Focus NewsImportant
Trending

ದಾರಿಯಲ್ಲಿ ಸಿಕ್ಕಿದ ಪರ್ಸ್ ನಲ್ಲಿದ್ದ ಮಾಂಗಲ್ಯ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಅಟೋ ಚಾಲಕ

ಅಂಕೋಲಾ: ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಿಕ್ಕಿದ್ದ ಮಾಂಗಲ್ಯ ಸರ ಇದ್ದ ಪರ್ಸನ್ನು, ಮರಳಿ  ವಾರಸುದಾರರಿಗೆ ತಲುಪಿಸುವ ಮೂಲಕ ಆಟೋ ಚಾಲಕನೋರ್ವ   ಪ್ರಾಮಾಣಿಕತೆ ಮೆರೆದಿದ್ದಾರೆ. ತಾಲೂಕಿನ ಕೇಣಿ ನಿವಾಸಿ ಸುನೀಲ ಗಣಪತಿ ಬಂಟ್ ಎನ್ನುವವರೇ ಪ್ರಾಮಾಣಿಕತೆ ಮೆರೆದ ವ್ಯಕ್ತಿ ಯಾಗಿದ್ದಾನೆ.

ಪಿ.ಎಂ.ಹೈಸ್ಕೂಲ್ ಹತ್ತಿರ ಮಂಜಗುಣಿ ಮುಖ್ಯರಸ್ತೆಯಲ್ಲಿ ತನ್ನ ಪುಟ್ಟ ಮಗುವಿನೊಂದಿಗೆ ಮನೆಯವರ  ಬೈಕ್ ಹಿಂಬದಿ ಕುಳಿತು  ಸಾಗುತ್ತಿರಬೇಕಾದರೆ ಬಾಸಗೋಡ – ಕೋಗ್ರೆ ಗ್ರಾಮದ ಮಹಿಳೆಗೆ ಅರಿವಿಲ್ಲದೇ ಅವಳ  ಪರ್ಸ್  ರಸ್ತೆಯಲ್ಲಿ ಬಿದ್ದು ಹೋಗಿದ್ದು, ಅವಳು ತುಂಡಾದ ತನ್ನ ಮಾಂಗಲ್ಯ ಸರ ಸರಿಪಡಿಸಿಕೊಳ್ಳಲು ಪಟ್ಟಣದ ಮಾರುಕಟ್ಟೆಯ ಚಿನ್ನದ ವ್ಯಾಪಾರಸ್ಥರ ಅಂಗಡಿ ಬಳಿ ಬಂದು ತಲುಪಿದಾಗ, ತನ್ನ ಪರ್ಸ ಎಲ್ಲಿಯೋ ಬಿದ್ದು ಹೋಗಿರುವುದು ಗಮನಕ್ಕೆ ಬಂದಿದ್ದು, ಅದೇ ರಸ್ತೆಯಲ್ಲಿ  ಹೋಗಿ ಹುಡುಕಾಡಿದರೂ ಪರ್ಸ್ ಸಿಗದಿದ್ದಾಗ, ನಿರಾಶೆ ಹಾಗೂ  ದುಃಖಭರಿತರಾಗಿದ್ದಾರೆ. ಈ ನಡುವೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಸುನೀಲ ಬಂಟ, ದಾರಿಯಲ್ಲಿ ಪರ್ಸ ಬಿದ್ದಿರುವುದನ್ನು ಕಂಡು, ಪರ್ಸ್ ಕೈಗೆತ್ತಿಕೊಂಡಿದ್ದಾರೆ. 

ಪರ್ಸ್ ಒಳಗಡೆ ಇರುವ ಬ್ಯಾಂಕ್ ರಶೀದಿ ಆಧಾರದ ಮೇಲೆ ಬ್ಯಾಂಕಿನವರನ್ನು ಸಂಪರ್ಕಿಸಿ, ಅವರ ಮೂಲಕ  ಪರ್ಸ್ ಕಳೆದು ಕೊಂಡವರ ಕುಟುಂಬ ವರ್ಗದವರ ಮೊಬೈಲ್ ನಂಬರ ಪಡೆದುಕೊಂಡು ವಿಷಯ ಮುಟ್ಟಿಸಿದ್ದಾರೆ. ನಂತರ ಅಂಕೋಲಾ ಪೋಲೀಸ್ ಠಾಣೆಗೆ ಬಂದು ಪಿಎಸ್ಐ ಗೀತಾ ಶಿರ್ಶಿಕರ ಅವರ ಸಮ್ಮುಖದಲ್ಲಿ, ಪರ್ಸ ಕಳೆದುಕೊಂಡವರನ್ನು ಕರೆಯಿಸಿ, ಪರ್ಸ ಒಳಗಡೆ ಇರುವ ಬೆಲೆಬಾಳುವ ಬಂಗಾರದ ಆಭರಣ , ಇತರೆ ಕಾಗದ ಪತ್ರಗಳನ್ನು ವಾರಸುದಾರರಿಗೆ  ಹಿಂತಿರುಗಿಸಿದ್ದಾರೆ.

ಈ ವೇಳೆ ಬಡ ಕುಟುಂಬದ ಹೆಣ್ಣು ಮಗಳು , ತನ್ನ ಪರ್ಸ ಮರಳಿಸಿ ಪ್ರಾಮಾಣಿಕತೆ ಮೆರೆದ ಸುನೀಲ ಬಂಟ್, ಹಾಗೂ ಸಹಕರಿಸಿದ ಇತರರಿಗೆ ಮನಪೂರ್ವಕ ಕೃತಜ್ಞತೆ ಸಲ್ಲಿಸಿ ಧನ್ಯತಾ ಭಾವ ವ್ಯಕ್ತಪಡಿಸಿದರು. ಆಟೋ ಚಾಲಕನ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.

ವಿಸ್ಮಯ ನ್ಯೂಸ್ ವಿಲಾಸ  ನಾಯಕ ಅಂಕೋಲಾ

Back to top button