ಗ್ಯಾಸ್ ಏಜೆನ್ಸಿಗೆ ನುಗ್ಗಿದ ಮುಸುಕು ದಾರಿ ಕಳ್ಳರು: ಬಾಗಿಲು ಒಡೆದು 5 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿ
ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಮಣ್ಕುಳಿ ಪುಷ್ಪಾಂಜಲಿ ಕ್ರಾಸ್ ಸಮೀಪದ ಶ್ರೀ ಮೂಕಾಂಬಿಕಾ ಭಾರತ್ ಗ್ಯಾಸ್ ಏಜೆನ್ಸಿಗೆ ನುಗ್ಗಿದ ಮೂವರು ಮುಸುಕು ದಾರಿ ಕಳ್ಳರು ಬಾಗಿಲು ಒಡೆದು 5 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾಗಿದ್ದು ಕಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ದಿನಕರ ವಿಠಲ್ ಕಿಣಿ ಮಾಲೀಕತ್ವದ ಗ್ಯಾಸ್ ಏಜೆನ್ಸಿ ಇದಾಗಿದೆ. ಕಳೆದ ತಿಂಗಳು ಇದೆ ಭಾಗದಲ್ಲಿ ಗ್ಯಾರೇಜ್ ಒಂದರಲ್ಲಿ ಕಳ್ಳತನ ಘಟನೆಯಾದ ಬಳಿಕ ಏಜೆನ್ಸಿ ಮಾಲೀಕರು ತಮ್ಮ ದಿನ ನಿತ್ಯದ ವ್ಯವಹಾರದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಆದರೆ ಅತಿಯಾದ ಕೆಲಸದ ಒತ್ತಡದಿಂದ ಹಣವನ್ನು ತಮ್ಮ ಗ್ಯಾಸ್ ಏಜೆನ್ಸಿ ಅಂಗಡಿಯಲ್ಲೇ ಇಟ್ಟು ಬಾಗಿಲು ಹಾಕಿ ತೆರಳಿದ್ದರು.
ಮಾಲೀಕರ ದುರಾದ್ರಷ್ಟವೋ ಕಳ್ಳರ ಅದ್ರಷ್ಟವೋ ಗೊತ್ತಿಲ್ಲ . ಬುದುವಾರ ಬೆಳಗಿನ ಜಾವದ ವೇಳೆಯಲ್ಲಿ ಮೂವರು ಕಳ್ಳರು ಮುಸುಕು ಹಾಗೂ ಕೈಗೆ ಗ್ಲೊಜ್ ಧರಿಸಿ ಗ್ಯಾಸ್ ಏಜೆನ್ಸಿಯ ಬೀಗ ಮುರಿದು ಒಳ ನುಗ್ಗಿದ್ದಾರೆ. ಅದರಲ್ಲಿ ಓರ್ವ ಹೊರಗಡೆ ನಿಂತು ಕಾಯುತ್ತಿದ್ದರೆ, ಇನ್ನಿಬ್ಬರು ಒಳಗೆ ನುಗ್ಗಿ ನೇರವಾಗಿ ಏಜೆನ್ಸಿ ಮಾಲೀಕನ ಚೇಂಬರ್ ಬಾಗಿಲು ಮುರಿಯಲು ಪ್ರಯತ್ನಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಇರುವುದರಿಂದ ಕೊನೆಗೆ ಬಾಗಿಲಿಗೆ ಅಳವಡಿಸಿದ ಗ್ಲಾಸ್ ಒಡೆದು ಚೇಂಬರನಲ್ಲಿದ್ದ ಸುಮಾರು 5 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.
ಮುಂಜಾನೆ ಗ್ಯಾಸ್ ಏಜೆನ್ಸಿ ಗೆ ಬಂದ ಮಾಲೀಕರು, ಕಳ್ಳತನವಾಗಿರುವ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ನಗರ ಠಾಣೆ ಪಿ.ಎಸ್.ಐ ಯಲ್ಲಪ್ಪ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ