾ ಹೊಸ ಪಟ್ಟಣ ಕರ್ತವ್ಯ ನಿರ್ವಹಿಸಿದ್ದರು. ಅಂಕೋಲಾ ಪೋಲೀಸ ಠಾಣೆಯ ಅಂದಿನ ಸಿಪಿಐ ಪ್ರಮೋದ ಕುಮಾರ. ಬಿ ಪ್ರಕರಣದ ತನಿಖೆ ಕೈಗೊಂಡಿದ್ದರು.ಸಹಾಯಕರಾಗಿ ಹೆಡ್ ಕಾನ್ಸ್ಟೇಬಲ್ ಪರಮೇಶ, ಅಭಿಯೋಜಕರಿಗೆ ಸಹಾಯಕರಾಗಿ ಅಂಕೋಲಾ ಠಾಣೆಯ ಎಎಸ್ ಐ ಮಹಾಬಲೇಶ್ವರ ಗಡೇರ ಕರ್ತವ್ಯ ನಿರ್ವಹಿಸಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button