ಅಂಕೋಲಾ: ತಾಲೂಕಿನ ಬೇಳಾಬಂದರ ರಸ್ತೆಯಂಚಿಗೆ ಹೊಂದಿಕೊಂಡಿರುವ ಕನಸಿಗದ್ದೆ – ಪಳ್ಳಿಕೇರಿ ಗಡಿ ವ್ಯಾಪ್ತಿಯಲ್ಲಿ ವಾಸವಾಗಿದ್ದ, ವಕೀಲ ಪಾಂಡು ಆರ್ ನಾಯ್ಕ (52), ಮಂಗಳವಾರ ಅಕಾಲಿಕ ಸಾವಿಗೀಡಾಗಿದ್ದಾರೆ. ಆಕಸ್ಮಿಕವಾಗಿ ಕಾಣಿಸಿಕೊಂಡಿತ್ತು ಎನ್ನಲಾದ ಎದೆ ನೋವಿನ ತಪಾಸಣೆಗಾಗಿ, ತನ್ನ ಮನೆಯಿಂದ ಬೈಕ್ ನಲ್ಲಿ ಮಡದಿಯೊಂದಿಗೆ ತಾಲೂಕಾ ಸರಕಾರಿ ಆಸ್ಪತ್ರೆಗೆ ಹೋದವರು, ಅಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಬಳಪಟ್ಟು, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸುವ ಪೂರ್ವ ಅಂಬುಲೆನ್ಸ್ ಏರುತ್ತಿರುವಾಗ ಕುಸಿದರು ಎನ್ನಲಾಗಿದ್ದು, ನಂತರ ಅಂಬುಲೆನ್ಸ್ ಮೂಲಕ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿರುವ ವೇಳೆಗಾಗಲೇ ದಾರಿ ಮಧ್ಯೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ,
ಅವರನ್ನು ಪರೀಕ್ಷಿಸಿದ ವೈದ್ಯರು ಮತ್ತು ಸಿಬ್ಬಂದಿಗಳು,ವಕೀಲ ಪಾಂಡು ನಾಯ್ಕ ಮೃತ ಪಟ್ಟಿರುವ ಕುರಿತು ಧೃಡೀಕರಿಸಿದರು ಎನ್ನಲಾಗಿದೆ. ನಂತರ ಕಾರವಾರದಿಂದ ಮೃತ ದೇಹವನ್ನು ಅಂಕೋಲಾದ ಬಂದರ ರೋಡ್ ಹತ್ತಿರದ ಮನೆಗೆ ತರಲಾಗಿದ್ದು,ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.. ಮೃತ ಪಾಂಡು ವಕೀಲ ,ತನ್ನ ವೃತ್ತಿ ಬದುಕಿನ ಜೊತೆಯಲ್ಲಿ ಸಾಮಾಜಿಕ ಧಾರ್ಮಿಕ, ರಾಜಕೀಯ ಮತ್ತಿತರ ರಂಗಗಳಲ್ಲಿ ಗುರುತಿಸಿಕೊಂಡಿದ್ದಲ್ಲದೇ, ತನ್ನ ಹಾಸ್ಯ ಮಿಶ್ರಿತ ಮಾತುಗಾರಿಕೆಯ ಮೂಲಕವೂ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ, ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು.
ಇವರ ಆಕಾಲಿಕ ನಿಧನದ ಸುದ್ದಿ ಕೇಳಿ ವಕೀಲರ ಸಂಘದ ಹಿರಿ-ಕಿರಿಯ ಸದಸ್ಯರು, ಕನಸಿಗದ್ದೆ, ಪಳ್ಳಿಕೇರಿ, ಬೇಳಾ ಬಂದರ ಸುತ್ತಮುತ್ತಲ ಗ್ರಾಮಸ್ಥರು,ವಿವಿಧ ಸಮಾಜದ, ಹಾಗೂ ಪಕ್ಷದ ಇತರೆ ಮುಖಂಡರು,ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದುಕೊಂಡರು. ಮೃತರಿಗೆ , ಪತ್ನಿ , ಅವಳಿ ಪುತ್ರಿಯರು, ಓರ್ವ ಮಗ ಇದ್ದಾರೆ ಮೃತ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಾಗಿದೆ.
ಖಾಜಿ ರಾಮಾ ನಾಯ್ಕ ಕುಟುಂಬದ ಕುಡಿಯಾಗಿದ್ದ ಪಿ.ಆರ್. ನಾಯ್ಕ ಸುಮಾರು ಎರಡು ದಶಕಗಳಿಂದ ವಕೀಲ ವೃತ್ತಿ ಮಾಡಿ ಹೆಸರಾಗಿದ್ದು, ಅವರ ಆಕಾಲಿಕ ನಿಧನಕ್ಕೆ ಶಾಸಕ ಸತೀಶ ಸೈಲ್ ಸೇರಿದಂತೆ ಹಲವು ಗಣ್ಯರು, ತಾಲೂಕಾ ವಕೀಲರ ಸಂಘದ ಅಧ್ಯಕ್ಷ ವಿನೋದ ಶ್ಯಾನಭಾಗ ಸೇರಿದಂತೆ ಪದಾಧಿಕಾರಿ ಗಳು, ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ