Big News
Trending

ಲಕ್ಷ ವೃಕ್ಷ ಆಂದೋಲನ: ಗಿಡನೆಟ್ಟು ಸಾಂಕೇತಿಕ ಚಾಲನೆ: ವೃಕ್ಷಮಾತೆ ಪದ್ಮಶ್ರೀ ಡಾ ತುಳಸೀ ಗೌಡ ಅವರಿಗೆ ಸನ್ಮಾನ

ಅಂಕೋಲಾ: ನ್ಯಾಯವಾದಿ ರವೀಂದ್ರ ನಾಯ್ಕ ನೇತೃತ್ವದ ಜಿಲ್ಲಾ ಅರಣ್ಯ ಹಕ್ಕು ಹೋರಾಟ ಸಮಿತಿಯವರು ಲಕ್ಷ ವೃಕ್ಷ ಆಂದೋಲನ ಹಮ್ಮಿಕೊಂಡು ಜಿಲ್ಲೆಯ ಹಲವು ಪಂಚಾಯತ್ ವ್ಯಾಪ್ತಿಗಳಲ್ಲಿ ಏಕ ಕಾಲಕ್ಕೆ ಗಿಡನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದು ಇದೇ ವೇಳೆ ಅಂಕೋಲಾ ತಾಲೂಕಿನ ಅಚವೆ ಮತ್ತು ತೆಂಕಣಕೇರಿಗಳಲ್ಲಿಯೂ ಗಿಡನೆಟ್ಟು ಸಾಂಕೇತಿಕ ಚಾಲನೆ ನೀಡಲಾಯಿತು. ಪದ್ಮಶ್ರೀ ದ್ವಯರಾದ ತುಳಸಿ ಗೌಡ ಹಾಗೂ ಸುಕ್ರಿ ಗೌಡ ಮತ್ತಿತರ ಪ್ರಮುಖರಿದ್ದರು.

ಅರಣ್ಯ ವಾಸಿಗಳನ್ನು ಅರಣ್ಯ ಭಕ್ಷಕರು ಎನ್ನುವಂತೆ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಅರಣ್ಯ ವಾಸಿಗಳಿಂದ ಅರಣ್ಯ ರಕ್ಷಣೆಯಾಗಿದೆ ಎಂದು ಜಿ.ಪಂ.ಮಾಜಿ ಸದಸ್ಯ ಜಿ ಎಂ ಶೆಟ್ಟಿ ಹೇಳಿದರು. ಅವರು ಜಿಲ್ಲಾ ಅರಣ್ಯ ಹಕ್ಕು ಹೋರಾಟ ಸಮಿತಿ ಉತ್ತರ ಕನ್ನಡ ಹಾಗೂ ಅಂಕೋಲಾ ತಾಲೂಕಾ ಅರಣ್ಯ ಹಕ್ಕು ಹೋರಾಟ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಚವೆಯಲ್ಲಿ ನಡೆದ ಲಕ್ಷ ವೃಕ್ಷ ಆಂದೋಲನದ ಅಡಿಯಲ್ಲಿ  ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ ಅರಣ್ಯವಾಸಿಗಳು ಅರಣ್ಯ ನಾಶಮಾಡಲು ಅತಿಕ್ರಮಣ ಮಾಡಿದವರಲ್ಲ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅರಣ್ಯ ಪ್ರದೇಶದ ಖುಲ್ಲಾ ಜಾಗಗಳಲ್ಲಿ ಕೃಷಿ ಕಾರ್ಯಗಳನ್ನು, ತೋಟಗಾರಿಕೆಯ ಗಿಡಮರಗಳನ್ನು ಬೆಳೆಸಿಕೊಂಡವರು. ಅರಣ್ಯದ ಬಳಿ ಜನವಸತಿ ಇರುವದರಿಂದಲೇ ಅರಣ್ಯದ ರಕ್ಷಣೆಯೂ ಕೂಡ ಆಗಿದೆ. ಅದೂ ಅಲ್ಲದೆ ಹಲವು ತಲೆಮಾರುಗಳಿಂದ ಬದುಕುತ್ತಿರುವವರಿಗೆ ಬದುಕುವ ಹಕ್ಕಿದೆ. ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದರು.

ಅರಣ್ಯ ಅತಿಕ್ರಮಣದಾರರ ಹೋರಾಟದ ಪ್ರಮುಖರಾದ ರಮಾನಂದ ನಾಯಕ, ಮಾತನಾಡಿ ಅರಣ್ಯವಾಸಿಗಳೂ ಕೂಡ ಪರಿಸರವನ್ನು ಉಳಿಸುವವರೇ ಎಂದು ಲಕ್ಷ ವೃಕ್ಷ ಗಿಡ ನೆಡುವ ಆಂದೋಲನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಗ್ರಾ.ಪಂ.ಮಾಜಿ ಅಧ್ಯಕ್ಷ ಉದಯ ಗುನಗಾ ಮಾತನಾಡಿ ಅರಣ್ಯ ವಾಸಿಗಳು ಜಾತಿ ಜನಾಂಗ ಎನ್ನದೆ, ಪಕ್ಷಾತೀತವಾಗಿ ಎಲ್ಲರೂ ಬಂದು ಹೋರಾಟದಲ್ಲಿ ಭಾಗವಹಿಸಿದಾಗ ಮಾತ್ರ ಸಂಘಟನೆಗೆ ಬಲ ಬರುತ್ತದೆ ಎಂದರು. ಅರಣ್ಯ ಅತಿಕ್ರಮಣದಾರ ಮಂಜುನಾಥ ಕೊಡಿಯಾ ಇವರ ಜಮೀನಿನಲ್ಲಿ ಗಿಡ ನೆಟ್ಟು ಲಕ್ಷ ವೃಕ್ಷ ಗಿಡ ನೆಡುವ ಆಂದೋಲನಕ್ಕೆ ಚಾಲನೆ ನೀಡಿದ ವೃಕ್ಷಮಾತೆ ಪದ್ಮಶ್ರೀ ಡಾ ತುಳಸೀ ಗೌಡ ಅವರನ್ನು ಅರಣ್ಯ ಹಕ್ಕು ಹೋರಾಟ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪ್ರಮುಖರಾದ ಶಾಂತಾರಾಮ ನಾಯಕ, ಷಣ್ಮುಖ ಗೌಡ ಬೆಳಂಬಾರ,ಶ್ರೀದೇವಿ ಪಟಗಾರ, ತ್ರಯಂಬಕ ಬಾಂದೇಕರ, ಹನುಮಾ ಗೌಡ, ಅರಣ್ಯ ಹೋರಾಟ ಸಮಿತಿಯ ಅಧ್ಯಕ್ಷ  ರವಿ ಸಿದ್ಧಿ, ಮೋಹನ ಸಿದ್ದಿ, ಗ್ರಾ.ಪಂ.ಸದಸ್ಯರು ಇದ್ದರು. ಬಾಲಚಂದ್ರ ಶೆಟ್ಟಿ ಕುಂಟಕಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಶಂಕರ ಮಂಜುನಾಥ ಕೊಡಿಯಾ ವಂದಿಸಿದರು.

ತೆಂಕಣಕೇರಿಯ ಆದರ್ಶ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಪ್ರತ್ಯೇಕ ಕಾರ್ಯಕ್ರಮದಲ್ಲಿ ಪದ್ಮಶ್ರೀ ಸುಕ್ರಿ ಗೌಡ ಇವರು ಅಡಿಕೆ ಸಸಿ ನೆಟ್ಟು , ಗಿಡಕ್ಕೆ ನೀರೆರೆಯುವ ಮೂಲಕ ಲಕ್ಷ ವೃಕ್ಷ ಆಂದೋಲನಕ್ಕೆ ಚಾಲನೆ ನೀಡಿದರು.ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಉಮೇಶ್ ನಾಯ್ಕ ಸ್ವಾಗತಿಸಿದರು. ಆದರ್ಶ ಪ್ರೌಢ ಶಾಲೆ ಪರವಾಗಿ ಪದ್ಮಶ್ರೀ ಸುಕ್ರಿ ಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಾನಪದ ಕೋಗಿಲೆ ಸುಕ್ರಿ ಗೌಡ ಮಾತನಾಡಿ, ಅರಣ್ಯ ನಾಶ ಮಾಡದೇ ಮಕ್ಕಳಂತೆ ಗಿಡವನ್ನು ಬೆಳೆಸಬೇಕು ಎಂದರು. ಶಾಲಾ ಮುಖ್ಯಾಧ್ಯಾಪಕ ನಿತ್ಯಾನಂದ ನಾಯ್ಕ ತಮ್ಮ ಶಾಲೆಯಲ್ಲಿ ಪದ್ಮಶ್ರೀ ಸುಕ್ರಿ ಗೌಡರನ್ನು ಕರೆತಂದು ಪರಿಸರ ಪೂರಕ ಕಾಯಕ್ರಮ ಹಮ್ಮಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಂಘಟಕ ಪ್ರಮುಖ ಮತ್ತು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾಜೇಶ ನಾಯ್ಕ ವಂದಿಸಿದರು. ಶಾಲೆಯ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು , ಊರ ನಾಗರಿಕರದ್ದರು.

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Back to top button