ಹನಿಟ್ರ‍್ಯಾಪ್ ಮೂಲಕ ಮಹಿಳೆಯರನ್ನು ಬಳಸಿಕೊಂಡು ವ್ಯಾಪಾರಿಯ ದರೋಡೆ ಮಾಡಿದ ಇಬ್ಬರು ಆರೋಪಿಗಳ ಬಂಧನ
ಭಟ್ಕಳ: ಹನಿಟ್ರ‍್ಯಾಪ್ ಮೂಲಕ ಇಬ್ಬರು ಮಹಿಳೆಯರನ್ನು ಬಳಸಿಕೊಂಡು ಭಟ್ಕಳದ ಅಂಗಡಿ ವ್ಯಾಪರಿಯೋರ್ವನ ನಗದು ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿದ ಆರೋಪದಡಿಯಲ್ಲಿ ಇಬ್ಬರು ಖತರ್ನಾಕ್ ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆ ಮಾಡಿದ ಆರೋಪಿಗಳು ಫರ್ಜಾನಾ ಹಾಗೂ ಕಾರು ಚಾಲಕನ ಹೆಸರು ಮುರ್ಜುಜಾ ಎಂದು ತಿಳಿದು ಬಂದಿದ್ದು , ಇನ್ನಿಬ್ಬರ ಹೆಸರು ವಿಳಾಸ ತಿಳಿದು ಬಂದಿಲ್ಲ.
ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದು ಫೋನ್ ನಂಬರ್ ಅನ್ನು ಪಡೆದುಕೊಂಡು ರಾತ್ರಿ ಬಹಳ ಸಲ ಕರೆ ಮಾಡಿ ತಿರುಗಾಡಲು ಹೋಗುವ ಎಂದು ತಿಳಿಸಿ ಆತನನ್ನು ಹನೀಫಾಬಾದ್ ಕ್ರಾಸ್‌ಗೆ ಕರೆಯಿಸಿಕೊಂಡು ಹೋಗಿದ್ದರು. ಬಳಿಕ ಸ್ವಿಪ್ಟ್ ಕಾರಿನಲ್ಲಿ ಚಾಲಕ ಸೇರಿದಂತೆ ಇಬ್ಬರು ಮಹಿಳೆಯರು ಇನ್ನೋರ್ವ ಪುರುಷ ಸೇರಿ ಮುರ್ಡೇಶ್ವರ ಸಮೀಪ ಕರೆದುಕೊಂಡು ಹೋಗಿ ಅಲ್ಲಿ ನಾಲ್ವರು ಸೇರಿ ಹಲ್ಲೆ ಮಾಡಿ, ದರೋಡೆ ಮಾಡಿದ್ದಲ್ಲದೇ ಹೊನ್ನಾವರ ಸಮೀಪ ಕರೆದುಕೊಂಡು ಹೋಗಿ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡು ತನ್ನಿಂದ ತಪ್ಪಾಗಿದೆ. ಮಹಿಳೆಯ ಮೈಮೇಲೆ ಕೈಮಾಡಿದ್ದೇನೆ ಎಂತೆಲ್ಲಾ ಹೇಳಿಸಿಕೊಂಡು ದೂರು ನೀಡಿದರೆ, ವೀಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನಂತರ ರಾತ್ರಿ 1.30ರ ಸುಮಾರಿಗೆ ವೆಂಕಟಾಪುರ್ ಸೇತುವೆಯ ಮೇಲೆ ಬೀಳಿಸಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಚಂದನ ಗೋಪಾಲ ವಿ., ಅವರು ತನಿಖೆ ನಡೆಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕುಂದಾಪುರದ ಸಂಕೇತ ತಿಮ್ಮಪ್ಪ ಪೂಜಾರಿ ಎನ್ನುವವರು ದೂರು ನೀಡಿದ್ದು , ದೂರಿನಲ್ಲಿ ಪುರವರ್ಗದ ಮುರ್ತುಜಾ ಮತ್ತು ಇನ್ನಿಬ್ಬರು ಅಪರಿಚತರು ಗಾರೆ ಕೆಲಸ ಮಾಡುವ ಪಿರ್ಯಾದಿಯನ್ನು ಹಡೀನ್‌ನಲ್ಲಿ ಸಿಮೆಂಟ್ ದಾಸ್ತಾನು ಮಳಿಗೆ ತೋರಿಸುತ್ತೇನೆ ಎಂದು ಕರೆದು ಕೊಂಡು ಹೋಗಿ ಹಡೀನ್ ಹತ್ತಿರ ಆರೋಪಿತರು ಮೂವರು ಸೇರಿ ಪಿರ್ಯಾದಿಯನ್ನು ಹಿಡಿದುಕೊಂಡು ಕುತ್ತಿಗೆಯಲ್ಲಿದ್ದ 10 ಗ್ರಾಮ ತೂಕದ 60,000/- ಮೌಲ್ಯದ ಚಿನ್ನದ ಚೈನು, ಎಂ.ಐ. ಕಂಪೆನಿಯ ನೋಟ್9 ಪ್ರೋ ಮೊಬೈಲ್ 20,000/- ಮೌಲ್ಯದ್ದನ್ನು ಬಲವಂತವಾಗಿ ಕಿತ್ತುಕೊಂಡು ಆತನಿಗೆ ದೂಡಿ ಹಾಕಿ ಎರಡು ಸ್ಕೂಟರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ಇನ್ಸಪೆಕ್ಟರ್ ಚಂದನ ಗೋಪಾಲ ವಿ, ಅವರು ತನಿಖೆ ನಡೆಸಿದ್ದಾರೆ.
ಎರಡೂ ಪ್ರಕರಣದ ಆರೋಪಿಗಳಾದ ಪುರವರ್ಗದ ನಿವಾಸಿಗಳಾದ ಮುರ್ತುಜಾ ಹಾಗೂ ರಿಜ್ವಾನ್ ಇಬ್ಬರನ್ನೂ ಬಂಧಿಸಲಾಗಿದ್ದು ದರೋಡೆ ಮಾಡಿದ ವಸ್ತುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಇನ್ನಿಬ್ಬರು ಮಹಿಳೆಯರ ಕುರಿತು ಸುಳಿವು ದೊರೆತಿದ್ದು ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ