Focus NewsImportant
Trending

ನಾಗರಿಕ ವಿಮಾನ ನಿಲ್ದಾಣ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಸರ್ವೇ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಗಳ ತಂಡಕ್ಕೆ ಸ್ಥಳೀಯರಿಂದ ಪ್ರತಿರೋಧ

ಅಂಕೋಲಾ: ಅಲಗೇರಿ ನಾಗರಿಕ ವಿಮಾನ ನಿಲ್ದಾಣ ಯೋಜನೆಗೆ ನಿಗದಿ ಪಡಿಸಿದ ಹೆಚ್ಚುವರಿ ಭೂ ಸ್ವಾಧೀನ ಪ್ರಕ್ರಿಯೆ ಸರ್ವೇ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಗಳ ತಂಡಕ್ಕೆ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾದ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ಯೋಜನೆಗೆ ಈಗಾಗಲೇ ಸುಮಾರು 87 ಎಕರೆ 18 ಗುಂಟೆಗಳಷ್ಟು ಜಮೀನು ಗುರುತಿಸಿ ಸರ್ವೆ ನಡೆಸಲಾಗಿದ್ದು, ನೋಟಿಫಿಕೇಶನ್, ಮತ್ತಿತರ ಕಾರ್ಯ ಪ್ರಗತಿಯಲ್ಲಿದ್ದು ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದೆ.

ಈ ನಡುವೆ ಹೆಚ್ಚುವರಿಯಾಗಿ ಮತ್ತೆ ಸುಮಾರು 6 ಎಕರೆ ಎಂಟು ಗುಂಟೆ ಜಮೀನಿನ ಭೂ ಸ್ವಾಧೀನ ಪಡಿಸಿಕೊಳ್ಳುವ ದೃಷ್ಟಿಯಿಂದ ಕುಮಟಾ ಸಹಾಯಕ ಆಯುಕ್ತರ ಕಚೇರಿಯಿಂದ ಭೂ ಸ್ವಾಧೀನ ಅಧಿಕಾರಿಗಳು, ಅಂಕೋಲಾ ತಾಲೂಕಿನ ಸರ್ವೇ ಅಧಿಕಾರಿಗಳು,ಕಂದಾಯ ಅಧಿಕಾರಿಗಳು ಹಾಗೂ ಸಂಬಂಧಿತ ಸಿಬ್ಬಂದಿಗಳನ್ನೊಳಗೊಂಡ ತಂಡ ಸರ್ವೆ ಕಾರ್ಯಕ್ಕಾಗಿ ಮೇ 29 ರ ಸೋಮವಾರ ಬೆಳಿಗ್ಗೆ ಆಗಮಿಸಿದ್ದರು.

ಇದೇ ವೇಳೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸ್ಥಳೀಯರು, ಏಕಾ ಏಕಿ ನಮ್ಮ ಮಾಲ್ಕಿ ಹಕ್ಕಿನ ಜಾಗಗಗಳಲ್ಲಿ ಸರ್ವೆ ಕಾರ್ಯ ನಡೆಸ ಬಾರದು. ಈಗಾಗಲೇ ನಾನಾ ಯೋಜನೆಗಳಿಂದ ನಿರಾಶ್ರಿತರಾದವರಿಗೆ ಎಲ್ಲರಿಗೂ ಯೋಗ್ಯ ಪರಿಹಾರ ದೊರೆತಿಲ್ಲ. ಉದ್ದೇಶಿತ ವಿಮಾನ ಯಾನ ಯೋಜನೆಗೊ ಸ್ಥಳೀಯರೇನಕರ ವಿರೋಧದ ನಡುವೆಯೂ ಯೋಜನೆ ಜಾರಿಗೆ ಮುಂದಾಗಲಾಗಿದೆ. ಇಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ನೀಡುವ ಪರಿಹಾರದ ಕುರಿತು ಆಳುವ ಜನಪ್ರತಿನಿಧಿಗಳು ಮತ್ತು ಅಧಿಕಾರವರ್ಗ ಈ ವರೆಗೂ ನಮಗೆ ಸ್ಪಷ್ಟ ಮಾಹಿತಿ ನೀಡದೇ ಹಾರಿಕೆಯ ಸಾಂತ್ವನ ನೀಡುತ್ತಿದ್ದಾರೆ.

ಆದ್ದರಿಂದ ಸಂಬಂಧಿತ ಹಿರಿಯ ಅಧಿಕಾರಿಗಳು ಇಲ್ಲಿ ಬಂದು ನಮಗೆ ಮನವರಿಕೆ ಮಾಡಿಕೊಡಲಿ ಅಲ್ಲಿ ವರೆಗೂ ಯಾವುದೇ ಹೊಸ ಸರ್ವೆ ಕಾರ್ಯ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಹಿಂದೆ ಸಭೆ ನಡೆಸಿದ್ದಾಗ ಸ್ಥಳೀಯರು ಇಟ್ಟಿದ್ದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯೂ
ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಜಮೀನಿಗೆ ಕಾಲಿಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಿಸುಮಾರು ಮಧ್ಯಾಹ್ನದ ಹೊತ್ತಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಬಿಟ್ಟು ವಾಪಸ್ ತೆರಳಿದರು.ಮತ್ತೆ ಊಟದ ಬಳಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬರುತ್ತಿದ್ದಂತೆ ಸ್ಥಳೀಯ ಕೆಲ ಮಹಿಳೆಯರು , ರೈತರು, ಪ್ರಮುಖರು ಸರ್ವೆ ಕಾರ್ಯ ನಡೆಸಿದಂತೆ ಆಗ್ರಹಿಸಿ ಸ್ಥಳದಲ್ಲಿಯೇ ಧರಣಿ ಕುಳಿತರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರ ಮದ್ಯೆ ಬಿಸಿಯೇರಿದ ಮಾತುಕತೆ ನಡೆಯಿತು. ನಂತರ ವಾತಾವರಣ ತಿಳಿದುಕೊಂಡು ತಾತ್ಕಾಲಿಕವಾಗಿ ಸರ್ವೆ ಕಾರ್ಯ ಕೈ ಬಿಟ್ಟ ತಹಶೀಲ್ದಾರ ಪ್ರವೀಣ ಎಚ್ ಮತ್ತಿತರ ಅಧಿಕಾರಿಗಳಿದ್ದ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯರನ್ನು ಸಮಾಧಾನಪಡಿಸಿ ವಾಪಸಾಯಿತು.

ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜ, ಪಿ.ಎಸ್. ಐಗಳಾದ ಕುಮಾರ ಕಾಂಬಳೆ, ಮಹಾಂತೇಶ ವಾಲ್ಮೀಕಿ, ಗೀತಾ ಶಿರ್ಶಿಕರ ಮತ್ತು ಅಂಕೋಲಾ ಠಾಣಾ ಸಿಬ್ಬಂದಿಗಳು ಮತ್ತು ಹೆಚ್ಚುವರಿ ಪೋಲೀಸ್ ತುಕಡಿ ಸ್ಥಳದಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಿದರು . ಉದ್ದೇಶಿತ ಅಲಗೇರಿ ವಿಮಾನಯಾನ ಯೋಜನೆಗೆ ಸಂಬಂಧಿಸಿದಂತೆ ಭೂಮಿ, ಆಸ್ತಿ ಪಾಸ್ತಿ – ಮನೆ ಕಳೆದುಕೊಳ್ಳಲಿರುವ ಆತಂಕದಲ್ಲಿರುವ ಅಲಗೇರಿ, ಭಾವಿಕೇರಿ, ಬೆಲೇಕೇರಿ ವ್ಯಾಪ್ತಿಯ ನೊಂದ ಕುಟುಂಬಗಳಿಗೆ ಸರ್ಕಾರ ಯೋಗ್ಯ ಪರಿಹಾರ ನೀಡಬೇಕು , ಮತ್ತು ಪರಿಶಿಷ್ಠ ರೂ ಸೇರಿ ಇತರರ ಪುನರ್ವಸತಿಗೂ ಹೆಚ್ಚಿನ ಆದ್ಯತೆ ನೀಡಿ, ನಂತರ ವಿಮಾನ ಯಾನ ಯೋಜನೆ ಜಾರಿಗೊಳಿಸಿ ಬದ್ಧತೆ ತೋರಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button