Big News
Trending

President’s Medal: CID ವಿಭಾಗದ ಡಿ.ವೈ.ಎಸ್.ಪಿ ಗೆ ರಾಷ್ಟ್ರಪತಿಗಳ ಪದಕ: ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಗೌರವ

ಅಂಕೋಲಾ: ತಾಲೂಕಿನ ಶಿರಗುಂಜಿ ಮೂಲದ ಮಣ್ಣಿನ ಮಗಳು , ಬೆಂಗಳೂರಿನ ಸಿ.ಐ.ಡಿ ವಿಭಾಗದಲ್ಲಿ ಡಿ.ವೈ.ಎಸ್. ಪಿ ಯಾಗಿ ಸೇವೆ ಸಲ್ಲಿಸುತ್ತಿದ್ದು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಗೌರವಕ್ಕೆ ಭಾಜನರಾಗಲಿದ್ದಾರೆ. ಶಿಕ್ಷಕ ದಂಪತಿಗಳಾದ ತಿಮ್ಮಣ್ಣ ನಾಯಕ ಮತ್ತು ಶಾಂತಿ ನಾಯಕ ಇವರ ಮಗಳಾಗಿರುವ ಅಂಜುಮಾಲಾ ನಾಯಕ ,ಗ್ರಾಮೀಣ ಪ್ರತಿಭೆಯಾಗಿದ್ದು ಹಂತ ಹಂತವಾಗಿ ಪೊಲೀಸ್ ಇಲಾಖೆಯಲ್ಲಿ ಗಮನ ಸೆಳೆಯುತ್ತಿದ್ದಾರೆ.

ಸ್ಪಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದಂದು ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯಲ್ಲಿನ ವಿಶಿಷ್ಟ ಸೇವೆಯನ್ನು ಗುರುತಿಸಿ ,ರಾಷ್ಟ್ರಪತಿಗಳ ಪದಕ ನೀಡಿ ಗೌರವಿಸುವ ಸಂಪ್ರದಾಯವಿದ್ದು,ರಾಜ್ಯದ ಪೊಲೀಸ್ ಇಲಾಖೆಯಿಂದಲೂ ಈ ಬಾರಿ ಹಲವರು ಗೌರವ ಸ್ವೀಕರಿಸಲಿದ್ದು,ಈ ಪಟ್ಟಿಯಲ್ಲಿ ಅಂಜುಮಾಲ ನಾಯಕ ಕೂಡ ಒಬ್ಬರಾಗಿದ್ದಾರೆ. ಎಂ.ಎಸ್ಸಿ ಮತ್ತು ಗೃಹ ವಿಜ್ಞಾನ ಪದವಿದರೆಯಾಗಿರುವ ಇವರು 2001 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಬೆಳಗಾವಿ, ಖಾನಾಪುರ,ಹುಬ್ಬಳ್ಳಿ ಗ್ರಾಮೀಣ, ಬೆಂಗಳೂರು ಮಡಿವಾಳ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ದಕ್ಷ ಸೇವೆ ಮೂಲಕ ಗುರುತಿಸಿಕೊಂಡಿದ್ದು,2008 ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಬಡ್ತಿ ಪಡೆದು ಬೆಂಗಳೂರಿನ ಹಲಸೂರು ಗೇಟ್, ಜಾಲಳ್ಳಿ, ಮಲ್ಲೇಶ್ವರಂ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಬಳಿಕ 2022 ರಲ್ಲಿ ಡಿ.ವೈ.ಎಸ್. ಪಿ ಯಾಗಿ ಬಡ್ತಿ ಪಡೆದ ಅವರು ಬೆಂಗಳೂರಿನ ಸಿ.ಐ.ಡಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳ ಬಂಗಾರದ ಪದಕ, ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಗೌರವ ಸನ್ಮಾನಗಳಿಗೆ ಪಾತ್ರರಾಗಿರುವ ಅಂಜುಮಾಲಾ ನಾಯಕ ಅವರಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಘೋಷಣೆಯಾಗಿರುವುದಕ್ಕೆ ತಾಲೂಕಿನ ಹಾಗೂ ಜಿಲ್ಲೆಯ ಹಲವು ಜನತೆ ಹೆಮ್ಮೆ ಹಾಗೂ ಹರ್ಷ ವ್ಯಕ್ತಪಡಿಸಿದ್ದಾರೆ.
ಅಂಜುಮಾಲಾ ನಾಯಕ ಇವರು ಅಂಕೋಲಾದ ಹೆಸರಾಂತ ದಂತ ವೈದ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಡಾ.ಸಂಜು ನಾಯಕ ಅವರ ಸಹೋದರಿಯಾಗಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button