ಅಂಕೋಲಾ : ಸಾಹಿತ್ಯ ಕ್ಷೇತ್ರದಲ್ಲಿ ಅಂಕೋಲೆಯ ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಕನ್ನಡ ಸಾರಸ್ವತ ಲೋಕದ ಗರಿಮೆ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ ಎಂದು ಕರ್ನಾಟಕ ಸಂಘದ ಗೌರವಾಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಕೆ.ವಿ.ನಾಯಕ ಅಭಿಮತ ವ್ಯಕ್ತಪಡಿಸಿದರು. ಕರ್ನಾಟಕ ಸಂಘದವರು, ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ದಿನಕರ ದೇಸಾಯಿ ಸ್ಮರಣೆ, ಸನ್ಮಾನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ತಜ್ಞ ದಿನಕರ ದೇಸಾಯಿಯಂಥವರ ಕಾರಣದಿಂದಾಗಿ ಅಂದು ಶಿಕ್ಷಣ ಸಾರ್ವತ್ರಿಕಗೊಂಡು ಹಲವಾರು ಪ್ರತಿಭೆಗಳು ನಾಡಿನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸನ್ಮಾನ – ಬಹುಮಾನ : ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗಜಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶ್ರೀದೇವಿ ಕೆರೆಮನೆ ಮತ್ತು ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ರೇಣುಕಾ ರಮಾನಂದ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಂಘ ಮತ್ತು ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಏರ್ಪಡಿಸಲಾಗಿದ್ದ ಬೇಂದ್ರೆ ಬದುಕು ಬರಹ ಪ್ರಬಂಧ ಸ್ಪರ್ಧೆಯಲ್ಲಿ ಮಹಿಮಾ ಗೌಡ (ಪ್ರಥಮ ), ನೀಹಾ ಪಡವಳಕರ್ (ದ್ವಿತೀಯ ), ಸಂಗೀತಾ ವಾಲ್ಮಿಕಿ (ತೃತೀಯ) ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ 26 ಸ್ಪರ್ಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಮಹೇಶ ನಾಯಕ ಹಿಚ್ಕಡ ವಂದಿಸಿದರು. ಕೆ. ಎಲ್. ಇ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ. ವಿನಾಯಕ ಹೆಗಡೆ, ಉಪನ್ಯಾಸಕ ಮಂಜುನಾಥ ಇಟಗಿ ಸನ್ಮಾನಿತರ ಪರಿಚಯ ಮಾಡಿದರು, ಕರ್ನಾಟಕ ಸಂಘದ ಖಜಾಂಚಿ ಎಸ್. ಆರ್ .ನಾಯಕ ನಿರ್ವಹಿಸಿದರು. ಸಂಘದ ಪದಾಧಿಕಾರಿಗಳಾದ ವಿಠ್ಠಲ ಗಾಂವಕರ್, ಶ್ರೀಧರ ನಾಯಕ, ಪ್ರವೀರ ನಾಯಕ, ಡಾ. ಪುಷ್ಪಾ ನಾಯ್ಕ ,ದಿನಕರ ವೇದಿಕೆಯ ಅಧ್ಯಕ್ಷರಾದ ರವೀಂದ್ರ ಕೇಣಿ ಮತ್ತಿತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ