ಮಗ ಶಾಲೆಗೆ ಹೋಗಿದ್ದ: ಮನೆಯಲ್ಲಿದ್ದ ಐವರು ಕೂಲಿ ಕೆಲಸಕ್ಕೆ ತೆರಳಿದ್ದರು: ಸ್ಫೋಟದ ವೇಳೆ ಸ್ವಲ್ಪದರಲ್ಲೇ ತಪ್ಪಿತು ಭಾರೀ ದುರಂತ
ಕುಮಟಾ: ತಾಲೂಕಿನ ಹೆಗಡೆಯ ಮೇಲಿನಕೇರಿ ಗುನಗನಕೊಪ್ಪದ ಮನೆಯೊಂದರಲ್ಲಿ ಗೃಹ ಬಳಕೆಯ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಭಸ್ಮಗೊಂಡು ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ ನಡೆದಿದ್ದು, ಆಸರೆಯಾಗಿದ್ದ ಮನೆಯನ್ನು ಕಳೆದುಕೊಂಡಿದ್ದ ಕುಟುಂಬ ಕಂಗಾಲಾಗಿದೆ. ಈ ಸ್ಫೋಟದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಕುಟುಂಬದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಒಂದು ಮನೆಯಲ್ಲಿ ಆರು ಮಂದಿ ವಾಸವಿರುತ್ತಿದ್ದು, ಜೀವನ ಸಾಗಿಸುವುದಕ್ಕಾಗಿ ಪ್ರತಿನಿತ್ಯ ಕೂಲಿನಾಲಿ ಮಾಡಿಕೊಂಡು ಬದುಕುತ್ತಿದ್ದರು. ಕುಟುಂಬದ ಐವರು ಕೂಲಿ ಕೆಲಸಕ್ಕಾಗಿ ಹೋಗಿದ್ದರು. ಓರ್ವ ಪುತ್ರ ಶಾಲೆಗೆ ಹೋಗುತ್ತಿದ್ದ. ಹೀಗಾಗಿ ಮನೆಯಲ್ಲಿ ಯಾರೂ ಇರಲಿಲ್ಲ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಎಲ್ಲಿಯೋ ಬಾಂಬ್ ಸಿಡಿದಂತೆ ಶಬ್ಧವಾಗಿದ್ದು, ಗುನಗನಕೊಪ್ಪದ ಭಾಗದ ಜನತೆ ಒಮ್ಮೆಲೆ ಬೆಚ್ಚಿಬಿದ್ದಿದ್ದರು.
ಆಚೆಈಚೆ ಬಂದು ನೋಡುತ್ತಿದ್ದಂತೆ ಮನೆಯೊಂದರಲ್ಲಿ ಮುಗಿಲೆತ್ತರಕ್ಕೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡು ಅಕ್ಕಪಕ್ಕದ ಜನರು ಕೂಗಿಕೊಂಡಿದ್ದಾರೆ. ಸಿಲೆಂಡರ್ ಸ್ಫೋಟಗೊಂಡು ಪೂರ್ತಿ ಮನೆಯನ್ನೇ ಬೆಂಕಿ ಆವರಿಸಿರುವುದರಿಂದ ಸ್ಥಳೀಯರು ಹರಸಾಹಸಪಟ್ಟರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ಹಾಗೂ ಕುಮಟಾ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದು, ಅಷ್ಟರಲ್ಲಿ ಮನೆ ಚಿತ್ರಣವೇ ಬೇರೆಯಾಗಿತ್ತು.
ಹೆಂಚಿನ ಹೊದಿಕೆಯ ಮನೆ, ಮನೆಯಲ್ಲಿದ್ದ ಬೇಳೆ-ಕಾಳುಗಳು, ಅಗತ್ಯ ದಾಖಲಾತಿಗಳು. ಪೀಠೋಪಕರಣ ಎಲ್ಲವೂ ಸುಟ್ಟು ಕರಕಲಾಗಿದ್ದವು. ಸ್ಥಳಕ್ಕೆ ತಹಶೀಲ್ದಾರ್ ಸತೀಶ ಗೌಡ, ಸೇರಿದಂತೆ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತಾಗಿ ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿದ ಮನೆಯ ಮಾಲಿಕರು ತಮ್ಮ ಅಳಲು ತೊಡಿಕೊಂಡಿದ್ದಾರೆ. ಜೊತೆಗೆ ಸೂಕ್ತ ಪರಿಹಾರಕ್ಕಾಗಿ ವಿನಂತಿಸಿಕೊoಡಿದ್ದಾರೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ