ಅಂಕೋಲಾ: ಟಾಟಾ ಏಸ್ ಗೂಡ್ಸ್ ರಿಕ್ಷಾ ವಾಹನದ ಹಿಂಬದಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ರಿಕ್ಷಾದಲ್ಲಿದ್ದ ಕೆಲ ಪ್ರಮಾಣದ ಔಷಧ ಮತ್ತಿತರ ಸಾಮಾಗ್ರಿಗಳು ಸುಟ್ಟು ಕರಕಲಾದ ಘಟನೆ ಅಂಕೋಲಾದಲ್ಲಿ ಸಂಭವಿಸಿದೆ. ಪಶುವೈದ್ಯಕೀಯ ಆಸ್ಪತ್ರೆಗೆ ಸಂಬಂಧಿಸಿದ ಔಷಧ ಮತ್ತಿತರ ಸಾಮಗ್ರಿಗಳನ್ನು ಕಾರವಾರದಿಂದ ಹೊನ್ನಾವರ ಕಡೆ ಸಾಗಿಸುತ್ತಿದ್ದಾಗ ದಾರಿಮಧ್ಯೆ ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾ.ಹೆ. 66 ರಲ್ಲಿ ಈ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.
ಅದಾವುದೇ ಕಾರಣದಿಂದ ಗೂಡ್ಸ್ ರಿಕ್ಷಾದ ಹಿಂಬದಿಯಲ್ಲಿದ್ದ ಕೆಮಿಕಲ್ ರಿಯಾಕ್ಷನ್ ಇಲ್ಲವೇ ಇನ್ನಿತರೇ ಕಾರಣಗಳಿಂದ ಮೆಡಿಸಿನ್ ಬಾಕ್ಸ್, ಕಾಟನ್ ಮತ್ತಿತರ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಬಳಸುವ ಔಷಧ ಹಾಗೂ ಉಪಚಾರ ಸಾಮಗ್ರಿಗಳಿಗೆ ಬೆಂಕಿ ಹೊತ್ತಿ ಉರಿದಿರುವ ಸಾಧ್ಯತೆ ಕೇಳಿ ಬಂದಿದ್ದು ಬೆಂಕಿ ಅವಘಡ ಹಾಗೂ ಹಾನಿ ಅಂದಾಜಿನ ಕುರಿತು ಹೆಚ್ಚಿನ ಹಾಗೂ ನಿಖರ ಮಾಹಿತಿ ತಿಳಿದು ಬರಬೇಕಿದೆ.ವಿಷಯ ತಿಳಿದ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿ,ವಾಹನದಲ್ಲಿದ್ದ ಇತರೆ ಬಾಕ್ಸ್ ಗಳನ್ನು ಕೆಳಗಿಳಿಸಿ ಸಂಭವನೀಯ ಹೆಚ್ಚಿನ ಹಾನಿ ತಪ್ಪಿಸಿದರು.
ಸ್ಥಳೀಯ ಹೋಟೆಲ್ ಮಾಲಕ , ಹಾಗೂ ಇತರರು ಸಹಕರಿಸಿದರು.ಅಂಕೋಲಾ ಪಶು ವೈದ್ಯಕೀಯ ಆಸ್ಪತ್ರೆಯ ಎದುರುಗಡೆ ಹೆದ್ದಾರಿಯಲ್ಲಿ ಈ ಬೆಂಕಿ ಅವಘಡ ಸಂಬಂಧಿಸಿದ್ದು, ಸುದ್ದಿ ತಿಳಿದ ಅಲ್ಲಿನ ಹಾಗೂ ಹೊನ್ನಾವರದ ಸಂಬಂಧಿತ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ..
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ