ಕುಮಟಾ: ತಾಲೂಕಿನ ಕಡ್ಲೆ ಅರಬ್ಬಿ ಸಮುದ್ರ ತೀರದಲ್ಲಿ ಸುಮಾರು 4 ಅಡಿ ಉದ್ದದ 30 ರಿಂದ 40 ವರ್ಷದ ಆಲಿವ್ ರಿಡ್ಲೆ ಆಮೆಯ ಕಳೇಬರಹ ಪತ್ತೆಯಾಗಿದೆ. ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಈ ಜಾತಿಯ ಆಮೆಗಳು ಆಳ ಸಮುದ್ರ ಮೀನುಗಾರಿಕೆಯಲ್ಲಿ ಅಪರೂಪಕ್ಕೆ ಮೀನುಗಾರಿಕಾ ಬೋಟ್‌ಗಳ ಬಲೆಯಲ್ಲಿ ಸಿಲುಕಿರುವ ಉದಾಹರಣೆಗಳಿವೆ. ಬಲೆಯಲ್ಲಿ ಸಿಲುಕುವ ಆಮೆಯನ್ನು ಮೀನುಗಾರರು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡುತ್ತಾರೆ. ಆದರೆ ಬಲೆಯ ದಾರಗಳು ಆಮೆಗಳ ಕುತ್ತಿಗೆಗೆ ಸಿಕ್ಕಿ ಸಾಯುವ ಸಾಧ್ಯತೆಗಳೂ ಇದ್ದು, ಇಂತವುಗಳಲ್ಲಿ ಕೆಲವೊಂದು ತೀರಕ್ಕೆ ತೇಲಿ ಬರುತ್ತದೆ.
ಕುಮಟಾದ ಸಹಾಯಕ ಅರಣ್ಯಾಧಿಕಾರಿಗಳಾದ ಲೋಹಿತ್ ಅವರು ಆಮೆಯ ಕಳೆಬರಹವನ್ನು ಗುರುತಿಸಿದ್ದು, ಇದು ಆಲಿವ್ ರಿಡ್ಲೆ ವರ್ಗಕ್ಕೆ ಸೇರಿದು. ಅರಬ್ಬಿ ಸಮುದ್ರ ತೀರದಲ್ಲಿ ಆಲಿವ್ ರಿಡ್ಲೆ ಆಮೆಗಳು ಹೇರಳ ಸಂಖ್ಯೆಯಲ್ಲಿದೆ. ಇದು ಕಡಲ ತೀರಕ್ಕೆ ಬಂದು ಮೊಟ್ಟೆ ಇಟ್ಟು ಹೋಗುತ್ತದೆ. ಅನಾಥ ಮೊಟ್ಟೆಗಳು ಸಿಕ್ಕಿದ್ದಲ್ಲಿ ಅರಣ್ಯ ಇಲಾಕೆ ಅದನ್ನು ರಕ್ಷಿಸಿ ಮರಿಮಾಡಿ ಸಮುದ್ರಕ್ಕೆ ಬಿಡಲಾಗುತ್ತದೆ. ಇದರ ಬಗ್ಗೆ ಇಲಾಖೆಯು ಸಾರ್ವಜನಿಕರಿಗೂ ತಿಳುವಳಿಕೆ ನೀಡುತ್ತದೆ ಎಂದು ತಿಳಿಸಿದರು.
ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ