Big News
Trending

ಬೆಳಕು ಫೌಂಡೇಶನ್ ಕಾರ್ಯ ಶ್ಲಾಘನೀಯ : ಸುಜಾತಾ ಲಾಡ್

ಅಂಕೋಲಾ : ಬೆಳಕು ಫೌಂಡೇಶನ್ ಅಂಕೋಲಾ, ಗೋಖಲೆ ಸೆಂಟೆನರಿ ಪದವಿ ಪೂರ್ವ ಕಾಲೇಜು ಇವರ ಆಶ್ರಯದಲ್ಲಿ ಯುಜಿಸಿ ಸಭಾಭವನದಲ್ಲಿ ಅಂತರಾಷ್ಟ್ರೀಯ ಯುವಕರ ದಿನಾಚರಣೆ ನಿಮಿತ್ತ ‘ಸುಸ್ಥಿರ ಪ್ರಪಂಚ ನಿರ್ಮಾಣಕ್ಕಾಗಿ ಯುವಕರ ಹಸಿರು ಕೌಶಲ್ಯಗಳು’ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಹಮ್ಮಿಕೊಂಡಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಚಾರ್ಯೆ ಸುಜಾತಾ ಲಾಡ್ ಮಾತನಾಡಿ, ಯುವಕರು ನಿರುದ್ಯೋಗದ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಕೂಡ ಅದನ್ನು ಸದ್ಬಳಕೆ ಮಾಡಿಕೊಳ್ಳದೇ ಬಹುತೇಕ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಯುವಕರು ಕೋಚಿಂಗ್ ಅಥವಾ ಇನ್ನಿತರ ಸಹಾಯವನ್ನು ಪಡೆದು ಉನ್ನತ ಹುದ್ದೆಗಳಿಗೆ ತೆರಳಬೇಕು. ಈ ನಿಟ್ಟಿನಲ್ಲಿ ಬೆಳಕು ಫೌಂಡೇಶನ್‌ನವರು ಇಂತಹ ವಿದಾಯಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ ಬೆಳಕು ಫೌಂಡೇಶನ್ ಅಧ್ಯಕ್ಷೆ ಮಂಜುಳಾ ನಾಯ್ಕ ಮಾತನಾಡಿ, ಇಂದಿನ ಯುವಕರು ನಾಳೆಯ ಪ್ರಜೆಗಳಾಗಲಿದ್ದು, ಉತ್ತಮ ಸಂಸ್ಕಾರದ ಜತೆಗೆ ನಿರಂತರ ಓದು, ಇನ್ನಿತರ ಹವ್ಯಾಸಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕಿದೆ. ಹಾಗೇ ಬೆಳಕು ಫೌಂಡೇಶನ್ ವತಿಯಿಂದ ಒಂದೊAದು ವಿಷಯದ ಮೇಲೆ ಪ್ರತಿ ವರ್ಷ ಕಾರ್ಯಕ್ರಮ ಮಾಡಿಕೊಂಡು ಬರಲಾಗುತ್ತಿದೆ. ಇಂದಿನ ಯುವ ಜನರು ಮುಂದಿನ ಸುಭದ್ರ ಭಾರತದ ನೇತಾರರಾಗಲಿದ್ದಾರೆ ಎಂದರು.

ಬೆಳಕು ಫೌಂಡೇಶನ್ ಸದಸ್ಯ ಮಲ್ಲಿಕಾರ್ಜುನಯ್ಯ ವಿರಕ್ತಮಠ ಮಾತನಾಡಿ, ಭಾರತ ಆರ್ಥಿಕ ಸ್ಥಿತಿಗತಿಯಲ್ಲಿ ೪ನೇ ಸ್ಥಾನದಲ್ಲಿದ್ದು, ನಾವೆಲ್ಲರೂ ದೇಶಕ್ಕಾಗಿ ಬದುಕಿದರೆ ಮುಂದಿನ ದಿನಗಳಲ್ಲಿ ೧ನೇ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದಬೇಕು ಎಂದರು.
ಉಪನ್ಯಾಸಕಿಯರಾದ ಸುಗಂಧಾ ನಾಯಕ, ಸೌಮ್ಯ ಕಾಮತ, ಬೆಳಕು ಫೌಂಡೇಶನ್ ಕಾರ್ಯದರ್ಶಿ ಕಾವ್ಯಶ್ರೀ ನಾಯ್ಕ ಮಾತನಾಡಿದರು. ವಿದ್ಯಾರ್ಥಿಗಳಾದ ನಾಗಶ್ರೀ ಸಂಗಡಿಗರು ಪ್ರಾರ್ಥಿಸಿದರು. ಶಿವರಾಜ ಹೊಂಗಲ ಸ್ವಾಗತಿಸಿದರು. ಯೋಗೀಶ ಉಪ್ಪಿನ ನಿರ್ವಹಿಸಿದರು. ಉಪನ್ಯಾಸಕಿ ಶಿಲ್ಪಾ ಹೊನ್ನಕಟ್ಟೆ ವಂದಿಸಿದರು.

ಬಹುಮಾನ : ಭಾಷಣ ಸ್ಪರ್ಧೆಯಲ್ಲಿ ೧೭ ವಿದ್ಯಾರ್ಥಿಗಳು ಭಾಗವಹಿಸಿದ್ದು, ದರ್ಶನ ನಾಯಕ ಪ್ರಥಮ, ನೇಸರ ಕವರಿ ದ್ವಿತೀಯ, ದೀಕ್ಷಾ ಹರಿಕಾಂತ ತೃತೀಯ ಬಹುಮಾನ ಪಡೆದರು. ಬಹುಮಾನಿತರಿಗೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button