ಕುಮಟಾ: ಹೋಟೆಲ್ ಕಾರ್ಮಿಕನೋರ್ವನ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾದ ಆರೋಪಿಯನ್ನು ಕೇವಲ 24 ಗಂಟೆಯೊಳಗಾಗಿ ಪೊಲೀಸರು ಬಂಧಿಸಿರುವ ಘಟನೆ ಕುಮಟಾದಲ್ಲಿ ನಡೆದಿದೆ. ಕುಮಟಾದ ಹೊಟೇಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಮಟಾದ ಹೆಗಡೆಯ ಕೃಷ್ಣ ಶೆಟ್ಟಿ ಎನ್ನುವವರು ನಿತ್ಯದ ತಮ್ಮ ಕೆಲಸ ಮುಗಿಸಿ ಹೊಟೆಲ್‌ನಲ್ಲಿ ಮಲಗಿದ್ದ ವೇಳೆ ಹಣ ಹಾಗೂ ಮೊಬೈಲ್‌ನ ಆಸೆಗೆ ಸೋಡಾ ಬಾಟಲಿಯಿಂದ ಕೃಷ್ಣ ಶೆಟ್ಟಿ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಆರೋಪಿಯು ತೀರ್ಥಹಳ್ಳಿಯ ಸುಬ್ರಹ್ಮಣ್ಯ ಎಂದು ತಿಳಿದು ಬಂದಿದ್ದು, ಈತನು ಸಹ ಕಳೆದ 4 ದಿನಗಳ ಹಿಂದಷ್ಟೆ ಅದೇ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಮೊಬೈಲ್ ಹಾಗೂ ಹಣದ ಮೇಲೆ ಗುರಿ ಇಟ್ಟಿದ್ದ ಆಸಾಮಿ ಸಸರಿಯಾದ ಸಮಯ ನೋಡಿ ಮಲಗಿದ್ದ ವೇಳೆ ಮೊಬೈಲ್ ಹಾಗೂ ಹಣ ದೋಚಿ ಕಣ್ಮರೆಯಾಗಿದ್ದ.
ಈ ಕುರಿತಾಗಿ ಹಲ್ಲೆಗೊಳಗಾದ ಕೃಷ್ಣ ಶೆಟ್ಟಿ ಅವರು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೀಘ್ರವೇ ತನಿಖೆ ಕಾರ್ಯ ಚುರುಕುಗೊಳಿಸಿ ಕುಂದಾಪುರದಲ್ಲಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಕಾರವಾರ ಎಸ್.ಪಿ. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ ಜಯಕುಮಾರ ಮತ್ತು ಭಟ್ಕಳ ಡಿ.ವೈ.ಎಸ್.ಪಿ ಶ್ರೀಕಾಂತ ಮಾರ್ಗದರ್ಶನದಲ್ಲಿ ಕುಮಟಾ ಸಿ.ಪಿ.ಐ ತಿಮ್ಮಪ್ಪ ನೇತೃತ್ವದಲ್ಲಿ, ಪಿ.ಎಸ್.ಐ ನವೀನ್ ನಾಯ್ಕ ಹಾಗೂ ಪದ್ಮಾ ದೇವಳಿ ಅವರ ತಂಡ ಆರೋಪಿಯನ್ನು ಪತ್ತೆಹಚ್ಚುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ್, ಕುಮಟಾ