Follow Us On

Google News
Big News
Trending

ಸಿಸಿ ಕ್ಯಾಮೆರಾ ಕಣ್ಗಾವಲು ಇಲ್ಲದ ನೂತನ ಬಸ್ ನಿಲ್ದಾಣ : ಕಳ್ಳ ಕಾಕರರು, ಪುಂಡಪೋಕರಿಗಳ ನೆಚ್ಚಿನ ತಾಣ

ಅಂಕೋಲಾ: ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು, ಇತರೆ ಸಾರ್ವಜನಿಕರು ಬಂದು ಹೋಗುವ ತಾಲೂಕಿನ ನೂತನ ಬಸ್ ನಿಲ್ದಾಣದಲ್ಲಿ ಇದುವರೆಗೆ ಸಿ.ಸಿ ಕ್ಯಾಮೆರಾ ಅಳವಡಿಸದೇ ಇರುವುದು ಹಲವು ಆವಾಂತರಗಳಿಗೆ ಕಾರಣವಾಗುವಂತಿದೆ. ಬಹುಕೋಟಿ ವೆಚ್ಚದ ನೂತನ ಬಸ್ ನಿಲ್ದಾಣವೇನೋ ಉದ್ಘಾಟನೆಗೊಂಡು ಹಲವು ತಿಂಗಳೇ ಕಳೆದು ಹೋಗಿದ್ದರು, ಸುರಕ್ಷತೆ ದೃಷ್ಟಿಯಿಂದ ಇಲ್ಲಿ ಈ ವರೆಗೂ ಸಿ. ಸಿ ಕ್ಯಾಮರಾ ಕಣ್ಗಾವಲು ಅಳವಡಿಸದಿರುವುದು, ಪುಂಡ ಪೋಕರಿಗಳಿಗೆ, ಕಳ್ಳ – ಖದೀಮರಿಗೆ ಭಾರೀ ಅನುಕೂಲವಾಗಿ ಪರಿಣಮಿಸಿದೆ.

ಅತ್ಯಂತ ಪ್ರಮುಖ ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣದಲ್ಲಿ ಪ್ರತಿದಿನ ಹಲವಾರು ಬಸ್ಸುಗಳು ಬಂದು ಹೋಗುತ್ತಿದ್ದು, ಸಾವಿರಾರು ಪ್ರಯಾಣಿಕರ ಓಡಾಟವಿರುತ್ತದೆ. ಕಿಸೆಗಳ್ಳರು,ಸರಗಳ್ಳರು, ಮೊಬೈಲ್ ಕಳ್ಳರು ಆಗಾಗ ತಮ್ಮ ಕರಾಮತ್ತು ತೋರುತ್ತಲೇ ಇದ್ದಾರೆ. ಆಕ್ರಮ ಮಾಂಸ ಸಾಗಾಟ, ಸಾರಾಯಿ ಸಾಗಾಟದಂತ ಪ್ರಕರಣಗಳು ಕೇಳಿ ಬಂದಿದ್ದಿದೆ. ತಾಲೂಕಿನ ಬಸ್ ನಿಲ್ದಾಣದಲ್ಲಿ ಸಿ ಸಿ ಕ್ಯಾಮೆರಾ ಇಲ್ಲದಿರುವುದು ಗೊತ್ತಿದ್ದೋ ಎನೋ ಎಂಬಂತೆ ಕಳ್ಳಕಾಕರು ತಮ್ಮ ಕೈಚಳಕ ತೋರಿಸುತ್ತಾರೆ ಎನ್ನಲಾಗಿದೆ.

ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಬೈಕ್ ಕಳ್ಳತನದಂತ ಪ್ರಕರಣಗಳೂ ನಡೆದಿವೆ. ಸಿ.ಸಿ ಕ್ಯಾಮೆರಾ ಅಳವಡಿಸಿದರೆ, ಪೊಲೀಸ್ ಮತ್ತಿತರ ತನಿಕೆಗೂ ಮಹತ್ವದ ಸುಳಿವು ದೊರೆಯುತ್ತದೆ. ಬಸ್ ನಿಲ್ದಾಣದಲ್ಲಿ ಕೆಲ ಪುಂಡ ಪೋಕರಿಗಳ ಹಾವಳಿ ಹೆಚ್ಚಿದ್ದು ವಿನಾಕಾರಣ ಬೈಕ್ ಲ್ಲಿ ಬಂದು ಸುತ್ತುವುದು, ಬಸ್ ಸಂಚರಿಸುವ ಸಂದರ್ಭದಲ್ಲಿ ಬೈಕ್ ಅಡ್ಡ ತರುವುದು, ಪ್ರಶ್ನಿಸಿದ ಸಿಬ್ಬಂದಿಗಳ ಮೇಲೆಯೇ ಹಲ್ಲೆಗೆ ಯತ್ನಿಸುವುದು ಮೊದಲಾದ ಗೂಂಡಾಗಿರಿ ಪ್ರವೃತ್ತಿಯೂ ಕಂಡು ಬಂದಿದ್ದಿದೆ ಎನ್ನುತ್ತಾರೆ ಸಾರ್ವಜನಿಕರು. ಅಲ್ಲದೇ ಬಸ್ ನಿಲ್ದಾಣದ ಕೆಲ ಮೂಲೆ ಪ್ರದೇಶದಲ್ಲಿ ರಾತ್ರಿ ವೇಳೆ ಕೆಲ ಕುಡುಕರು ಮೋಜು ಮಸ್ತಿ ತಾಣವಾಗಿಯೂ ಇದೇ ಸ್ಥಳ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ.

ಆಗಾಗ ದಾಖಲಾಗುವ ಕೆಲ ಮಹಿಳೆಯರ ನಾಪತ್ತೆ ಪ್ರಕರಣ, ಮತ್ತಿತರ ಕೆಲ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿರಬಹುದಾದ ಕೆಲವರ ಚಲನವಲನ ಗಮನಿಸಲು ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಬೇಕೆನ್ನುತ್ತಾರೆ ಪ್ರಜ್ಞಾವಂತರು. ಅಲ್ಲದೇ ಕೆಲವೊಮ್ಮೆ ಸಂಭವಿಸುವ ಸಾರಿಗೆ ಸಿಬ್ಬಂದಿಗಳ ಪರಸ್ಪರ ಇಲ್ಲವೇ ಪ್ರಯಾಣಿಕರೊಂದಿಗಿನ ಜಗಳ ಮತ್ತಿತರ ಕಾವೇರಿದ ಸಂದರ್ಭಗಳ ಸ್ಥಿತಿಗತಿ ಅರಿಯಲು ,ಇಳಿ ಜಾರಿನಲ್ಲಿ ಚಲಾಯಿಸಿ ಮರಕ್ಕೆ ಗುದ್ಧಿಕೊಳ್ಳುವ ಬಸ್ ಮತ್ತಿತರ ಅಪಘಾತದ ದೃಶ್ಯಗಳನ್ನು ವಿಶ್ಲೇಷಿಸಲು ಸಿಸಿ ಕ್ಯಾಮೆರಾ ಅತ್ಯವಶ್ಯವಾಗಿದೆ.

ಇದರ ಜೊತೆ ದ್ವಿಚಕ್ರ ವಾಹನ ಸೇರಿದಂತೆ ಬೇಕಾಬಿಟ್ಟಿ ವಾಹನ ನಿಲುಗಡೆ ವಿರುದ್ಧ ದಂಢ ವಿಧಿಸಲು ಅನುಕೂಲವಾಗಲಿದೆ.ಮಹಿಳೆಯರು ವೃದ್ಧರು ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೂ ಒತ್ತು ನೀಡಿದಂತಾಗುತ್ತದೆ. ಜೈ ಹಿಂದ್ ಮೈದಾನದ ಕೌಂಪೌಡ್ ಗೋಡೆಗೆ ಹತ್ತಿರವಿರುವ ಬಸ್ ನಿಲ್ದಾಣದ ಪ್ರವೇಶ ದ್ವಾರ (ಒಳ ಬರುವ ) ಮಾರ್ಗದಲ್ಲಿ ಕೆಲ ಚಾಲಕರು, ಬಸ್ ನ್ನು (ವಿರುದ್ಧ ದಿಸೆ ) ಯಲ್ಲಿ ಚಲಾಯಿಸಿ ನಿಲ್ದಾಣದಿಂದ ಹೊರ ಹೋಗುತ್ತಿರುವುದರಿಂದ ಅಪಘಾತದ ಸಾಧ್ಯತೆಗಳು ಹೆಚ್ಚಿದ್ದು,ಇವಕ್ಕೆಲ್ಲ ಕಡಿವಾಣ ಹಾಕಲು ಸಿ ಸಿ ಕ್ಯಾಮೆರಾ ಕಣ್ಗಾವಲು ಅತ್ಯಗತ್ಯವಾಗಿದೆ.

ಕ್ಯಾಂಟೀನ್ ಮತ್ತು ಹತ್ತಾರು ಅಂಗಡಿಗಳನ್ನು ಬಾಡಿಗೆಗೆ ನೀಡಿದ್ದಲ್ಲದೇ, ಕಂಡ ಕಂಡಲ್ಲಿ ದೊಡ್ಡ ದೊಡ್ಡ ಜಾಹಿರಾತು ಫಲಕಗಳ ಅಳವಡಿಕೆಗೂ ಅವಕಾಶ ಮಾಡಿಕೊಟ್ಟ ಸಾರಿಗೆ ಸಂಸ್ಥೆ, ಇದರಿಂದಲೇ ಪ್ರತಿ ತಿಂಗಳೂ ಲಕ್ಷ ಲಕ್ಷ ರೂ ಆದಾಯ ಗಳಿಸುತ್ತಿರುವಂತಿದೆ.,ಬಂದ ಆದಾಯದಲ್ಲಿಯೇ ಸ್ವಲ್ಪ ಪ್ರಮಾಣದಲ್ಲಿ ವ್ಯಯಿಸಿದರೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ,ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಿ ಸಿ ಕ್ಯಾಮೆರಾ ಕಾಣ್ಗಾವಲು ಮತ್ತಿತರ ಪೂರಕ ಕ್ರಮ ಕೈಗೊಳ್ಳುವ ಅವಕಾಶವಿದ್ದರೂ,ಅದೇಕೋ ಅಲಕ್ಷ ತೋರಿದಂತಿರುವುದು ಸ್ಥಳೀಯ ಹಲವು ಪ್ರಮುಖರ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದಂತಿದೆ.ಸಂಬಂಧಿಸಿದವರು ಈಗಲಾದರೂ ಎಚ್ಚೆತ್ತು ಸಿ ಸಿ ಕ್ಯಾಮೆರಾ ಕಣ್ಗಾವಲು ಅಳವಡಿಸಿ ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button