Important
Trending

ಗಬ್ಬೆದ್ದು ನಾರುತ್ತಿರುವ ಪುರಸಭೆಯ ಹಳೆಯ ಕಟ್ಟಡದ ಆವರಣ: ರಾತ್ರಿ ಸಮಯದಲ್ಲಿ ಕುಡುಕರ ತಾಣ

WhatsApp Group Join Now

ಅಂಕೋಲಾ: ಈ ಹಿಂದೆ ಪುರಸಭೆ ಕಾರ್ಯಾಲಯವಿದ್ದಾಗಲೇ ಹಲವು ಬಾರಿ  ನಾನಾ ಕಾರಣಗಳಿಂದ ದುರ್ನಾತ ಬೀರಿ ಅಶುಚಿತ್ವದ ವಾತಾವರಣಕ್ಕೆ ಕಾರಣವಾಗಿದ್ದ ತರಕಾರಿ ಮಾರುಕಟ್ಟೆ ಹೊರ ಆವರಣ ಈದೀಗ ಶುಚಿತ್ವ ನಿರ್ವಹಣೆಯ ಕೊರತೆಯಿಂದ ಮತ್ತಷ್ಟು ಗಬ್ಬೆದ್ದು ನಾರುತ್ತಿದ್ದು, ದಿನ ನಿತ್ಯ ಇಲ್ಲಿ ಬಂದು ಹೋಗುವವರು ಮತ್ತು ಅಕ್ಕ ಪಕ್ಕದವರಿಗೆ ಸಾಂಕ್ರಾಮಿಕ ರೋಗ ಹರಡುವಂತಿದೆ.

ಪಟ್ಟಣದ ಮಾರುಕಟ್ಟೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದ ಪುರಸಭೆ ಕಾರ್ಯಾಲಯದ ಹಳೆಯ ಕಟ್ಟಡವೇನೋ ಬಸ್ ನಿಲ್ದಾಣದ ಪಕ್ಕದ ಸಮಾಜ ಮಂದಿರ ಬಳಿಯ ನೂತನ ಕಟ್ಟಡಕ್ಕೆ ಸ್ದಳಾಂತರಗೊಂಡಿದೆ. ಹಳೇ ಕಟ್ಟಡದ ಮೇಲ್ಮಡಿಯ ಒಂದು ಭಾಗ ಉಪ ನೋಂದಣಿ ಅಧಿಕಾರಿಗಳ ಕಚೇರಿಗೆ ( ಸಬ್ ರಜಿಸ್ಟ್ರಾರ್ ಆಫೀಸ್ ) ಬಾಡಿಗೆಗೆ ನೀಡಲಾಗಿದೆ, 

ಆದರೆ ಈ ಕಟ್ಟಡದ ಪ್ರವೇಶ ದ್ವಾರದ ಬಳಿ ಈಗಲೂ ಪುರಸಭೆ ಕಾರ್ಯಾಲಯ ಎಂಬ  ಹಳೆಯ ಹೆಸರೇ ಕಂಡು ಬರುತ್ತಿದೆಯೇ ಹೊರತು,ಉಪ ನೊಂದಣಾಧಿಕಾರಿಗಳ ಕಾರ್ಯಾಲಯದ ಹೆಸರಿನ ಬೋರ್ಡ್ ಈ ವರೆಗೂ ಅಳವಡಿಸಿದಂತಿಲ್ಲ.ಇದರಿಂದ ಕೆಲ ಸಾರ್ವಜನಿಕರಿಗೆ ಇದು ಯಾವ ಕಚೇರಿ ಎಂಬ ಗೊಂದಲ ಏರ್ಪಡುವಂತಾಗಿದೆ.ಸಂಬಂಧಿತ ಎರಡೂ ಇಲಾಖೆಗಳು ಎಚ್ಚೆತ್ತು ಈಗಲಾದರೂ ಸೂಕ್ತ ಕ್ರಮ ಕೈಗೊಳ್ಳುವುದೇ ಕಾದುನೋಡಬೇಕಿದೆ. ಈ ಕಟ್ಟಡದ ಕೆಳ  ಭಾಗದಲ್ಲಿ ತರಕಾರಿ ಮಾರುಕಟ್ಟೆಯಿದೆ.

ಎದುರಿಗೆ ಮತ್ತು ಅಕ್ಕ ಪಕ್ಕ ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳಿದ್ದು ಬಾಡಿಗೆ ರೂಪದಲ್ಲಿ ಸಾಕಷ್ಟು ಆದಾಯವು ಬರುತ್ತಿದೆ. ಹೀಗಿದ್ದೂ ಇಲ್ಲಿನ ಅಂಗಡಿಕಾರರು ಮತ್ತು ದಿನ ನಿತ್ಯ ಬಂದು ಹೋಗುವ ಸಾರ್ವಜನಿಕರಿಗೆ ಸರಿಯಾದ ಶಾಚಾಲಯ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ. ಈ ಹಿಂದೆ ಹೊರ ಆವರಣದ ಒಂದು ಮೂಲೆಯಲ್ಲಿದ್ದ ಗಂಡಸರ ಶೌಚ ವ್ಯವಸ್ಥೆ ಸಂಪೂರ್ಣ ಹದಗಟ್ಟಿದ್ದು,ಮೂತ್ರ ಮಾಡಲು ಅಳವಡಿಸಿದ ಬೇಸಿನ್ ಗಳು ನೀರಿನ ವ್ಯವಸ್ಥೆ ಇಲ್ಲದೇ ದುರ್ನಾತ ಬೀರುತ್ತಿವೆ.

ಅಕ್ಕ ಪಕ್ಕಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು ಸ್ವಚ್ಛತೆ ಕಾಣದೇ ತಿಂಗಳುಗಳೇ ಕಳೆದಿವೆ.ಶೌಚ ಭಾಧೆ ತೀರಿಸಿಕೊಳ್ಳಲು ಬರುವವರು ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡೇ ಅಲ್ಲಿ ಇಲ್ಲಿ ಮೂತ್ರ ವಿಸರ್ಜನೆ ಮಾಡಿ ಹೋಗುತ್ತಿದ್ದು ,ಕೆಲವರಂತೂ ಕಂಡ ಕಂಡಲ್ಲಿ ಗೋಡೆಯ ಬಳಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಕೊಳೆತ ತರಕಾರಿ ಮತ್ತಿತರ ರೀತಿಯ ತ್ಯಾಜ್ಯ

ಕಟ್ಟಡದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ  ತುಂಬಿ ಅಸಹ್ಯಕರ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ಹೊಲಸು ಮತ್ತು ಗಬ್ಬೆದ್ದು ನಾರುವ ವಾತಾವರಣದಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸುತ್ತ ಮುತ್ತಲಿನ ವಾಣಿಜ್ಯ ಮಳಿಗೆ, ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವ್ಯವಹಾರ ನಡೆಸುವ ವ್ಯಾಪಾರಿಗಳು, ಗ್ರಾಹಕರುಗಳಿಗೆ ಸಾಂಕ್ರಾಮಿಕ ಕಾಯಿಲೆಗಳನ್ನು ತರುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ.ಪ್ರವೇಶ ದ್ವಾರದ ಬಳಿ ಇರುವ ಸಿಸಿ ಕ್ಯಾಮೆರಾ ಅದಾವುದೋ ಕಾರಣದಿಂದ ಇದ್ದೂ ಇಲ್ಲದಂತಾಗಿ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು, ಇಲ್ಲವೇ ಕೆಲವರು ತಮ್ಮ ಅಡ್ನಾಡಿ ದಂಧೆಗಳಿಗೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಸಿ ಸಿ ಕ್ಯಾಮೆರಾ ಹಾಳು ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಕತ್ತಲಾವರಿಸಿದಂತೆ ಇಲ್ಲಿ ಕುಡುಕರ ಕಾರುಬಾರು ನಡೆಯುತ್ತಿದೆ ಎನ್ನುವುದಕ್ಕೆ ಇಲ್ಲಿರುವ ಖಾಲಿ ಬಿಯರ್ ಮತ್ತು ಸರಾಯಿ ಬಾಟಲಿಗಳು ಪುರಾವೆ ಒದಗಿಸುತ್ತಿವೆ. ಒಟ್ಟಿನಲ್ಲಿ ದೀಪದ ಬುಡಕ್ಕೆ ಕತ್ತಲು ಎನ್ನುವಂತೆ ಅಂಗಡಿಕಾರರ ಬಾಡಿಗೆ ಆದಾಯದ ಮೇಲೆ ಕಣ್ಣಿಡುವ ಸ್ಥಳೀಯ ಆಡಳಿತ ವರ್ಗ,ಶೌಚಾಲಯದಂತ ಕನಿಷ್ಠ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸದೇ ಬೇಜವಾಬ್ದಾರಿ ತೋರಿದಂತಿದೆ.

ಗಾಂಧಿ ಜಯಂತಿ ಮತ್ತಿತರ ಸಂದರ್ಭಗಳಲ್ಲಿ ಕಾಟಾಚಾರಕ್ಕೆ ಸ್ವಚ್ಛತಾ ಕಾರ್ಯ ನಡೆಸದೇ ,ಪಟ್ಟಣದ ಸ್ವಚ್ಛತೆಗೆ ಸ್ಥಳೀಯ ಆಡಳಿತ ಈಗಲಾದರೂ ಕಣ್ತೆರದು ನೋಡಿ,ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಅಂತೆಯೇ ಹೆಸರೇ ಇಲ್ಲವಾಗಿರುವ ಉಪ ನೊಂದಣಾಧಿಕಾರಿ  ಕಾರ್ಯಾಲಯದವರು ,ತಮ್ಮ ಕಚೇರಿಯ ನಾಮಫಲಕ ಅಳವಡಿಕೆಗೆ ಕೂಡಲೇ ಮುಂದಾಗದಿದ್ದರೆ ಸಂಬಂಧಿಸಿದ  ಈ ಎರಡೂ ಇಲಾಖೆಗಳ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಕೆಲ ಸಾರ್ವಜನಿಕ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.           

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Back to top button