Big News
Trending

ಏಕಾಏಕಿ ಕಲುಷಿತಗೊಂಡ ಸರ್ಕಾರಿ ಶಾಲೆಯ ಬಾವಿ ನೀರು – ಉಕ್ಕೇರುತ್ತಿದೆ ನೊರೆ: ಗಾಬರಿಗೊಂಡ ಶಿಕ್ಷಕರು, ವಿದ್ಯಾರ್ಥಿಗಳು

ಅಂಕೋಲಾ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಕುಡಿಯುವ ನೀರಿನ ಬಾವಿಯ ನೀರು ಅದಾವುದೇ ಕಾರಣದಿಂದ ಕಲುಷಿತಗೊಂಡ ಘಟನೆ ಅಂಕೋಲಾದ ಪಳ್ಳಿಕೇರಿಯಲ್ಲಿ ನಡೆದಿದೆ. ನೀರು ಕಲುಷಿತಗೊಂಡಿರುವುದನ್ನು ಗಮನಿಸಿದ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿ ಪಾಲಕರು ಆತಂಕಗೊoಡು ಸಂಬoಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸ್ಥಳ ಪರಿಶೀಲಿಸುವಂತೆ ವಿನಂತಿಸಿದರು. ಸುದ್ದಿ ತಿಳಿದ ಪುರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಸ್ಥಳೀಯ ಬೀಟ್ ಪೋಲೀಸ್ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಳ್ಳಿಕೇರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕುಡಿಯಲು, ಬಿಸಿಯೂಟ ತಯಾರಿಕೆಗೆ, ಅಂಗನವಾಡಿ ಮಕ್ಕಳ ಊಟ,ಉಪಹಾರದ ಉದ್ದೇಶಗಳಿಗೆ, ಹಾಗೂ ಶಾಲೆಯ ಇತರೇ ಉದ್ದೇಶಕ್ಕೆ ಇದೇ ಬಾವಿಯಿಂದ ನೀರನ್ನು ಬಳಸಲಾಗುತ್ತಿದ್ದು ,ಬಾವಿಯ ನೀರು ಕಲುಷಿತಗೊಂಡು ಮೇಲ್ಲಡೆ ಹೊಲಸು ನೊರೆ ರೀತಿ ಏನೋ ತೇಲುತ್ತಿರುವುದ್ನು ಗಮನಿಸಿದ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಊರ ನಾಗರಿಕರು ಆತಂಕಗೊAಡು ವಿಷಯವನ್ನು ಸಂಬoಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಬಾವಿಯನ್ನು ಪರಿಶೀಲಿಸಿ, ಬಾವಿಯ ನೀರು ಕಲುಷಿತ ಗೊಂಡಿರುವುದನ್ನು ಮನಗಂಡು, ಯಾವುದೇ ರೀತಿಯ ಬಳಕೆಗೆ ಈ ನೀರು ಉಪಯೋಗಿಸದಂತೆ ಸೂಚನೆ ನೀಡಿ, ತಾತ್ಕಾಲಿಕವಾಗಿ ಶಾಲೆಯ ಬಳಕೆಗೆ ಪುರಸಭೆ ವತಿಯಿಂದ ಪ್ರತ್ಯೇಕ ಸಿಂಟೆಕ್ಸ್ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆ ಮಾಡಿ ಕೊಡುವುದಾಗಿ ತಿಳಿಸಿ,ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಲೀನ ನೀರು ಬಾವಿ ನೀರಿಗೆ ಸೇರಿರುವ ಅಥವಾ ಯಾರಾದರೂ ಸ್ವಲ್ಪ ಕೆಮಿಕಲ್ ಹಾಕಿರುವ ಸಂಶಯ ಇದ್ದು, ನೀರನ್ನು ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷಿಸಲಾಗುವುದು ಮತ್ತು ಶಾಲೆಯ ಉಪಯೋಗಕ್ಕೆ ಪುರಸಭೆ ವತಿಯಿಂದ ಬೇರೆ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ ನಿತಿನ್ ಹೊಸ್ಮೇಳಕರ ಆಗಮಿಸಿ ನೀರಿನ ಮಾದರಿಯನ್ನು ಸಂಗ್ರಹಿಸಿದ್ದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸುವುದಾಗಿ ತಿಳಿಸಿ, ಬಾವಿ ನೀರಿನ ಶುದ್ಧೀಕರಣಕ್ಕೆ ಯಾವೆಲ್ಲಾ ರೀತಿ ಕ್ರಮ ವಹಿಸಬೇಕು ಎಂದು ತಿಳುವಳಿಕೆ ನೀಡಿ, ಆ ಬಳಿಕ ಮತ್ತೆ ನೀರಿನ ಗುಣಮಟ್ಟ ಪರೀಕ್ಷಿಸಿ, ಬಳಕೆಗೆ ಯೋಗ್ಯ ಎನ್ನುವವರೆಗೂ ಬಾವಿ ನೀರನ್ನು ಬಳಸದಂತೆ ತಿಳಿಸಿದರು. ಶನಿವಾರದವರೆಗೆ ಸರಿಯಾಗಿಯೇ ಇದ್ದ ಬಾವಿಯ ನೀರು ಸೋಮವಾರ ಬೆಳಗ್ಗೆ ಬಂದು ನೋಡಿದರೆ ತುಂಬಾ ಹೊಲಸಾಗಿ ಬಳಕೆಗೆ ಯೋಗ್ಯವಿಲ್ಲದಂತೆ ಕಂಡು ಬಂದಿದೆ . ಈ ಕುರಿತಂತೆ ಪೊಲೀಸರಿಗೆ ಸಹ ಮನವಿ ನೀಡಿ ತನಿಖೆ ಮಾಡುವಂತೆ ತಿಳಿಸಲಾಗಿದೆ ಎಂದು ಶಾಲೆಯವರು ತಿಳಿಸಿದ್ದಾರೆ. ಹಲವಾರು ವರ್ಷಗಳಿಂದ ಬಳಸಲ್ಪಡುತ್ತಿದ್ದ ಬಾವಿಯ ನೀರು ಏಕಾಏಕಿ ಕೆಡಲು ಕಾರಣ ಏನು ಎನ್ನುವುದು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button