ಮೀನಿಗೆ ಎದುರಾಗಿದೆ ಬರ: ಬಂದರಿನಲ್ಲಿ ಲಂಗರು ಹಾಕುತ್ತಿರುವ ಬೋಟಗಳು!

ಕಾರವಾರ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾದ ಬೆನ್ನಲ್ಲೇ ಇದೀಗ ಕಡಲೀನಲ್ಲಿಯೂ ಮತ್ಸ್ಯಕ್ಕೆ ಬರ ಎದುರಾಗಿದೆ. ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳುತ್ತಿದ್ದ ಬಹುತೇಕ ಬೋಟ್ ಗಳು ಮೀನಿಲ್ಲದೆ ಬರಿಗೈಯಲ್ಲಿ ಮರಳುವ ಕಾರಣ ಬೋಟಗಳನ್ನು ಲಂಗರು ಹಾಕತೊಡಗಿದ್ದು ಮೀನಿನ ದರ ಏರಿಕೆ ಕಾಣುವಂತಾಗಿದೆ.

ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ನಿರೀಕ್ಷೆಯಂತೆ ಸಮಯಕ್ಕೆ ಸರಿಯಾಗಿ ಆರಂಭವಾಗಿ ಬಹುತೇಕರು ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಮೀನುಗಾರಿಕಾ ಹಂಗಾಮು ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಕೂಡ ಮೀನುಗಾರಿಕೆ ಚೇತರಿಸಿಕೊಂಡಿಲ್ಲ. ಮೀನುಗಾರಿಕೆಗೆ ತೆರಳಿದ ಬೋಟ್‌ಗಳಿಗೆ ಲಾಭಕ್ಕಿಂತ ಕರ್ಚೆ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಮೀನುಗಾರಿಕೆ ಬಂದ್ ಮಾಡಲಾಗುತ್ತಿದೆ.

ಬೋಟ್ಗಳನ್ನು ಬಂದರುಗಳಲ್ಲಿ ಲಂಗರು ಹಾಕಲಾಗುತ್ತಿದೆ. ರಾಜ್ಯದಲ್ಲಿ ಕೃಷಿ ಕ್ಷೇತ್ರ ಬರದಿಂದ ತತ್ತರಿಸಿದಂತೆ ಇದೀಗ ಮೀನುಗಾರಿಕಾ ಕ್ಷೇತ್ರ ಕೂಡ ಮೀನಿಲ್ಲದೆ ಮತ್ಸ್ಯ ಕ್ಷಾಮ ಎದುರಿಸುತ್ತಿದೆ. ಕಳೆದ ವರ್ಷ ಉತ್ತಮ ಮೀನುಗಾರಿಕೆ ನಡೆಸಿದ್ದ ಪರ್ಶಿಯನ್ ಬೋಟ್‌ಗಳಿಗೂ ಕೂಡ ಇದೀಗ ಮೀನು ಸಿಗದಂತಾಗಿದೆ. ಇದರಿಂದ ಬಹುತೇಕರು ಬಂದರುಗಳಲ್ಲಿ ಬೋಟ್ ಲಂಗರು ಹಾಕುತ್ತಿದ್ದಾರೆ. ಲಂಗರು ಹಾಕಿದ ಬೋಟ್ ರೀಪೇರಿ ಬಲೇ ಜೋಪಾನ ಮಾಡುತ್ತಿದ್ದು, ಖಾಲಿ ಇರುವ ಕಾರ್ಮಿಕರಿಗೆ ಕೂಲಿ ಪಾವತಿ ಮಾಡುವುದಕ್ಕೂ ಮಾಲಕರು ಸಂಕಷ್ಟ ಎದುರಿಸಬೇಕಾಗಿದೆ ಎನ್ನುತ್ತಾರೆ ಮೀನುಗಾರರರು.

ಇನ್ನು ಬಹುತೇಕ ಮೀನುಗಾರರು ಸಾಲ ಮಾಡಿಕೊಂಡಿದ್ದು ಸಾಲ ತುಂಬಲು ಸಾಧ್ಯವಾಗದ ಸ್ಥಿತಿ ಇದೆ. ಇದೀಗ ಮಾರ್ಚ್ ಅಂತ್ಯವಾದ ಕಾರಣ ಬ್ಯಾಂಕನವರು ನಿತ್ಯವೂ ಕರೆ ಮಾಡುತ್ತಿದ್ದಾರೆ. ಮೀನುಗಾರರು ಮತ್ತೆ ಸಾಲ ಕೇಳಿದರೇ ಬ್ಯಾಂಕಗಳು ನೀಡುತ್ತಿಲ್ಲ. ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಬಹುತೇಕ ಮೀನುಗಾರರ ಮನೆ ಇರುವ ಕಾರಣ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಅಲ್ಲದೆ ಕೃಷಿ ಕ್ಷೇತ್ರವನ್ನು ಬರ ಎಂದು ಘೋಷಣೆ ಮಾಡಿದಂತೆ ಮೀನುಗಾರಿಕಾ ಕ್ಷೇತ್ರದಲ್ಲಿಯೂ ಎದುರಾಗಿರುವ ಬರಕ್ಕೆ ಪರಿಹಾರವಾಗಿ ಮೀನುಗಾರರ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದು ಮೀನುಗಾರರು ಆಗ್ರಹಿಸಿದರು.

ಒಟ್ಟಾರೆ ಕೃಷಿ ಕ್ಷೇತ್ರದಂತೆ ಮೀನುಗಾರಿಕಾ ಕ್ಷೇತ್ರ ಕೂಡ ಬರದಿಂದ ತತ್ತರಿಸತೊಡಗಿದ್ದು ಮೀನುಗಾರರು ಬೋಟ್ ನಡೆಸಲಾಗದೆ ಅವಧಿಗೂ ಪೂರ್ಣದಲ್ಲಿಯೇ ಬಂದರುಗಳಲ್ಲಿ ಲಂಗರು ಹಾಕತೊಡಗಿವೆ.‌ ಸರ್ಕಾರ ಈ ಬಗ್ಗೆ ಗಮನ‌ಹರಿಸಿ ಕೃಷಿಕರಂತೆ ಮೀನುಗಾರಿಕಾ ಕ್ಷೇತ್ರವನ್ನು ಮತ್ಸ್ಯಕ್ಷಾಮ ಎಂದು ಘೋಷಣೆ ಮಾಡಿ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version