ಸಂಗಾತಿ ರಂಗಭೂಮಿ ವತಿಯಿಂದ ಕಾನೂನು ಬಾಹೀರವಾಗಿ ಲಾಟರಿ ಮಾರಾಟ: ಹೊರ ಜಿಲ್ಲೆಯಲ್ಲಿ ಆರೋಪಿ ಕೆ. ರಮೇಶನನ್ನು ವಶಕ್ಕೆ ಪಡೆದ ಪೋಲೀಸರು
ಜೋಳಿಗೆ ಅಭಿಯಾನಕ್ಕೆ ಕೈ ಜೋಡಿಸಿದವರಿಗೆ ಢವ ಢವ
ಅಂಕೋಲಾ: ಇತ್ತೀಚೆಗೆ ತಾಲೂಕು ಹಾಗೂ ಜಿಲ್ಲೆಯಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಲಕ್ಕಿ ಡಿಪ್ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ಕೈಗೊಂಡಿದ್ದ ಅಂಕೋಲಾ ಪೋಲೀಸರು , ಹಾವೇರಿ ವಸತಿ ಗೃಹವೊಂದರಲ್ಲಿ ಇದ್ದ ಎನ್ನಲಾದ ಸಂಗಾತಿ ರಂಗಭೂಮಿಯ ಕೆ. ರಮೇಶ ಅವರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನವೆಂಬರ್ 24 ರಂದು ನಡೆದಿದೆ.
ಜೋಳಿಗೆ ಅಭಿಯಾನದ ಹೆಸರಿನಲ್ಲಿ ಹಣ ಮಾಡುವ ಉದ್ದೇಶದಿಂದ ಲಾಟರಿ ಟಿಕೆಟ್ ಗಳನ್ನು ಪ್ರಿಂಟ್ ಮಾಡಿಸಿ, ಲಾಟರಿ ನಂಬರ ತಾಗಿದ್ದಲ್ಲಿ ಬಂಪರ್ ಬಹುಮಾನ ನೀಡುವುದಾಗಿ ಜನರಿಗೆ ನಂಬಿಸಿ, ವಂಚಿಸಿ ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಸಂಗಾತಿ ರಂಗಭೂಮಿಯ ಕೆ ರಮೇಶ್ ಅವರ ಮೇಲೆ ಹೊನ್ನಳ್ಳಿಯ ಬೀರು ಬೊಮ್ಮು ಗೌಡ ವಂಚನೆಯ ದೂರು ದಾಖಲಿಸಿದ್ದರು..
ಅವರು ದೂರಿನಲ್ಲಿ ತಿಳಿಸಿದಂತೆ ತಾಲೂಕಿನ ಬಿಳಿಹೊಂಯ್ಗಿಯ ಕೆ. ರಮೇಶ್ ಅವರು ತಾನು ಪಟ್ಟಣದ ಕೆ ಎಲ್ ಇ ಕಾಲೇಜಿನ ಎದುರು ಶನಿವಾರ ಮಧ್ಯಾಹ್ನ ನಿಂತಿರುವಾಗ , ತನ್ನ ಬಳಿ ಬಂದು ಸಂಗಾತಿ ರಂಗಭೂಮಿಯ ಜೋಳಿಗೆ ಅಭಿಯಾನದ ಕಾರ್ಯಕ್ರಮ ಮಾಡಲು ಲಕ್ಕಿ ಡಿಪ್ ಲಾಟರಿ ಇಟ್ಟಿದ್ದು ,ಒಂದು ಟಿಕೆಟ್ ಲಾಟರಿಯ ಮುಖಬೆಲೆ ₹ 100 ಇದೆ ಎಂದು ಹೇಳಿದಾಗ, ನಾನು ಬೇಡ ಎಂದರೂ ಸಹ ಲಾಟರಿ ಟಿಕೇಟ್ ನ್ನು ಖರೀದಿಸಿದರೆ ಕಾರ್ಯಕ್ರಮ ಮಾಡಲು ಅನುಕೂಲ ಆಗುತ್ತದೆ ಎಂದು ದೂರುದಾರರಿಗೆ ಒತ್ತಾಯ ಪೂರ್ವಕವಾಗಿ 4 ಟಿಕೆಟ್ ನೀಡಿ 400 ರೂ ತೆಗೆದುಕೊಂಡು ಹೋಗಿದ್ದಾವೆ. ನಂತರ ಆತ ನೀಡಿದ ಲಾಟರಿ ಟಿಕೇಟ್ ನೋಡಿದಾಗ ಅದರಲ್ಲಿ ಸಂಗಾತಿ ರಂಗಭೂಮಿ ಅಂಕೋಲಾ ಜೋಳಿಗೆ ಅಭಿಯಾನ ಹೆಸರಿನಲ್ಲಿ ಬಲೇನೋ ಸಿಗ್ಮಾ ಕಾರು, ರಾಯಲ್ ಎನ್ ಫೀಲ್ಡ್ ಬೈಕ್, ಹೀರೋ ಬೈಕ್ ಇತ್ಯಾದಿ 25 ಬಹುಮಾನಗಳ ಯಾದಿಯನ್ನು ನೀಡಲಾಗಿದೆ.
2023ರ ಡಿಸೆಂಬರ್ 30 ರಂದು ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಬರೆದಿತ್ತು.. ಆ ನಂತರ, ಕೆ.ರಮೇಶ ಈತನು ಇದೇ ರೀತಿ ಹಲವರಿಗೆ ಲಾಟರಿ ಟಿಕೆಟ್ ಮಾರಾಟ ಮಾಡಿರುವುದನ್ನು ತಿಳಿದುಕೊಂಡು, ಇದು ಕಾನೂನು ಬಾಹಿರವಾಗಿರುವ ಕಾರಣ ದೂರು ನೀಡುತ್ತಿರುವುದಾಗಿ ಮತ್ತು ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿ ದೂರು ನೀಡಿದ್ದರು. ಅದಾದ ಬೆನ್ನಿಗೇ ನೊಂದಣಾಧಿಕಾರಿಗಳ ಕಾರ್ಯಾಲಯದ ಪರವಾಗಿ, ಸಂಗಾತಿ ರಂಗಭೂಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ಸಲ್ಲಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿತನ ಪತ್ತೆಗೆ ಬಲೆ ಬೀಸಿದ್ದು,ಪ್ರಕರಣದ ತನಿಖೆ ಚುರುಕುಗಳಿಸಿದ್ದರು. ಈ ವೇಳೆ ಆರೋಪಿತನು ಹುಬ್ಬಳ್ಳಿ -ಹಾವೇರಿ ಮತ್ತಿತರಡೆ ಹೋಗಿ ತಲೆಮೆರೆಸಿಕೊಂಡಿದ್ದ ಎನ್ನಲಾಗಿದ್ದು,ಆತನನ್ನು ವಶಕ್ಕೆ ಪಡೆದ ಪೊಲೀಸರು,ನ್ಯಾಯಾಧೀಶರ ಎದುರು ಹಾಜರುಪಡಿಸಿ,ಕಾನೂನು ಕ್ರಮ ಮುಂದುವರಿಸಿದ್ದಾರೆ. ಹಾವೇರಿ ಲಾಡ್ಜ ಒಂದರಲ್ಲಿದ್ದ ಆರೋಪಿತನನ್ನು ಪೋಲೀಸರು ವಶಕ್ಕೆ ಪಡೆದ ವೇಳೆ, ಅಲ್ಲಿಯೂ ಆತನ ಬಳಿ ಕೆಲ ಪ್ರಮಾಣದ ಲಾಟರಿ ಟಿಕೆಟ್ ಬುಕ್‌ಗಳು ಇದ್ದವು ಎನ್ನಲಾಗಿದ್ದು,ಪೋಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ತಲಾ 100 ರೂ ಗಳ 1 ಲಾಟರಿ ಟಿಕೇಟ್ ನಂತೆ ಒಂದು ಪುಸ್ತಕದಲ್ಲಿ 25 ಲಾಟರಿ ಟಿಕೇಟ್ ಇದೆ ಎನ್ನಲಾಗಿದ್ದು, ಮೊದಲ ಹಂತದಲ್ಲಿ ಅಂದಾಜು 1 ಕೋಟಿ ರೂ ಮೊತ್ತದ ಲಾಟರಿ ಟಿಕೆಟ್ ಗಳನ್ನು ಮುದ್ರಿಸಿ,ಬೇರೆ ಬೇರೆಯವರಿಗೆ ನೀಡಿ ಮಾರಾಟ ಮಾಡಲಾಗಿತ್ತು ಎನ್ನಲಾಗಿದ್ದು , ಎರಡನೇ ಹಂತದಲ್ಲಿ ಮತ್ತೆ ಅಂದಾಜು 50 ಲಕ್ಷ ರೂ ಮೊತ್ತದ ಲಾಟರಿ ಟಿಕೇಟ್ ಮುದ್ರಿಸಿ ಅವುಗಳಲ್ಲಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ಗಳನ್ನು ಅವರಿವರಿಗೆ ನೀಡಿದ್ದರು ಎನ್ನಲಾದ ವೇಳೆ, ಸೋಲೀಸ್ ದೂರು ದಾಖಲಾಗಿ, ಲಾಟರಿ ಮಾರಾಟಕ್ಕೆ ಹಿನ್ನಡೆಯಾಗಿತ್ತು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಂತಿದೆ.
ಆದರೂ ಇದಾವುದೂ ಅರವಿರದ ತಾಲೂಕಿನ ಗಡಿ ಭಾಗದಲ್ಲಿರುವ ಗ್ರಾಮೀಣ ಪ್ರದೇಶದ ಮಹಿಳೆ ಓರ್ವಳು, ತಾನೂ ಯಾರದೋ ಒತ್ತಾಯಕ್ಕೆ ತೆಗೆದುಕೊಂಡಿದ್ದ 25 ಲಾಟರಿ ಟಿಕೆಟ್ ಗಳಲ್ಲಿ 1-2 ನ್ನು ಮಾರಲು ಹೋಗಿ, ಕಾನೂನು ಬಾಹೀರ ಲಾಟರಿ ಪ್ರಕರಣ ಸುದ್ದಿ ಮಾಧ್ಯಮಗಳಲ್ಲಿ ಬಂದ ಬಗ್ಗೆ ಸ್ಥಳೀಯರಿಂದ ಕೇಳಿ ತಿಳಿದು,ಲಾಟರಿ ಮಾರಾಟ ಕೈಬಿಟ್ಟು ಮನೆಗೆ ವಾಪಸ್ ಆದಳು ಎನ್ನಲಾಗಿದೆ.
ಒಟ್ಟಾರೆಯಾಗಿ ಸಂಗಾತಿ ರಂಗಭೂಮಿಯ ಈ ಲಾಟರಿ ಪ್ರಕರಣ ತಾಲೂಕಿನಲ್ಲಿ ನಾನರೀತಿಯ ಚರ್ಚೆಗೆ ಕಾರಣವಾಗಿದ್ದು, ಕೆಲವರು ಈ ಪ್ರಕಣದಲ್ಲಿ ಲಾಟರಿ ಮಾರಾಟ ದ ವಿಷಯ ಅದೇನೆ ಇದ್ದರೂ ಕೆ. ರಮೇಶ .ಸಾರಥ್ಯದ ಸಂಘಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮಾತನಾಡಿಕೊಂಡಂತೆ ಈ ಹಿಂದಿನ ವರ್ಷದಲ್ಲಿಯೂ ಲಾಟರಿ ಮಾರಾಟ ಮಾಡಿ ಹಣ ಸಂಗ್ರಹಿಸಿದ್ದ ಇದೇ ಸಂಘಟನೆಯವರು, ಸರಿಯಾದ ಡ್ರಾ ನಡೆಸಿದಂತಿಲ್ಲ, ಹೀಗಿರುತ್ತ ಈಗ ಮತ್ತೆ ಕೋಟಿ ಕೋಟಿ ರೂ ಜೋಳಿಗೆ ಅಭಿಯಾನದ ಲಾಟರಿ ಹೆಸರಿನಲ್ಲಿ ಹಣ ಮಾಡಲು ಹೊರಟಿರುವುದು ಸರಿಯಲ್ಲ ಎಂದಂತಿದೆ. ಕರ್ನಾಟಕದಲ್ಲಿ ಲಾಟರಿ ಟಿಕೆಟ್ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ,ಸಂಘಟನೆಗೆ ಸಹಕಾರಿಯಾಗಲಿ ಅಥವಾ ತಮ್ಮ ವೈಯಕ್ತಿಕ ಪ್ರಚಾರ, ಒತ್ತಡಕ್ಕೆ , ಕಮೀಷನ್ ಆಶೆಗೆ ಹೀಗೆ ಹತ್ತಾರು ಕಾರಣಗಳಿಂದ ಜೋಳಿಗೆ ಅಭಿಯಾನಕ್ಕೆ ಕೈ ಜೋಡಿಸಿದ್ದ ಕೆಲ ಸರ್ಕಾರಿ ನೌಕರರು, ಮತ್ತಿತರರು ಒಳಗಿಂದ ಒಳಗೇ ಲಾಟರಿ ಡ್ರಾ ಆಗಲಿ ಬಿಡಲಿ ತಮ್ಮ ಅದೃಷ್ಟ ಕೈ ಕೊಡದಿರಲಿ ಎಂದು ಪ್ರಾರ್ಥಿಸಿದಂತಿದೆ.
ಯಾರದೋ ಒತ್ತಾಯಕ್ಕೆ ಲಾಟರಿ ಟಿಕೆಟ್ ಮಾರಾಟ ಮಾಡಲು ಹೋದ ಕೆಲ ಕಾರ್ಯಕರ್ತೆಯರು , ತನಿಖೆಯ ಪರಿಣಾಮ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗದರಲೆಂದು ಅವರಿವರ ಬಳಿ ಕಾನೂನು ಕ್ರಮಗಳ ಬಗ್ಗೆ ಹೆದರಿಕೆಯಿಂದಲೇ ವಿಚಾರಿಸುತ್ತಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪಟ್ಟಣದ ಪ್ರಮುಖ ಸ್ಥಳದಲ್ಲಿ ಲಾಟರಿ ಕೌಂಟರ್ ಸೇಲ್ ಮಾರಾಟಕ್ಕೆ ಪುರಸಭೆ ಅದೇ ಕೆ ಅನುಮತಿ ನೀಡಿತ್ತು ? ಇಲ್ಲವೇ ಬೇರೆ ಉದ್ದೇಶಕ್ಕೆ ನೀಡಲಾದ ಅನುಮತಿ ದುರುಪಯೋಗವಾಯಿತೇ ? ಅಥವಾ ಕಣ್ಣಿದ್ದೂ ಪುರಸಭೆ ಆಡಳಿತ ಲಾಟರಿ ಕಾಂಚಾಣಕ್ಕೆ ಕುರುಡಾಯಿತೇ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬಂದಂತಿದೆ.
ಒಟ್ಟಿನಲ್ಲಿ ಸಾರ್ವಜನಿಕರು ಅಲ್ಲಲ್ಲಿ ತಮಗೆ ಸರಿ ಕಂಡಿದ್ದನ್ನು ಆಡಿ ಕೊಂಡರೂ ಸಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸ್ ತನಿಖೆಯಿಂದ ನಿಖರ ಮಾಹಿತಿ ಮತ್ತು ಸತ್ಯಾಂಶ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ