Follow Us On

WhatsApp Group
Focus News
Trending

ಬಿಟುಮಿನ್ ಸಾಗಿಸುವ ಹೊರ ರಾಜ್ಯದ ಟ್ಯಾಂಕರಗಳ ತಡೆ : ಸ್ಥಳೀಯ ಟ್ಯಾಂಕರಗಳನ್ನು ಸಾಗಾಟಕ್ಕೆ ಬಳಸಿಕೊಳ್ಳಲು ಆಗ್ರಹ

ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 66 ರ ಹಟ್ಟಿಕೇರಿ ಟೋಲ್ ಪ್ಲಾಜಾ  ಹತ್ತಿರದ ಪ್ರದೇಶದಲ್ಲಿ  ಕಳೆದ 2 ದಿನಗಳಿಂದ  ಬಿಟುಮಿನ (ಡಾಂಬರು) ಸಾಗಾಟ ಮಾಡುವ ಟ್ಯಾಂಕರಗಳನ್ನು ತಡೆದು ನಿಲ್ಲಿಸಿ ಶಾಂತಿಯುತ ಮತ್ತು ಸಾಂಕೇತಿಕ  ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ನಾವು ಈ ದಿನ ಅದನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದು ಅಂಕೋಲಾ ಕಾರವಾರ ಟ್ಯಾಂಕರ ಮಾಲೀಕರ ಸಂಘದ ಅಧ್ಯಕ್ಷ ಗಣಪತಿ ನಾಯಕ ಮೂಲಿಮನೆ ತಿಳಿಸಿದರು.                                

ಟೋಲಗೇಟ್  ಹತ್ತಿರದ ಹೆದ್ದಾರಿ ಅಂಚಿನ ಪ್ರದೇಶದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಅವರು,ಡಾಂಬರು ಸರಬರಾಜು
ಕಂಪನಿಯವರು ತಾಲೂಕಿನ ಸ್ಥಳೀಯ ಟ್ಯಾಂಕರುಗಳನ್ನು ಕಡೆಗಣಿಸಿ ಹೊರರಾಜ್ಯದ ಟ್ಯಾಂಕರುಗಳಿಗೆ ಎಲ್ಲ ಅವಕಾಶ ನೀಡುತ್ತಿರುವದನ್ನು ನಾವು ಖಂಡಿಸಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದೆವು.

ಈ ಹಿಂದೆಯೂ ಕೆಲವು ಸಲ ಪ್ರತಿಭಟನೆ ನಡೆಸಿದ ಮೇಲೆ ಸ್ಥಳೀಯ ಟ್ಯಾಂಕರುಗಳಿಗೂ ಅವಕಾಶ ನೀಡಿದ್ದರು. ಆದರೆ ಈಗ ಕಂಪನಿಯವರು ಮತ್ತೆ ಏಕಾ ಏಕಿ ತಮ್ಮ ವರಸೆ ಬದಲಾಯಿಸಿ ಆಂದ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ಹೊರರಾಜ್ಯದ ಮೂವತ್ತಕ್ಕೂ ಹೆಚ್ಚು ಟ್ಯಾಂಕರುಗಳನ್ನು ತರಿಸಿಕೊಂಡಿದ್ದು ಸ್ಥಳೀಯ ಟ್ಯಾಂಕರ ಮಾಲೀಕರು ಉದ್ಯೋಗವಿಲ್ಲದೆ ಸಾಲದ ಕಂತು ಪಾವತಿಸಲಾಗದೆ ಅಕ್ಷರಶಃ ಬೀದಿಗೆ ಬರುವಂತಾಗಿದೆ.

ಹೊರರಾಜ್ಯದ ನೊಂದಣಿ ಇರುವ ವಾಹನಗಳು ಜಿಲ್ಲೆಯೊಳಗೆ ಅಥವಾ ಅಂತರಜಿಲ್ಲೆಯೊಳಗೆ ಸರಕು ಸಾಗಾಟ ಮಾಡುವಂತಿಲ್ಲ ಆದರೆ ಇವರು ನಿಯಮ ಮೀರಿ ಸಾಗಾಟ ಮಾಡುತ್ತಿರುವದನ್ನು ಆರಟಿಓ ಅಧಿಕಾರಿಗಳು ಯಾಕೆ ನಿರ್ಬಂಧಿಸುತ್ತಿಲ್ಲ, ಪೊಲೀಸಾ್ ಇಲಾಖೆ ಯಾಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು. ಹೀಗಾಗಿ ನಾವು ಅನಿವಾರ್ಯವಾಗಿ ಟ್ಯಾಂಕರುಗಳನ್ನು ತಡೆಹಿಡಿದು,ಶಾಂತಿಯುತ ಪ್ರತಿಭಟನೆ ಮೂಲಕ ಸಂಬಂಧಿಸಿ ದವರಿಗೆ ನಮ್ಮ ಸಮಸ್ಯೆ ಪರಿಹಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.
ಇದನ್ನು ಸ್ಥಳೀಯ ಶಾಸಕರಾದ ಸತೀಶ ಸೈಲ್ ಅವರ ಗಮನಕ್ಕೂ ತರಲಾಗಿತ್ತು.

ಶಾಸಕರು ನವೆಂಬರ 6 ರಂದು ಜಿಲ್ಲಾಧಿಕಾರಿಗಳು ಮತ್ತು ಕಂಪ‌ನಿಯವರ ಜೊತೆ ಟ್ಯಾಂಕರ ಮಾಲೀಕರ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದರು. ಒಂದೊಮ್ಮೆ ನ.6 ರ  ಸಭೆಯಲ್ಲಿಯೂ ನಮ್ಮ ನೋವು ಹಾಗೂ  ಸಮಸ್ಯೆಗೆ ಸೂಕ್ತ ಸ್ಪಂದನೆ  ದೊರಕದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ  ಪ್ರಮುಖರಾದ ಕಿರಣ ನಾಯ್ಕ,  ಮಾರುತಿ ನಾಯ್ಕ, ವಿನೋದ ನಾಯ್ಕ, ನಾಗೇಂದ್ರ ತಳೇಕರ, ಪ್ರಶಾಂತ, ಸಂಕೇತ, ಗುರುರಾಜ, ದೇವೇಂದ್ರ, ನಿತಿನ‌ ನಾಯ್ಕ, ಸುಬ್ರಹ್ಮಣ್ಯ, ಕೃಷ್ಣಾನಂದ, ನಾರಾಯಣ  ಮತ್ತಿತರರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button