Important
Trending

ಪೊಲೀಸನ ಮನೆಯಲ್ಲೇ ಬಂಗಾರ ಕಳ್ಳತನ ಮಾಡಿದ ಚಾಲಾಕಿಗಳು – ಬಟ್ಟೆ ಹೊಲಿಸಲು ಮನೆಗೆ ಬರುತ್ತಿದ್ದವರಿಂದಲೇ ಕೃತ್ಯ: ಕೊನೆಗೂ ಸಿಕ್ಕಿಬಿದ್ದ ಕಳ್ಳಿಯರು

ಅಂಕೋಲಾ: ಇಲ್ಲಿನ ಮುಖ್ಯ ಠಾಣೆಯಲ್ಲಿ ಎ ಎಸ್ ಐ ಆಗಿರುವ ಗಡೇರ ಮನೆಯಲ್ಲಿ ಬಂಗಾರದ ಆಭರಣ ಕಳ್ಳತನ ಮಾಡಿದ ಇಬ್ಬರು ಮಹಿಳೆಯರನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೋಟೆವಾಡ ನಿವಾಸಿ ರೋಮನಾ ಮೌಲಾಲಿ ತಂದೆ ಹುಸೇನ್ ಸಾಬ್ (32) , ಕಾರವಾರ ಅಮದಳ್ಳಿಯ ಮಹಾದೇವವಾಡಾ ನಿವಾಸಿ ಸುಮೇಧಾ ಡಿ ಮಹಾಲೆ(27) ಬಂಧಿತ ಆರೋಪಿಗಳಾಗಿದ್ದಾರೆ.

ಪಟ್ಟಣದ ಕೋಟೆವಾಡ ರಸ್ತೆ – ಶೆಡಗೇರಿಯಲ್ಲಿ ಮನೆ ಹೊಂದಿರುವ ಎ.ಎಸ್. ಐ ಗಡೇರ ಅವರ ಹೆಂಡತಿ ಸುಮಿತ್ರಾ ಮಹಾಬಲೇಶ್ವರ ಗಡೇರ, ತಮ್ಮ ಮನೆಯಲ್ಲಿ ಟೇಲರಿಂಗ್ ಕೆಲಸ ಮಾಡುತ್ತಿದ್ದು, ಕೋಟೆವಾಡದ ಮಹಿಳೆ ಮತ್ತು ಅಮದಳ್ಳಿಯ ಯುವತಿ ಬಟ್ಟೆ ಹೊಲಿಸಲು ಆಗಾಗ ಬರುತ್ತಿದ್ದರು ಎನ್ನಲಾಗಿದೆ.

ಡಿಸೆಂಬರ್ 20 ರಂದು ಬೆಳಿಗ್ಗೆ 8-45 ರಿಂದ 11 – 00 ಘಂಟೆ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿದ್ದು,ಎ.ಎಸ್. ಐ ಅವರ ಪತ್ನಿ ತಮ್ಮ ಮನೆಯ ಹಾಲ್ ನಲ್ಲಿ ಟಿಪಾಯಿಯ ಮೇಲೆ ಇಟ್ಟಿದ್ದ ಅಂದಾಜು 1.30 ಲಕ್ಷ ಮೌಲ್ಯದ 34 ಗ್ರಾಂ ತೂಕದ ಎರಡು ಬಂಗಾರದ ಬಳೆ ಮತ್ತು 15 ಸಾವಿರ ರೂಪಾಯಿ ಮೌಲ್ಯದ 3ಗ್ರಾಂ ತೂಕದ ಉಂಗುರ ಕಳ್ಳತನ ವಾಗಿರುವ ಕುರಿತು ತಡವಾಗಿ ದೂರು ದಾಖಲಿಸಲಾಗಿತ್ತು .

ಅಂಕೋಲಾ ಪೊಲೀಸರು ತನಿಖೆ ನಡೆಸಿ, ಸಂಶಯದ ಆಧಾರದಲ್ಲಿ ಮಹಿಳೆಯರ ವಿಚಾರಣೆ ನಡೆಸಿದಾಗ ಈ ಮೇಲಿನ ಆರೋಪಿತರು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ, ಬೇರೆಡೆ ಅಡವಿಟ್ಟು ಹಣ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪಿ.ಎಸ್.ಐ ಸುಹಾಸ ಪ್ರಕರಣ ದಾಖಲಿಸಿದ್ದಾರೆ.

ಆರೋಪಿತರು ಪಟ್ಟಣದ ಅಂಬಾರಕೊಡ್ಲ ರಸ್ತೆಯ ಕಿರು ಓಣಿಯೊಂದರ ಪಕ್ಕ ಬಾಡಿಗೆ ಅಂಗಡಿಯಲ್ಲಿ ಚಿಕ್ಕ ಮಕ್ಕಳ ಬಟ್ಟೆ ವ್ಯಾಪಾರ ನಡೆಸುತ್ತಿದ್ದು, ತಮ್ಮ ವ್ಯಾಪಾರ ನಷ್ಟ ಹೊಂದಿಸಿಕೊಳ್ಳಲು ಇಲ್ಲವೇ ಮೋಜು ಮಸ್ತಿಗಾಗಿ ಪೊಲೀಸರ ಮನೆಯಲ್ಲಿಯೇ ಕಳ್ಳತನ ಮಾಡಿದ್ದಲ್ಲದೇ, ತದನಂತರವಾದರೂ ಪರಿಚಿತ ಅದೇ ಮನೆಯಲ್ಲಿ ತಪ್ಪೊಪ್ಪಿಕೊಳ್ಳುವ ಅವಕಾಶವಿದ್ದರೂ ಅದನ್ನು ಮಾಡದೇ , ಹುಂಬ ಧೈರ್ಯ ತೋರಿಸಿದ ತಪ್ಪಿಗೆ, ಕಾನೂನಿನ ಬಲೆಗೆ ಕೊನೆಗೂ ಬಿದ್ದು ಪರಿತಪಿಸುವಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು, ಇದೇ ವೇಳೆ ಎ ಎಸ್ ಐ ಹೆಂಡತಿಯಾಗಿಯೂ ಮನೆಯ ಹಾಲ್ ನಲ್ಲಿ ಟಿಪಾಯಿ ಮೇಲೆ ಲಕ್ಷಾಂತರ ಮೌಲ್ಯದ ಚಿನ್ನ ಇಟ್ಟು ಅಲಕ್ಷ ಮಾಡಿದ್ದು ಸರಿಯಲ್ಲ ಎನ್ನುವ ಮಾತು ಕೇಳಿ ಬಂದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button