ಅಂಕೋಲಾ : ಯಲ್ಲಾಪುರ – ಅಂಕೋಲಾ ಮಾರ್ಗ ಮಧ್ಯ ಸಂಭವಿಸಿದ ಭೀಕರ ರಸ್ತೆ ಅಪಘಾತ ಒಂದರಲ್ಲಿ,ರಸ್ತೆ ಅಂಚಿನ ಮರ ಒಂದಕ್ಕೆ ಡಿಕ್ಕಿಪಡಿಸಿಕೊಂಡ ಲಾರಿ ಚಾಲಕ ಜೀವನ್ಮರಣದ ನಡುವೆ ಹೋರಾಡಿ ಕೊನೆಗೂ ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ತಾಲೂಕಿನ ಹೊನ್ನಳ್ಳಿ ಸಮೀಪ ಸಂಭವಿಸಿದೆ.
ಸಿರಾಮಿಕ್ ತುಂಬಿ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಕಡೆ ತೆರಳುತ್ತಿದ್ದಾಗ ದಾರಿ ಮಧ್ಯೆ ಹೊನ್ನಳ್ಳಿ ಬಳಿ ಅದಾವುದೋ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿದ ವಾಹನ, ಹೆದ್ದಾರಿ ಅಂಚಿನ ದೊಡ್ಡದಾದ (ಹಾಲೆ ) ಮರಕ್ಕೆ ಡಿಕ್ಕಿಯಾದ ಪರಿಣಾಮ, ಲಾರಿಯ ಮುಂಭಾಗ ತೀವ್ರ ಜಖಂ ಗೊಂಡು, ಚಾಲಕ ವಾಹನ ಮತ್ತು ಮರದ ಸಡುವೆ ಸಿಲುಕಿ ನಂತರ ಕೊನೆಯುಸಿರೆಳೆದ ಎನ್ನುತ್ತಾರೆ ಕೆಲ ದಾರಿಹೋಕರು.
ಹೆದ್ದಾರಿ ಅಂಚಿಗೆ ಸರಿಯಾಗಿ ಮಣ್ಣು ಹಾಕಿ ಸಮತಟ್ಟುಗೊಳಿಸಿದೇ ಇರುವುದರಿಂದಲ್ಲೂ ಹೆದ್ದಾರಿ ಡಾಂಬರ ರಸ್ತೆ ಅಂಚಿಗೆ ಅಪಾಯಕಾರಿ ರೀತಿ ತಗ್ಗು ನಿರ್ಮಾಣವಾಗಿ ಬೈಕ್ ಸವಾರರು ಸೇರಿದಂತೆ ಇತರರಿಗೆ ತೀವ್ರ ಅಪಾಯಕಾರಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಲಾರಿ ಅಪಘಾತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರು ಆಗಮಿಸಿ , ಕ್ರೇನ್ ಬಳಸಿ ಬಹು ಹೊತ್ತಿನವರೆಗೆ ಕಾರ್ಯಾಚರಣೆ ನಡೆಸಿದರಾದರೂ, ಜಖಂ ಗೊಂಡ ವಾಹನ ಮತ್ತು ಮರದ ನಡುವೆ ಸಿಲುಕಿ ಕೊಂಡಿದ್ದ ಮೃತದೇಹ ಹೊರತೆಗೆಯಲು ಹರ ಸಾಹಸ ಪಟ್ಟರು.
ನಂತರ ಇನ್ನೊಂದು ಕ್ರೇನ್ ಬಳಸಿ ಅಂತೂ ಇಂತೂ ಅಪಘಾತ ಗೊಂಡ ವಾಹನವನ್ನು, ಸ್ವಲ್ಪ ಪಕ್ಕಕ್ಕೆ ಸರಿಸಿ,ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹ ಹೊರತೆಗೆಯಲಾಯಿತು. ಹೆದ್ದಾರಿ ಗಸ್ತು ವಾಹನ ಸಿಬ್ಬಂದಿಗಳು, ಸ್ಥಳೀಯರು ಸ್ಥಳದಲ್ಲಿದ್ದರು.. ಸಿಪಿಐ ಶ್ರೀಕಾಂತ ತೋಟಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿ. ಎಸ್ ಐ ಗಳಾದ ಉದ್ದಪ್ಪ ಧರೆಪ್ಪನವರ, ಸುನೀಲ ಹುಲ್ಲೊಳ್ಳಿ ,ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.
ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಮತ್ತಿತರರಿದ್ದು ಮೃತದೇಹವನ್ನು ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಹಕರಿಸಿದರು..ಅವಘಾತದಲ್ಲಿ ಮೃತಪಟ್ಟವ ಅದೇ ಲಾರಿಯ ಮಾಲಕ ಕಂ ಚಾಲಕ, ಪುಣಾ ಮೂಲದ ಕಿಶೋರ ದಾಮು ಸಾವಂತ (45 ) ಎನ್ನಲಾಗುತ್ತಿದ್ದು, ಅಪಘಾತದ ಘಟನೆ ಕುರಿತಂತೆ ಮತ್ತು ಮೃತ ವ್ಯಕ್ತಿಯ ಬಗ್ಗೆ ಪೊಲೀಸರಿಂದ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ